ಕೃಷಿ ವಿಜ್ಞಾನಿ ಮತ್ತು ಕೃಷಿ ಅಧಿಕಾರಿಗಳಿಂದ ಮುಂಗಾರು ಬೆಳೆಗಳ ಪೀಡೆ ಸರ್ವೇಕ್ಷಣಾ ಸಮೀಕ್ಷೆ

0

ಕೃಷಿ ವಿಜ್ಞಾನಿ ಮತ್ತು ಕೃಷಿ ಅಧಿಕಾರಿಗಳಿಂದ ಮುಂಗಾರು ಬೆಳೆಗಳ ಪೀಡೆ ಸರ್ವೇಕ್ಷಣಾ ಸಮೀಕ್ಷೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಹಾಗೂ ಸವದತ್ತಿ ತಾಲೂಕಿನ ಹೊಸುರು, ಮರಕುಂಬಿ ಗ್ರಾಮಗಳಲ್ಲಿ ಬೆಳೆದಂತಹ ಮುಂಗಾರು ಬೆಳೆಗಳ ಕ್ಷೇತ್ರಗಳಿಗೆ ಕೆಎಲ್‍ಇ ಸಂಸ್ಥೆಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ವಿಜ್ಞಾನಿಗಳು ಹಾಗೂ ಉಪ ಕೃಷಿ ನಿರ್ದೇಶಕರಾದ ಶ್ರೀ ಹೆಚ್. ಡಿ. ಕೋಳೇಕರ ಹಾಗೂ ಕೃಷಿ ಅಧಿಕಾರಿಗಳು ದಿನಾಂಕ 15.06.2021 ಭೇಟಿ ನೀಡಿ ಪೀಡೆ ಸರ್ವೇಕ್ಷಣಾ ಸಮೀಕ್ಷೆಯನ್ನು ಕೈಗೊಳ್ಳಲಾಯಿತು ಹಾಗೂ ವಿವಿಧ ಬೆಳೆಗಳಲ್ಲಿ ಕಂಡು ಬಂದಂತಹ ಪೀಡೆಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಈ ಕೆಳಗಿನ ಸಲಹೆಗಳನ್ನು ನೀಡಿದರು.
ಸೋಯಾಅವರೆ
ಕಾಂಡಕೊರೆಯುವ ನೊಣ
ನೊಣವು ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯೊಡೆದ ನಂತರ ಸುರಂಗ ಮಾಡಿ ಕಾಂಡವನ್ನು ಪ್ರವೇಶಿಸುತ್ತವೆ. ಇದರಿಂದ ಬೆಳೆಗೆ ಆಹಾರ ಸಾಗಾಣಿಕೆ ಕುಂಠಿತಗೊಂಡು ಎಲೆಗಳು ಒಣಗುತ್ತವೆ. ಬೆಳೆಯು ಚಿಕ್ಕದಿದ್ದಾಗ ಈ ಕೀಟದಿಂದ ಹಾನಿಯಾದ ಭಾಗದಿಂದ ಮೇಲಿನ ಭಾಗವು ಒಣಗಲಾರಂಭಿಸುತ್ತದೆ.
ನಿರ್ವಹಣಾ ಕ್ರಮಗಳು:
1. ಬೀಜಗಳನ್ನು ಬಿತ್ತುವ ಮುನ್ನ 4 ಮಿಲೀ ಪ್ರತಿ ಕಿ.ಗ್ರಾಂ ಬೀಜಕ್ಕೆ ಸಯಾಂಟ್ರಿನಿಪ್ರೋಲ್ 19.8% ಎಫ್.ಎಸ್ ಮತ್ತು ಥಯಾಮಿಥಾಕ್ಸಾಮ್ 19.8% ಎಫ್.ಎಸ್. ಕೀಟನಾಶಕದಿಂದ ಬೀಜಗಳನ್ನು ಉಪಚರಿಸಿ ಬಿತ್ತನೆ ಕೈಗೊಳ್ಳಬೇಕು (60 ಮಿಲೀ. ನೀರಿಗೆ 32 ಮಿಲೀ. ಕೀಟನಾಶಕ ಬಳಸಬೇಕು).
2. ಬಿತ್ತಿದ 15-20 ದಿನಗಳ ನಂತರ 0.3 ಗ್ರಾಂ ಥಯಾಮಿಥಾಕ್ಸಾಮ್ 25 ಡಬ್ಲೂಜಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
3. ಬಾಧೆಯ ತೀವ್ರತೆಯನ್ನು ನೋಡಿಕೊಂಡು 10 ದಿವಸಗಳ ಅಂತರದಲ್ಲಿ ಇನ್ನೊಂದು ಸಿಂಪರಣೆ ಕೈಗೊಳ್ಳುವುದು ಸೂಕ್ತ.
4. ಕೀಟಬಾಧೆಗೆ ತುತ್ತಾದ ಗಿಡಗಳನ್ನು ಬೇರು ಸಮೇತ ಕಿತ್ತು ಮಣ್ಣಿನಲ್ಲಿ ಹೂಳಬೇಕು.
5. ಜೊತೆಗೆ ಉಳಿದ ಜೈವಿಕ ಗೊಬ್ಬರ ಹಾಗೂ ಶಿಲೀಂದ್ರನಾಶಕದೊಂದಿಗೆ (ಕಾರ್ಬಾಕ್ಸಿನ್ ಅಥವಾ ಥೈರಾಮ್) ಬೀಜೋಪಚಾರ ಮಾಡುವುದು ಸೂಕ್ತ.
ಸ್ಪೋಡಾಪ್ಟೆರಾ ಕೀಡೆ
ಮರಿ ಕೀಡೆಗಳು ಮೊದಲು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಕೀಡೆಗಳು ದೊಡ್ಡವಾದಂತೆ ಇಡೀ ಎಲೆಗಳನ್ನು ಕತ್ತರಿಸಿ ತಿನ್ನುತ್ತವೆ.
ನಿರ್ವಹಣೆ: 2 ಗ್ರಾಂ ಮೆಟರೈಜಿಯಂ ರಿಲೈ ಶಿಲೀಂದ್ರವನ್ನು ಅಥವಾ 0.5 ಮಿಲೀ. ಲ್ಯಾಂಬ್ಡಾ ಸೈಲೋಥ್ರೀನ್ 5 ಇ.ಸಿ. ಅಥವಾ ಇ ಮಿ.ಲೀ. ಬಿ.ಟಿ. ದುಂಡಾಣು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕೀಟದ ಸಮೀಕ್ಷೆ ಮಾಡಲು 30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 6 ಸ್ಪೋಡಾಪ್ಟೆರಾ ಮೋಹಕ ಬಲೆಗಳನ್ನು ಬೆಳೆಗಿಂತ ಒಂದು ಅಡಿ ಎತ್ತರದಲ್ಲಿ ನೇತು ಹಾಕಬೇಕು.
ನೀಲಿ ದುಂಬಿ ಹತೋಟಿಗಾಗಿ 2 ಮಿ.ಲೀ. ಕ್ವಿನಾಲ್‍ಫಾಸ್ ಅಥವಾ 0.5 ಮಿ.ಲೀ. ಫ್ಲೂಬೆಂಡಿಮೈಡ್ 20% ಡಬ್ಲೂ.ಜಿ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಬೀಜ ಮತ್ತು ಸಸಿ ಕೊಳೆ ಹಾಗೂ ಬುಡ ಕೊಳೆ ರೋಗ
ಸೋಯಾಅವರೆ ಬೆಳೆಯು ಬೀಜ ಮತ್ತು ಸಸಿ ಕೊಳೆ ಹಾಗೂ ಬುಡಕೊಳೆ ರೋಗಕ್ಕೆ ತುತ್ತಾಗಿದ್ದು, ಇದರ ನಿರ್ವಹಣೆಗಾಗಿ ಇನ್ನು ಮುಂದೆ ಬಿತ್ತುವ ರೈತರು ಪ್ರತಿ ಕಿ.ಗ್ರಾಂ. ಬೀಜಕ್ಕೆ 3.0 ಗ್ರಾಂ ಥೈರಾಮ್ 75 ಡಬ್ಲೂಪಿ ಅಥವಾ 2.0 ಗ್ರಾಂ. ಕಾರ್ಬಾಕ್ಸಿನ್ 75 ಡಬ್ಲೂಪಿ ನಿಂದ ಬೀಜೋಪಚಾರ ಮಾಡಬೇಕು ಮತ್ತು ಈಗಾಗಲೇ ತುತ್ತಾದ ಸಸಿಗಳ ಬುಡಕ್ಕೆ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂಪಿ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುರಿಯಬೇಕು.
ಹೆಸರು: ಹಳದಿ ನಂಜುರೋಗ ಕಂಡು ಬಂದಿದ್ದು, ಬೆಳೆಯ 60-65 ದಿವಸಗಳ ಮೊದಲೆ ಈ ರೋಗ ಬಂದರೆ, ಇಳುವರಿಯಲ್ಲಿ ಕುಂಠಿತ ಆಗುವ ಸಂಭವ ಇದೆ. ಹಳದಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಕಾಣಿಸಿಕೊಂಡಿದ್ದು, ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
ರೋಗಕಾರಕ: ಮೂಂಗ್ ಬೀನ್ ಯೆಲ್ಲೊ ಮೊಸಾಯಿಕ್ ವೈರಸ್ ಬೆಮಿಸಿಯಾ ತಬಾಕಿ ಎಂಬ ಬಿಳಿ ನೊಣಗಳ ಮೂಲಕ ಹರಡುತ್ರದೆ ಈ ನಂಜು ರೋಗವು ಹೆಸರು, ಉದ್ದು, ಸೋಯಾಅವರೆ ಮುಂತಾದ ಬೇಳೆ ಕಾಳು ಬೆಳೆಗಳಲ್ಲಿ ಕಂಡುಬರುತ್ತದೆ.
ನಿರ್ವಹಣಾ ಕ್ರಮಗಳು: ಪ್ರಾರಂಭದ ಹಂತದಲ್ಲಿಯೇ ರೋಗ ಬಂದ ಸಸ್ಯಗಳನ್ನು ಗುರುತಿಸಿ, ಕಿತ್ತು ನಾಶಪಡಿಸಬೇಕು. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಬೆಳೆಗೆ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಆಕ್ಸಿಡೆಮಿಟಾನ್ ಮಿಥೈಲ್ 25 ಇ.ಸಿ. ಅಥವಾ ಥಯಾಮೆಥಾಕ್ಸಾಮ್ 0.25 ಗ್ರಾಂ ಮತ್ತು ಮೆಗ್ನೇಷಿಯಂ ಸಲ್ಫೇಟ್ 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡಬೇಕು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');