ಜಿಲ್ಲೆಯಲ್ಲಿ ವ್ಯಾಪಕ ಮಳೆ: ವೇದಗಂಗಾ ನದಿಪಾತ್ರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ತುರ್ತುಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

0

ಬೆಳಗಾವಿ, ಜೂ.18 : ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವೇದಗಂಗಾ ನದಿ ಪಾತ್ರದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಿಪ್ಪಾಣಿ ಸಮೀಪದ ಜತ್ರಾಟ ಹಾಗೂ ಅಕ್ಕೋಳ ಸುತ್ತಮುತ್ತಲಿನ ಪ್ರದೇಶಗಳಿಗೆ ಶುಕ್ರವಾರ(ಜೂ.18) ಭೇಟಿ ನೀಡಿದ ವೇದಗಂಗಾ ನದಿ ಹರಿವು ಪ್ರಮಾಣವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ನದಿ ನೀರಿನ ಪ್ರಮಾಣ ಹೆಚ್ಚಾದರೆ ಮುಂಜಾಗ್ರತಾ ಕ್ರಮವಾಗಿ ನದಿತೀರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು.
ಸಂಭವನೀಯ ಪ್ರವಾಹ ಹಾಗೂ ಅತಿವೃಷ್ಟಿಯಂತಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಆದಾಗ್ಯೂ ನದಿಗಳ ನೀರಿನ ಮಟ್ಟ ಹಾಗೂ ಮಳೆಯ ಪ್ರಮಾಣದ ಮೇಲೆ ಸಂಬಂಧಿಸಿದ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು.
ನದಿತೀರದ ಗ್ರಾಮಗಳ ಜನರಿಗೆ ಆಗಾಗ ಸೂಕ್ತ ಮುನ್ನೆಚ್ಚರಿಕೆಯನ್ನು ನೀಡಬೇಕು. ಒಂದು ವೇಳೆ ಪ್ರವಾಹ ಸ್ಥಿತಿ ಉದ್ಭವಿಸಿದರೆ ತಡಮಾಡದೇ ಜನರು ಹಾಗೂ ಜಾನುವಾರುಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು.
ಪ್ರವಾಹ ಭೀತಿ ಎದುರಿಸುತ್ತಿರುವ ಜಿಲ್ಲೆಯ 377 ಗ್ರಾಮಗಳ ಜನರನ್ನು ತುರ್ತು ಸಂದರ್ಭದಲ್ಲಿ ಸ್ಥಳಾಂತರಿಸಲು ಅಗತ್ಯವಿರುವ ಕಾಳಜಿ(ಪರಿಹಾರ) ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಸಮೀಪದಲ್ಲಿ ಇರುವ ನಿಗದಿತ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಬೇಕು ಎಂದು ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ನಿರ್ದೇಶನ ನೀಡಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ನಿಪ್ಪಾಣಿ ತಹಶಿಲ್ದಾರ ಹಾಗೂ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.////

ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಳಗಾವಿ, ಜೂ.18  : 2021-22 ನೇ ಸಾಲಿಗೆ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇರ ಗುತ್ತಿಗೆ ಮೂಲಕ ಖಾಲಿ ಇರುವ ವಲಯಗಳಲ್ಲಿ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಸಮಗ್ರ ಶಿಕ್ಷಣ ಯೋಜನೆಯ ಸಮನ್ವಯ ಶಿಕ್ಷಣ ಮಧ್ಯವರ್ತನೆ ಚಟುವಟಿಕೆಯ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಹತೆ ಹೊಂದಿದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಂದ ಪ್ರಥಮ ಆದ್ಯತೆ ಮೇರೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ವಿಶೇಷ ಸಂಪನ್ಮೂಲ ಶಿಕ್ಷಕರು ತಮಗೆ ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಜೂನ್ 22 ರಂದು ಸಾಯಂಕಾಲ 5.30 ಗಂಟೆಯೊಳಗಾಗಿ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.
ಅಲ್ಲದೇ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಂದ ಭರ್ತಿಯಾಗದೆ ಖಾಲಿ ಉಳಿದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ನೇರ ಗುತ್ತಿಗೆ ಮೂಲಕ ಇಲಾಖಾ ನಿಯಮಾನುಸಾರ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆದ್ದರಿಂದ, ವಿಶೇಷ ಡಿ.ಇಡಿ (ಪ್ರಾಥಮಿಕ) ಮತ್ತು ವಿಶೇಷ ಬಿ.ಇಡಿ (ಪ್ರೌಢ) ಪದವಿ ಪಡೆದಿರುವ, ಆರ್ಸಿ.ಐ ಪ್ರಮಾಣ ಪತ್ರ ಹೊಂದಿದ ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿ ಸಹಿತ ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ಸಂಬಂಧಿಸಿದ ದಾಖಲೆ ಪತ್ರಗಳೊಂದಿಗೆ ಜೂನ್ 24 ರಂದು ಸಾಯಂಕಾಲ 5.30 ಗಂಟೆಯೊಳಗಾಗಿ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಬೆಳಗಾವಿಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು,ಸಮಗ್ರ ಶಿಕ್ಷಣ ಕಛೇರಿಗೆ ಸಲ್ಲಿಸಬೇಕು.
ವಲಯವಾರು ಖಾಲಿ ಇರುವ ಹುದ್ದೆಗಳ ಮಾಹಿತಿ:
ಬೆಳಗಾವಿ ನಗರ ವಲಯದಲ್ಲಿ 02 ಪ್ರೌಢ ಹಾಗೂ 01 ಪ್ರಾಥಮಿಕ ಸಂಪನ್ಮೂಲ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿ, ಬೆಳಗಾವಿ ಗ್ರಾಮೀಣ ವಲಯದಲ್ಲಿ 02 ಪ್ರೌಢ ಹಾಗೂ 01 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಕಿತ್ತೂರು ವಲಯದಲ್ಲಿ 02 ಪ್ರೌಢ , ಖಾನಾಪೂರ ವಲಯದಲ್ಲಿ 02 ಪ್ರೌಢ ಹಾಗೂ 01 ಪ್ರಾಥಮಿಕ ಸಂಪನ್ಮೂಲ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ರಾಮದುರ್ಗ ವಲಯದಲ್ಲಿ 02 ಪ್ರೌಢ ಶಿಕ್ಷಕರ ಹುದ್ದೆಗಳು ಸೇರಿದಂತೆ 05 ವಲಯಗಳಲ್ಲಿ ಒಟ್ಟು 10 ಪ್ರೌಢ ಹಾಗೂ 03 ಪ್ರಾಥಮಿಕ ಸಂಪನ್ಮೂಲ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0831-2435232 ಕ್ಕೆ ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ
ಅಂಚೆ ಪತ್ರಗಳ ಮೇಲೆ ವಿಶೇಷ ಚಿತ್ರಾತ್ಮಕ ಮುದ್ರೆ

ಬೆಳಗಾವಿ, ಜೂ18 : ಏಳನೇಯ ಅಂತರರಾಷ್ಟ್ರೀಯ ಯೋಗ ದಿನದ ಹಿನ್ನಲೆಯಲ್ಲಿ ಜೂನ್ 21 ರಂದು ಅಂಚೆ ಪತ್ರಗಳ ಮೇಲೆ ಅಂತರರಾಷ್ಟ್ರೀಯ ಯೋಗ ದಿನದ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಒತ್ತುವ
ಮೂಲಕ ಸಾರ್ವಜನಿಕರಲ್ಲಿ ಯೋಗ ದಿನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಬೆಳಗಾವಿ, ಬೈಲಹೊಂಗಲ ಹಾಗೂ ರಾಮದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವೀಕೃತವಾಗುವ ಹಾಗೂ ಬಟವಡೆಯಾಗುವ ಎಲ್ಲಾ ಅಂಚೆ ಪತ್ರಗಳ ಮೇಲೆ ಅಂತರರಾಷ್ಟ್ರೀಯ ಯೋಗ ದಿನದ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಒತ್ತಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದು ನಮ್ಮ ಹೆಮ್ಮೆಯ ಭಾರತ. ಯೋಗದ ಮಹತ್ವವನ್ನು ಅರಿತು ವಿಶ್ವ ಸಂಸ್ಥೆಯು 2015 ರಿಂದ ಜೂನ್ 21 ನ್ನು ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ.

ಆದ್ದರಿಂದ ಭಾರತೀಯ ಅಂಚೆ ಇಲಾಖೆ ವತಿಯಿಂದ ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಅದೇ ರೀತಿ, ಈ ವರ್ಷವೂ ಸಹ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಒತ್ತಲಾಗುವುದು.
ಆದ್ದರಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');