ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಯಾಬಿನ್ ಬೀಜ ವಿತರಣೆ

0

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಯಾಬಿನ್ ಬೀಜ ವಿತರಣೆ   ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಕೃಷಿ ತಂತ್ರಜ್ಞಾನ ಅಳವಡಿಕೆ ಹಾಗೂ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆ ಇಂದೋರನ ಸಹಯೋಗದಲ್ಲಿ ಇಂದು ಕೆಎಲ್‍ಇ ಸಂಸ್ಥೆಯ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪರಿಶಿಷ್ಟ ಜಾತಿ ವಿಶೇಷ ಯೋಜನೆಯಡಿ ಸೋಯಾಬಿನ್ ಬೀಜ ಹಾಗೂ ಇತರೆ ಜೈವಿಕ ಪರಿಕರಗಳನ್ನು ರೈತರಿಗೆ ಉಚಿತವಾಗಿ ಪೂರೈಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಚೇರ್‍ಮನ್ ಶ್ರೀ. ಬಿ. ಆರ್. ಪಾಟೀಲ ಮಾತನಾಡಿ ಕೃಷಿಯಲ್ಲಿನ ತಂತ್ರಜ್ಞಾನಗಳನ್ನು ಹಾಗೂ ವಿವಿಧ ಬೆಳೆಗಳ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಲು ಕೇಂದ್ರವು ನಿರಂತರವಾಗಿ ಶ್ರಮಿಸುತ್ತಿದ್ದು, ಪರಿಶಿಷ್ಟ ಜಾತಿ ಸಮುದಾಯದ ರೈತರಿಗೆ ಉಚಿತವಾಗಿ ಸೋಯಾಬಿನ್ ಬೀಜ ಹಾಗೂ ಕೇಂದ್ರದಲ್ಲಿ ಉತ್ಪಾದಿಸಿದ ವಿವಿಧ ಪರಿಕರಗಳನ್ನು ರೈತರಿಗೆ ನೀಡುತ್ತಿದ್ದು, ರೈತರು ಈ ಸಂಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಬೆಳಗಾವಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷರಾದ ಡಾ. ವಿಶ್ವನಾಥ ಆಯ್. ಪಾಟೀಲ ಬೀಜ ವಿತರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಸಮುದಾಯಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ವಿಶೇಷ ಯೋಜನೆಯಡಿ ರೈತರಿಗೆ ಸುಧಾರಿತ ತಳಿಯ ಸೋಯಾಬಿನ್ ಬೀಜಗಳನ್ನು ಪೂರೈಸಲಾಗುತ್ತಿದೆ, ದೇಶವು ಎಣ್ಣೆ ಆಮದನ್ನು ಕಡಿಮೆ ಮಾಡಲು ಸೋಯಾಬಿನ್ ಬೆಳೆಯ ಕ್ಷೇತ್ರವನ್ನು ವಿಸ್ತರಿಸುವುದು ಅವಶ್ಯವಾಗಿದೆ.

ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಅಧಿಕ ಇಳುವರಿ ನೀಡುವ ತಳಿಯನ್ನು ಪರಿಚಯಿಸುತ್ತಿದ್ದು ರೈತರು ಈ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರದ ಸುಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿ ಬೆಳೆಸಿದಲ್ಲಿ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ರಾಸಾಯನಿಕಗಳನ್ನು ಅತಿಯಾಗಿ ಬಳಸುವುದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿ ಅನೇಕ ರೋಗಗಳು ಬರುತ್ತಿವೆ. ಆದ್ದರಿಂದ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಬಿ. ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ರೈತರು ಬೆಳೆಯುತ್ತಿರುವ ಜೆಎಸ್-335 ತಳಿಯು ಕಡಿಮೆ ಇಳುವರಿಯನ್ನು ನೀಡುತ್ತಿದ್ದು, ಈ ಭಾಗದಲ್ಲಿ ಹೆಚ್ಚು ಇಳುವರಿ ನೀಡುವ ತಳಿಯನ್ನು ಬೆಳೆಯಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ಅಧಿಕ ಇಳುವರಿ ನೀಡುವ ತಳಿಗಳಾದ ಕೆಡಿಎಸ್-726 ಹಾಗೂ ಕೆಡಿಎಸ್-753 ತಳಿಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಕೇಂದ್ರದಲ್ಲಿ ವಿವಿಧ ವಿಷಯಗಳ ವಿಜ್ಞಾನಿಗಳಿದ್ದು ರೈತರು ಅವರ ಸಲಹೆಯಂತೆ ತಂತ್ರಜ್ಞಾನಗಳನ್ನು ಬಳಸಿ ಕೃಷಿಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಲಹೆ ನೀಡಿದರು.

ಎಸ್. ಎಮ್. ವಾರದ ಸ್ವಾಗತಿಸಿದರು ಹಾಗೂ ಜಿ. ಬಿ. ವಿಶ್ವನಾಥ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 70 ರೈತರು ಭಾಗವಹಿಸಿದ್ದರು.

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');