ಮೈಲಾರದಲ್ಲಿ ‘ಸದ್ದಲೇ’ ಎಂದು ಭವಿಷ್ಯ ವಾಣಿ ನುಡಿಯುತ್ತಿದ್ದ ಕಾರಣಿಕದ ಮಾಲತೇಶಪ್ಪ ನಿಧನ

0

ಹೂವಿನಹಡಗಲಿ: ತಾಲ್ಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಈ ಹಿಂದೆ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ ಸೇವೆ ಸಲ್ಲಿಸುತ್ತಿದ್ದ ಗೊರವಯ್ಯ ಮಾಲತೇಶಪ್ಪ (61) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಗೊರವಯ್ಯ ಮಾಲತೇಶಪ್ಪ ಅವರಿಗೆ ಪತ್ನಿ ಇದ್ದಾರೆ. ಅವರ ಇಬ್ಬರು ಮಕ್ಕಳು ಈ ಹಿಂದೆಯೇ ಅನಾರೋಗ್ಯದಿಂದ ನಿಧನರಾಗಿದ್ದರು.

23 ಬಾರಿ ಕಾರಣಿಕ ನುಡಿದಿದ್ದ ಮಾಲತೇಶಪ್ಪ:

ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯನ್ನು ಭಕ್ತರು ನಾಡಿನ ಭವಿಷ್ಯ ವಾಣಿ ಎಂದೇ ನಂಬಿದ್ದಾರೆ. ಮೃತ ಮಾಲತೇಶಪ್ಪ ಸುಕ್ಷೇತ್ರದಲ್ಲಿ 23 ಬಾರಿ ಕಾರಣಿಕ ನುಡಿದು, ಭಕ್ತರ ನಂಬಿಕೆ ಮತ್ತಷ್ಟು ಬಲಗೊಳ್ಳುವಂತಹ ಉಕ್ತಿಗಳನ್ನು ನುಡಿದು ಸುಕ್ಷೇತ್ರದ ಧಾರ್ಮಿಕ ಪರಂಪರೆಯನ್ನು ಎತ್ತಿ ಹಿಡಿದಿದ್ದರು.

1989ರಲ್ಲಿ ಸುಕ್ಷೇತ್ರದ ವಂಶಪಾರಂಪರ್ಯ ಧರ್ಮಕರ್ತರಾಗಿದ್ದ ಜಯಚಂದ್ರ ಒಡೆಯರ್ ಅವರಿಂದ ಕಾರಣಿಕದ ಗೊರವಯ್ಯನಾಗಿ ದೀಕ್ಷೆ ಪಡೆದಿದ್ದ ಮಾಲತೇಶಪ್ಪ 2012ರ ವರೆಗೆ ಸುಕ್ಷೇತ್ರದಲ್ಲಿ ಕಾರಣಿಕ ನುಡಿದಿದ್ದರು. ಅವರು ಪಾರ್ಶ್ವವಾಯುಪೀಡಿತರಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ 2013ರಲ್ಲಿ ಅವರ ಪುತ್ರನಿಗೆ ಗೊರವ ದೀಕ್ಷೆ ನೀಡಲಾಗಿತ್ತು.

“ಸದ್ದಲೇ” ಎಂಬ ಕೂಗು:

ಡೆಂಕನಮರಡಿಯಲ್ಲಿ ಬಿಲ್ಲು ಏರಿ ಕಾರಣಿಕ ನುಡಿಯುವ ಮುನ್ನ ಮಾಲತೇಶಪ್ಪ ‘ಸದ್ದಲೇ’ ಎಂಬ ಕೂಗಿಗೆ ಲಕ್ಷಾಂತರ ಭಕ್ತ ಪರಿಷೆ, ಜೀವ ಸಂಕುಲ ಸ್ತಬ್ದವಾಗುತ್ತಿತ್ತು. ಆಕಾಶದಲ್ಲಿ ಶೂನ್ಯವನ್ನು ದಿಟ್ಟಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸ್ವಾಮಿಯ ನುಡಿಯನ್ನು ನುಡಿಯುತ್ತಿದ್ದರು. ಭಕ್ತರು ಪ್ರತಿವರ್ಷವೂ ಅವರ ನುಡಿಸೇವೆಯನ್ನು ನೆನಪು ಮಾಡಿಕೊಳ್ಳುತ್ತಾರೆ.

“ದೈವಭಕ್ತರಾಗಿದ್ದ ಮಾಲತೇಶಪ್ಪ ಕಪಿಲಮುನಿ ಪೀಠದ ನೆಚ್ಚಿನ ಶಿಷ್ಯರಾಗಿದ್ದರು. ಮೈಲಾರಲಿಂಗ ಸ್ವಾಮಿಯನ್ನು ಭಕ್ತಿಭಾವದಿಂದ ಪೂಜಿಸುವ ಜತೆಗೆ ಗುರು ಬೋಧನೆಯನ್ನು ತಪ್ಪದೇ ಪಾಲಿಸುತ್ತಿದ್ದರು. ಸುಕ್ಷೇತ್ರದಲ್ಲಿ ಸುದೀರ್ಘ ಕಾಲ ಕಾರಣಿಕ ನುಡಿದಿದ್ದರೂ ಎಂದೂ ಗೊಂದಲ ಸೃಷ್ಟಿಯಾಗಿರಲಿಲ್ಲ.  ಅವರ ಅಗಲಿಕೆಯಿಂದ ತೀವ್ರ ನೋವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡುವಂತೆ ಪ್ರಾರ್ಥಿಸುವೆ” ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಶೃದ್ಧಾಂಜಲಿ ಸಲ್ಲಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');