ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಲಹೆ

0

ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಲಹೆ
ಸೋಯಾಅವರೆಯು ಒಂದು ಪ್ರಮುಖ ಎಣ್ಣೆಕಾಳಿನ ಬೆಳೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಸೋಯಾಅವರೆಯ ಬಿತ್ತಿನೆಯನ್ನು ಕೈಗೊಂಡಿದ್ದು, ಬೈಲಹೊಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ಈ ಬೆಳೆಯು ಕಾಂಡಕೊರೆಯುವ ನೊಣದ ಬಾಧೆಗೆ ತುತ್ತಾಗಿದ್ದು ಕಂಡು ಬಂದಿದೆ. ಕಾರಣ ಈ ಸದರಿ ವರ್ಷದಲ್ಲಿಯೂ ಇದರ ಉಪಟಳ/ಹಾವಳಿ ಹೆಚ್ಚಾಗುವ ಸಾಧ್ಯತೆ ಇದ್ದು; ಇದನ್ನು ಹತೋಟಿ ಮಾಡುವುದು ಬಹಳ ಮುಖ್ಯ.


ಈ ನೊಣದ ಹಾವಳಿಯಿಂದ ಶೇ. 95 ರಷ್ಟು ಹಾನಿಯುಂಟಾಗುತ್ತದೆ. ಬೆಳೆಯು 10-15 ದಿವಸವಿದ್ದಾಗ ಹೆಣ್ಣು ನೊಣವು ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯೊಡೆದ ನಂತರ ಸುರಂಗ ಮಾಡಿ ಕಾಂಡವನ್ನು ಪ್ರವೇಶಿಸುತ್ತವೆ. ಇದರಿಂದ ಬೆಳೆಗೆ ಆಹಾರ ಸಾಗಾಣಿಕೆ ಕುಂಠಿತಗೊಂಡು ಎಲೆಗಳು ಒಣಗುತ್ತವೆ. ಬೆಳೆಯು ಚಿಕ್ಕದಿದ್ದಾಗ ಈ ಕೀಟದಿಂದ ಹಾನಿಯಾದ ಭಾಗದಿಂದ ಮೇಲಿನ ಭಾಗವು ಒಣಗಲಾರಂಭಿಸುತ್ತದೆ.
ನಿರ್ವಹಣಾ ಕ್ರಮಗಳು:
1. ಬೀಜಗಳನ್ನು ಬಿತ್ತುವ ಮುನ್ನ 4 ಮಿಲೀ ಪ್ರತಿ ಕಿ.ಗ್ರಾಂ ಬೀಜಕ್ಕೆ ಸಯಾಂಟ್ರಿನಿಪ್ರೋಲ್ 19.8% ಎಫ್.ಎಸ್ ಮತ್ತು ಥಯಾಮಿಥಾಕ್ಸಾಮ್ 19.8% ಎಫ್.ಎಸ್. ಕೀಟನಾಶಕದಿಂದ ಬೀಜಗಳನ್ನು ಉಪಚರಿಸಿ ಬಿತ್ತನೆ ಕೈಗೊಳ್ಳಬೇಕು (60 ಮಿಲೀ. ನೀರಿಗೆ 32 ಮಿಲೀ. ಕೀಟನಾಶಕ ಬಳಸಬೇಕು).
2. ಬಿತ್ತಿದ 15-20 ದಿನಗಳ ನಂತರ 0.3 ಗ್ರಾಂ ಥಯಾಮಿಥಾಕ್ಸಾಮ್ 25 ಡಬ್ಲೂಜಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
3. ಬಾಧೆಯ ತೀವ್ರತೆಯನ್ನು ನೋಡಿಕೊಂಡು 10 ದಿವಸಗಳ ಅಂತರದಲ್ಲಿ ಇನ್ನೊಂದು ಸಿಂಪರಣೆ ಕೈಗೊಳ್ಳುವುದು ಸೂಕ್ತ.
4. ಕೀಟಬಾಧೆಗೆ ತುತ್ತಾದ ಗಿಡಗಳನ್ನು ಬೇರು ಸಮೇತ ಕಿತ್ತು ಮಣ್ಣಿನಲ್ಲಿ ಹೂಳಬೇಕು.
5. ಜೊತೆಗೆ ಉಳಿದ ಜೈವಿಕ ಗೊಬ್ಬರ ಹಾಗೂ ಶಿಲೀಂದ್ರನಾಶಕದೊಂದಿಗೆ (ಕಾರ್ಬಾಕ್ಸಿನ್ ಅಥವಾ ಥೈರಾಮ್) ಬೀಜೋಪಚಾರ ಮಾಡುವುದು ಸೂಕ್ತ.
ಕಿತ್ತೂರಿನ ಭಾಗಗಳಲ್ಲಿ ಸೋಯಾಅವರೆ ಬೆಳೆಯು ಬೀಜ ಮತ್ತು ಸಸಿ ಕೊಳೆ ಹಾಗೂ ಬುಡಕೊಳೆ ರೋಗಕ್ಕೆ ತುತ್ತಾಗಿದ್ದು, ಇದರ ನಿರ್ವಹಣೆಗಾಗಿ ಇನ್ನು ಮುಂದೆ ಬಿತ್ತುವ ರೈತರು ಪ್ರತಿ ಕಿ.ಗ್ರಾಂ. ಬೀಜಕ್ಕೆ 3.0 ಗ್ರಾಂ ಥೈರಾಮ್ 75 ಡಬ್ಲೂಪಿ ಅಥವಾ 2.0 ಗ್ರಾಂ. ಕಾರ್ಬಾಕ್ಸಿನ್ 75 ಡಬ್ಲೂಪಿ ನಿಂದ ಬೀಜೋಪಚಾರ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರನ್ನು ಸಂಪರ್ಕಿಸಬಹುದು.

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');