ಮನೆಗೊಂದು ಹಣ್ಣಿನ ಗಿಡ’ ಎನ್ನುವ ವಿನೂತನ ಯೋಜನೆ ಮಾಡಿ ಉಚಿತವಾಗಿ ಗಿಡ ವಿತರಿಸುತ್ತಿರುವುದು ಶ್ಲಾಘನೀಯ

0

ಬೆಳಗಾವಿ-ಜೂನ್-17: “ಆಧುನೀಕರಣದ ಪರಿಣಾಮವಾಗಿ ಆಗುತ್ತಿರುವ ಅರಣ್ಯ ನಾಶದಿಂದ ಪರಿಸರ ಏರುಪೇರಾಗಿ ಶುದ್ಧ ಗಾಳಿ ಮತ್ತು ನೀರಿನ ಕೊರತೆ ಉಂಟಾಗಿ ಹೊಸ ರೋಗಗಳು ಸೃಷ್ಟಿಯಾಗುತ್ತಿವೆ. ನಮ್ಮ ಬಾಲ್ಯದ ದಿನಗಳಲ್ಲಿ ಎಲ್ಲೆಂದರಲ್ಲಿ ಬೆಳೆದ ವಿವಿಧ ರೀತಿಯ ಹಣ್ಣಿನ ಮರಗಳಿಂದ ಪೌಷ್ಟಿಕಯುಕ್ತ ಹಣ್ಣು ಹಂಪಲ ತಿಂದು ಆರೋಗ್ಯವಾಗಿದ್ದೆವು.

ಇಂದಿನ ಪೀಳಿಗೆಗೂ ಅಂಥ ವಾತಾವರಣ ಸೃಷ್ಟಿಯಾಗಲೆಂದು ಸುರೇಶ ಯಾದವ ಫೌಂಡೇಶನ್, ಗುರು ರೋಡ್-ಲೈನ್ಸ್ ಹಾಗೂ ಕಣಬರಗಿಯ ಯುವಕ ಸಂಘದ ವತಿಯಿಂದ ‘ಮನೆಗೊಂದು ಹಣ್ಣಿನ ಗಿಡ’ ಎನ್ನುವ ವಿನೂತನ ಯೋಜನೆ ಮಾಡಿ ಉಚಿತವಾಗಿ ಗಿಡ ವಿತರಿಸುತ್ತಿರುವುದು ಶ್ಲಾಘನೀಯ ಹಾಗೂ ಅನುಕರಣೀಯವಾಗಿದೆ.

ರಾಮತೀರ್ಥ ನಗರ, ಕಣಬರಗಿ ಹಾಗೂ ಸುತ್ತಮುತ್ತಲಿನ ನಾಗರಿಕರು ಇದಕ್ಕೆ ಸ್ಪಂದಿಸಿ ಪ್ರತಿ ಮನೆಯವರು ಗಿಡಗಳ ಆರೈಕೆ ಮಾಡಬೇಕು” ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಕರೆ ನೀಡಿದರು.

ಸುರೇಶ ಯಾದವ ಫೌಂಡೇಶನ್, ಗುರು ರೋಡ್-ಲೈನ್ಸ್ ಹಾಗೂ ಕಣಬರಗಿಯ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಮನೆಗೊಂದು ಹಣ್ಣಿನ ಗಿಡ’ ಕಾರ್ಯಕ್ರಮವನ್ನು ರಾಮತೀರ್ಥ ನಗರದ ಗಣೇಶ ಸರ್ಕಲ್ ಹತ್ತಿರ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಣಬರಗಿ ಯುವಕ ಸಂಘದ ಸದಸ್ಯ ಸೂರಜ ಬಸ್ತಿ ಮಾತನಾಡಿ, ” ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿ ವರ್ಷ ಅರಣ್ಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುತ್ತಿದ್ದೆವು. ಅವುಗಳ ಆರೈಕೆ ಸರಿಯಾಗಿ ಆಗದ ಕಾರಣ ಗಿಡಗಳು ಬೆಳೆಯುತ್ತಿರಲಿಲ್ಲ.ಹೀಗಾಗಿ ಈ ವರ್ಷ ಮನೆ ಮನೆಗೆ ಉಚಿತ ಗಿಡ ವಿತರಣೆ ಮಾಡಿ ಅವುಗಳ ಆರೈಕೆ ಮಾಡಲು ಜನರನ್ನು ವಿನಂತಿಸುತ್ತಿದ್ದೇವೆ” ಎಂದರು.

ವಿತರಣೆಯಲ್ಲಿ ಸುರೇಶ ಯಾದವ, ಗುರುದೇವ ಪಾಟೀಲ, ರಾಘವೇಂದ್ರ ಪಾಟೀಲ, ಶಿವಯೋಗಿ ಕಡೆನ್ನವರ, ಸಾಗರ ಬಾಂಗ್ಯಾಗೋಳ, ಸುನಿಲ ಶೀಗಿಹಳ್ಳಿ, ನವೀನ ಹಿತ್ತಲಮನಿ, ರೋಹನ ಕಣಬರಗಿ, ಪ್ರಸಾದ ಖೋಬಣ್ಣವರ, ಕುಶಾಲ ಸುಂಟಕರ, ರೋಹಿತ ಮುತ್ತೆನ್ನವರ ಮತ್ತಿತರರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');