ಕಲಿಯುಗದ ಏಕಲವ್ಯರು ಮತ್ತು ಅಥಿತಿ ಶಿಕ್ಷಕರೆಂಬ ದ್ರೋಣಾಚಾರ್ಯರು

0

ಅವತ್ತು ಹೈ ಸ್ಕೂಲ್ ಮಾಸ್ತರ ಒಬ್ಬರು ಭಾಷಣ ಭಾಳ ಚಲೋ ಮಾಡ್ತಿ ನೋಡು ತಮ್ಮ ವೆರಿಗುಡ್ ಅಂದಿದ್ದಕ್ಕೆ ಅದನ್ನೆ ರೂಢಿಸಿಕೊಂಡ ಹುಡುಗನೊಬ್ಬ ದೊಡ್ಡ ರಾಜಕಾರಣಿಯಾಗಿ ಸಚೀವನಾಗಿಬಿಟ್ಟ.

ನಿಮ್ಮ ಹುಡುಗ ಭಾಳ ಶ್ಯಾಣ್ಯಾ ಇದ್ದಾನ ಹಿಂಗ..ಓದಿದ್ರ ಡಾಕ್ಟರ್ ಇಲ್ಲ ಇಂಜನಿಯರ್ ಆಗ್ತಾನ ಅಂದಿದ್ದಕ್ಕೆ ಎಷ್ಟೋ ಜನ ಐಎಎಸ್,ಐಪಿಎಸ್ ಗಳೂ ಆದರು.ಆದರೆ ಹಾಗೆ ಹೇಳಿದ ಮೇಷ್ಟ್ರು ಮಾತ್ರ ಅದೆ ಹರಿದ ಕಾಲರಿನ,ಬಣ್ಣಮಾಸಿದ ಬಟ್ಟೆಯ ಒಳಗೆ ಸಣಕಲು ದೇಹದ ಜೀವವಾಗಿ ಉಳಿದು ಬಿಟ್ಟರು.
ವರ್ಣ ಮಾತ್ರಂ ಕಲಿಸಿದಾತಂ ಗುರು ಎನ್ನುವ ಗತಕಾಲದ ವೈಭವಗಳು ಅದು ಯಾವಾಗಲೋ ಮುಗಿದು ಹೋಗಿದೆ.ತೀರ ಇಪ್ಪತ್ತು ಇಪ್ಪತ್ತೊಂದನೆಯ ಶತಮಾನದಲ್ಲಿ ಇರುವ ನಾವು ಸಂಬಂಧಗಳ ಬೆಸುಗೆಗಳನ್ನು ಒಂದೊಂದೇ ಕಳಚುತ್ತ ಬೀಗದ ಕೈ ಇಲ್ಲದ ಬೀಗದಂತೆ ಉಪಯೋಗಕ್ಕೆ ಬಾರದ ಉಸಿರಾಡುವ ಶವಗಳಾಗುತ್ತಿರುವದು ಇಂದಿನ ವಿಪರ್ಯಾಸಗಳಲ್ಲಿ ಒಂದು.
ಈಗಿನ ದಿನಗಳಲ್ಲಿ ಎಲ್ಲರೂ ಏಕಲವ್ಯರಂತೆಯೇ ಮೊಬೈಲ್ ಅಥವಾ ಆನ್ ಲೈನ್ ತರಗತಿಗಳಲ್ಲಿ ಓದುತ್ತ ಗುರುವಿಲ್ಲದ ವಿದ್ಯೆಯನ್ನು ಕಲಿಯುತ್ತ ಗುರಿಯಿಲ್ಲದ ಬದುಕು ನಡೆಸಲು ಸಿದ್ದವಾಗುತ್ತಿರುವ ಕಾಲಘಟ್ಟದಲ್ಲಿ ಸಿಲುಕಿ ನಲುಗಿದ ಶಿಕ್ಷಕರ ಬಗ್ಗೆ ಒಂದಷ್ಟು ವಿಷಯಗಳನ್ನು ಚರ್ಚಿಸೋಣ.
ಆ ಕಾಲದ ಮೇಷ್ಟ್ರುಗಳು ಸೈಕಲ್ ಹತ್ತಿ ಸವಾರಿ ಹೊರಟರೆ ವಿನಯದಿಂದ ನಿಂತು ಕಾಲ ಚಪ್ಪಲಿ ಕಳಿದು ಕರಮುಗಿದು ತಲೆಬಾಗಿ ನಮಸ್ಕರಿಸುತ್ತಿದ್ದ ನಮ್ಮ ಸಂಸ್ಕಾರಗಳು ನಮ್ಮ ಮಕ್ಕಳಿಗೆ ಬರಲೇ ಇಲ್ಲ ಅನ್ನುವದಾದರೆ ಎಡವಿದ್ದು ನಾವೇ ಅನ್ನಿಸುತ್ತದೆ.ಈಗ ಸ್ಕೂಟಿ ಏರಿ ಬರುವ ಟೀಚರುಗಳು,ಕಾರಲ್ಲಿ ಬರುವ ಮೇಷ್ಟ್ರುಗಳು ಕೂಡ ಮೊದಲಿನಂತೆ ಉಳಿಯಲೇ ಇಲ್ಲ.
ಹೋಮ್ ವರ್ಕ ಮಾಡಿಕೊಂಡು ಬಂದ ಮಗುವಿನ ನೆತ್ತಿ ನೇವರಿಸಿ ವೆರಿಗುಡ್ ಅಂತ ಮಕ್ಕಳಿಲ್ಲದ ಮೇಷ್ಟ್ರು ಗಲ್ಲ ಹಿಂಡಿದರೆ ಬೇರೆಯದೆ ರೀತಿಯ ಗುಲ್ಲು ಹರಡುವ ಕಾಲದಲ್ಲಿ ಕಾದ ಕುಲುಮೆಗೆ ಬಿದ್ದ ಕಬ್ಬಿಣದಂತೆ ಶಿಕ್ಷಕರ ಜೀವನ ಅಧಃಪತನದತ್ತ ಸಾಗುತ್ತಿದೆ.
ಸಂಕ್ರಾಂತಿಯ ದಿನ ಮನೆಗೆ ಹೋಗಿ ಎಳ್ಳುಬೆಲ್ಲ ಕೊಟ್ಟ ಕ್ಷಣ ನಿಮ್ಮ ಬಾಳು ಬಂಗಾರವಾಗಲಿ ಅಂತ ಹರಸುತ್ತಿದ್ದ ಬಡ ಮತ್ತು ಮಧ್ಯಮವರ್ಗದ ಪ್ರೈಮರಿ ಶಾಲೆಯ ಶಿಕ್ಷಕರ ಬದುಕು ಮಾತ್ರ ಇಂದಿಗೂ ಬಂಗಾರವಾಗಲೇ ಇಲ್ಲ.ಛಡಿ ಛಂ…ಛಂ…ವಿದ್ಯೆ ಘಂ ಘಂ ಅನ್ನುವ ಕಾಲ ಈಗ ನೆನಪಾದರೆ ಅದೆಲ್ಲ ಇತಿಹಾಸವೇನೋ ಅನ್ನಿಸುವಷ್ಟರ ಮಟ್ಟಿಗೆ ಬದಲಾದ ನಮ್ಮೊಳಗೆ ಆಗಿನ ಶಿಕ್ಷಕರು ತುಂಬಿದ ಅಂತಃಕರಣ,ಜೀವನ ಪ್ರೀತಿ,ಮತ್ತು ನಾಳೆಯ ಭರವಸೆಗಳು ಇಂದಿನ ಮಕ್ಕಳಲ್ಲಿ ಕಳೆದುಹೋಗುತ್ತಿದೆ.ಇದಕ್ಕೆಲ್ಲ ಕಾರಣ  ಅಧುನಿಕತೆಯ ಮಾಯೆಯೋ,ತಂತ್ರಜ್ಞಾನದ ಛಾಯೆಯೋ ಅರಿಯಲಾರದಷ್ಟು ಕಲಸು ಮೇಲೋಗರವಾಗುತ್ತಿದೆ.
ಇದ್ದ ಎರಡು ಮೂರು ಜೊತೆ ಬಟ್ಟೆಗಳನ್ನು ನೀಟಾಗಿ ಇನ್ ಷರ್ಟ ಮಾಡಿಕೊಂಡು ಕ್ರಾಪು ಮಾಡಿಸಿದ ಕೂದಲಿಗೆ ಕೊಬ್ಬರಿ ಎಣ್ಣೆ ಮೆತ್ತಿಕೊಂಡು,ತಲೆಯ ಒಂದು ಮಗ್ಗುಲಿನಲ್ಲಿ ಬೈತಲೆ ತೆಗೆದು ಬಾಚಿಕೊಂಡು ಬರುತ್ತಿದ್ದ ಶಿಕ್ಷಕರು ಈಗೀಗ ಜಮಾನಾ ಬದಲ್ ರಹಾ ಹೇ ಅಂತಲೋ,ಕಾಲಕ್ಕೆ ತಕ್ಕಂತೆ ಬದುಕುವ ಪ್ರಯತ್ನದ ಫಲವಾಗಿಯೋ ಜೀನ್ಸ ಮತ್ತು ಟೀ ಷರ್ಟ ತೊಟ್ಟುಕೊಂಡು ಬರತೊಡಗಿದ ಮೇಲೆ ಪರೀಕ್ಷೆ ಯಲ್ಲಿ ತೆಗೆದ ಅಂಕಗಳು ಮತ್ತು ಗ್ರೇಡುಗಳೆ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾನದಂಡಗಳಾದ ಮೇಲೆ ಮತ್ತು ಖಾಸಗಿ ಶಾಲೆಗಳಲ್ಲಿ ಹಣವೇ ದೊಡ್ಡಪ್ಪ ಅನ್ನಿಸಿಕೊಂಡ ಮೇಲೆ ಈ ಸಮಾಜದಲ್ಲಿ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ.?
ತೀರ ಇತ್ತೀಚೆಗೆ ಮೂವತ್ತು ನಲವತ್ತು ಅಡಿಅಗಲದ ಸೈಟೊಂದನ್ನು ಬ್ಯಾಂಕಿನ ಸಾಲದಲ್ಲಿ ಖರೀದಿಸಿದ ಅಥಿತಿ ಶಿಕ್ಷಕರೊಬ್ಬರು ಲಾಕ್ ಡೌನ್ ಸಮಯದಲ್ಲಿ ಬ್ಯಾಂಕಿನ ಕಂತು ಕಟ್ಟಲಾಗದೆ,ಸಂಸಾರದ ಸಂಕಷ್ಟಗಳನ್ನೂ ಸರಿದೂಗಿಸಲಾಗದೆ ಬಂದಷ್ಟು ರೇಟಿಗೆ ಮಾರಿ ಕೈ ತೊಳೆದುಕೊಂಡ ಉದಾಹರಣೆ ಒಂದು ನನ್ನ ಕಣ್ಣ ಮುಂದೆ ಅಚ್ಚಳಿಯದೆ ಉಳಿದಿದೆ.
ಎಷ್ಟೇ ಆದರೂ ಹೇಳಿದ್ದು ಆನ್ ಲೈನ್ ಕ್ಲಾಸ್ ಅಲ್ಲವಾ ಅಂತ ಮಕ್ಕಳ ಪೋಷಕರು ಫೀಜು ಕಡಿಮೆ ಮಾಡಿಸುವ ಪ್ರಯತ್ನಗಳು ಖಾಸಗಿ ಶಾಲೆಗಳ ಅಥಿತಿ ಶಿಕ್ಷಕರ ಜೀವಕ್ಕೆ ಹೊರೆಯಾಗುತ್ತಿದೆ.
ಇನ್ನೂ ಹಲವು ಕಡೆ ಹಣದಾಹಿ ಸಂಸ್ಥೆಗಳು ಪೋಷಕರಿಂದ ಹಣ ಪೀಕಿದರೂ ಕೂಡ ಅಥಿತಿ ಶಿಕ್ಷಕರ ಸಂಬಳ ಬಾಕಿ ಉಳಿಸಿಕೊಂಡು ಕಬ್ಬಿನ ಜಲ್ಲೆಯಿಂದ ರಸ ಹೀರಿ ಬೀಸಾಡುವಂತೆ ಅವರು ಕಲಿಸುವ ಚಾತುರ್ಯಗಳನ್ನು ವಿಡಿಯೋ ಮಾಡಿಕೊಂಡು ಹೊರ ದಬ್ಬತೊಡಗಿವೆ.
ಕೊರೊನಾ ಎಂಬ ಮಹಾಮಾರಿಯಿಂದ ಉಂಟಾದ ಲಾಕ್ ಡೌನ್ ಅದು ಯಾವ ಮಟ್ಟಿಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ಬದುಕಿಗೆ ಬರೆ ಎಳೆದು ಬಿಟ್ಟಿದೆ ಅಂದರೆ ಬಿ ಎ-ಬಿಎಡ್,ಎಮ್ ಎ- ಪಿ ಎಚ್ ಡಿ ,ಮುಗಿಸಿದ ಹಲವು ಪ್ರತಿಭಾವಂತ ಶಿಕ್ಷಕರು ಅನುದಾನಿತ ಶಾಲೆ ಮತ್ತು ಕಾಲೇಜುಗಳ ಆಡಳಿತ ಮಂಡಳಿಗಳ ಕೈ ಬಿಸಿ ಮಾಡಲಾಗದೆ ತಮ್ಮ ಕೆಲಸದ ಖಾಯಮ್ಮಾತಿ ಭಾಗ್ಯ ದಿಂದ ಅವಕಾಶ ವಂಚಿತರಾಗಿ ಬಟ್ಟೆ ಅಂಗಡಿಯಲ್ಲೋ,ಯಾವುದೋ ಹೋಟೆಲಿನಲ್ಲೊ,ಖಾಸಗಿ ಫೈನಾನ್ಸಿನಲ್ಲೋ,ತೀರ ಕಟ್ಟ ಕಡೆಗೆ ತಳ್ಳುವ ಗಾಡಿಯಲ್ಲಿ ಬಾಳೆಹಣ್ಣು ತರಕಾರಿ ಮಾರುವಾಗಲೋ,ಅಥವಾ ಬಾಡಿಗೆಯ ಆಟೋ ಚಲಾಯಿಸುವಾಗಲೋ   ಗುರುತು ಹಿಡಿದ ಹಳೆಯ ಶಿಷ್ಯರ ಎದುರು ಮುಜಗುರಕ್ಕೆ ಈಡಾಗುತ್ತಿದ್ದಾರೆ.

ಕಲಿಯುಗದ ಏಕಲವ್ಯರು ಮತ್ತು ಅಥಿತಿ ಶಿಕ್ಷಕರೆಂಬ ದ್ರೋಣಾಚಾರ್ಯರು

 

ಖಾಸಗಿ ಶಾಲೆಗಳ ತಿಂಗಳ ಸಂಬಳ ನಂಬಿ ಬದುಕಿದ ಅಥಿತಿ ಶಿಕ್ಷಕರ ಬದುಕು ಬಾಣಲೆಯಿಂದ ಜಾರಿ ಬೆಂಕಿಗೆ ಬಿದ್ದ ನೆಲಗಡಲೆಯಂತೆ ಆಗಿದ್ದು,ಸ್ವಾರ್ಥಿಗಳಾಗಿ ಬದುಕದೆ ಅಕ್ಷರಗಳನ್ನು ನಿಸ್ವಾರ್ಥವಾಗಿ ಶಾಲೆಯ ಮಕ್ಕಳಿಗೆ ಧಾರೆ ಎರೆದು ಇಂಜನೀಯರ್,ಡಾಕ್ಟರ್, ಪೋಲಿಸ್,ತಹಶಿಲ್ದಾರ,ದೊಡ್ಡ ಬ್ಯುಜಿನೆಸ್ ಮನ್, ಹೀಗೆ ತಮ್ಮ ಶಿಷ್ಯ ಬಳಗವನ್ನು ದಡ ಸೇರಿಸಿದ ಶಿಕ್ಷಕರ ಜೀವಗಳು ಬದುಕೆಂಬ ಸಾಗರದಲ್ಲಿ ಮುಳುಗಿ ಮರೆಯಾಗದಿರಲಿ.
ಶಾಲೆಯ ಕಪ್ಪು ಬೋರ್ಡುಗಳ ಮೇಲೆ ಬಿಳಿ ಚಾಕ್ ಪೀಸಿನಿಂದ ಇಂಗ್ಲೀಷ್ ಭಾಷೆಯ  ವ್ಯಕಾಬುಲರಿ ಅಂತಲೋ,ವಿಜ್ಞಾನದ ಆಹಾರ ಸರಪಳಿಯ ಬಗ್ಗೆಯೋ ಅಥವಾ ಮೆಥಾಮೆಟಿಕ್ಸ ನ ಸಿಗ್ಮಾ ಮತ್ತು ಅಲ್ಪಾಬೇಟಾಗಳನ್ನೋ,ಇತಿಹಾಸದ ಪಾಠಗಳನ್ನು ಹೇಳುತ್ತ ಭಾರತದ ಗತವೈಭವವನ್ನು ಕಣ್ಣೆದುರಿಗೆ ತರುತ್ತಲೋ, ನಮ್ಮ ಮೆದುಳುಗಳಲ್ಲಿ ಅಕ್ಷರಗಳನ್ನು ದಾಖಲಿಸಿದ ಗುರುಗಳಿಗೆ ನಾವು ಏನನ್ನಾದರೂ ಮರಳಿ ಕೊಡಬಹುದು ಅನ್ನುವದಾದರೆ ಅದು ಒಂದಷ್ಟು ಕಾಳಜಿ ಮತ್ತು ಪ್ರೀತಿ,ಗೌರವದ ಜೊತೆಗೆ ಒಂದಷ್ಟು ಗೌರವ ಧನ ಅನ್ನುವದು ನನ್ನ ಅಭಿಪ್ರಾಯ.
ಇದಕ್ಕೆಲ್ಲ ಸರ್ಕಾರವೇ ಏನಾದರೂ ಮಾಡಲಿ ಅಂತ ಕಾಯುತ್ತ ಕೂಡುವ ಬದಲು ಅಕ್ಷರ ಕಲಿಸಿದ ಗುರುವಿನ ಮೇಲಿನ ಒಂದಷ್ಟು ಅಕ್ಕರೆಯಿಂದ ನಾವೇ ಏನಾದರೂ ಮಾಡಬಹುದಾ?? ಒಮ್ಮೆ ಯೋಚಿಸಿ ನೋಡಿ…
ದೀಪಕ ಶಿಂಧೇ
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');