ಯಶಸ್ಸಿನ ಹಾದಿಯಲ್ಲಿ ಸಹಬಾಳ್ವೆ …

0

 

ಬೆಳೆದ ವಾತಾವರಣ ಹಾಗೂ ಸಂಸ್ಕಾರಗಳು ಸಮಾಜದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ವ್ಯಕ್ತಿತ್ವವನ್ನು ಪೂರ್ಣ ಗೊಳಿಸುತ್ತದೆ ಹಾಗೂ ಇತರರಿಗೆ ಸದಾ ಸ್ಫೂರ್ತಿ ಆಗುತ್ತದೆ ಇಂತಹ ಅನುಭವ ನನಗೆ ಇತ್ತೀಚೆಗೆ ಅನ್ನಿಸಿದ್ದು ಡಾ.ರಾಘವೇಂದ್ರ ಪ್ರಸಾದ್ ಅವರ ಬಳಿ ಮಾತನಾಡಿದಾಗ.ಹುಟ್ಟಿದ್ದು ಸಂಗೀತಗಾರರ ಮನೆತನದಲ್ಲಿ,ತಂದೆ ಗಾನಸುಧಾಕರ ಎ ಸುಬ್ಬರಾವ್ ಹಾಗೂ ತಾಯಿ ಕಮಲಾಕರ ಸುಬ್ಬರಾವ್.ಸಂಗೀತದ ಪರಿಸರದಲ್ಲಿ ಬೆಳೆದ ಇವರು ಕಲಿತದ್ದು ತಾವು ಬೆಳೆದ ಪರಿಸರದ ವಿರುದ್ಧ ದಿಕ್ಕಿನಲ್ಲಿ. ವೃತ್ತಿಯಲ್ಲಿ ಭಾಷ್ ಎಂಬ ದೊಡ್ಡ ಕಾರ್ಪೊರೇಟ್ ಸಂಸ್ಥೆಯಲ್ಲಿ ಡಿಜಿಎಂ ಅಂತಹ ಉನ್ನತ ಪದವಿಯಲ್ಲಿ ಇದ್ದರೂ ಅವರೊಂದಿಗೆ ಮಾತನಾಡುವಾಗ ಯಾವುದೇ ಪದವಿ. ಹಣ.ಹುದ್ದೆಯ ಛಾಯೆ ಸ್ವಲ್ಪವೂ ಇರಲಿಲ್ಲ.ಸಾಮಾನ್ಯ ಪದವಿಯಲ್ಲಿ ಇದ್ದವರೇ ಮಾತನಾಡಲು ಸಹಜತೆ ತೋರಿಸದ ಇಂದಿನ ದಿನಗಳಲ್ಲಿ ಇವರೊಡನೆ ಮಾತನಾಡಿ ತುಂಬಿದ ಕೊಡ ತುಳುಕುವುದಿಲ್ಲ ಎಂಬಂತಹ ಮಾತು ಇಂಥವರಿಂದಲೇ ಚಾಲ್ತಿ ಬಂದಿದೆಯೇನೋ ಎಂಬ ಭಾವ ಮೂಡಿತು.ಡಾ ರಾಘವೇಂದ್ರ ಪ್ರಸಾದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಬಾಳ್ವೆ ಸಂಸ್ಥೆಯ ಸ್ಥಾಪಕರು.

ಸುಮಾರು 25 ವರ್ಷಗಳ ಕಾರ್ಪೊರೇಟ್ ಜಗತ್ತಿನಲ್ಲಿ ವೃತ್ತಿ ಅನುಭವ ಇದ್ದು, ಉನ್ನತ ಸ್ಥಾನಕ್ಕೆ ಏರಿದರೂ ಎಲ್ಲಿಯೋ ಕೊರತೆ ಎಂಬ ಭಾವ ಬಂದಿದ್ದು ಸಾಧನೆಯ ಜೊತೆಗೆ ಸೇವೆ ಮಾಡುವ ಮನದಿಂದ 2016 ರಲ್ಲಿ
ಅಧಿಕೃತವಾಗಿ ಸಹಬಾಳ್ವೆ ಎಂಬ ಸರ್ಕಾರೇತರ ಸಂಸ್ಥೆಯನ್ನು ಆರಂಭಿಸಿದರು.ಇದಕ್ಕೂ ಮೊದಲೆರಡು ವರ್ಷ ಅಗತ್ಯ ಇದ್ದವರಿಗೆ ಶಿಕ್ಷಣಕ್ಕೆ ಸಹಾಯ ಮಾಡುವುದು.ಪುಸ್ತಕ ಖರೀದಿ ಹೀಗೇ ಸಹಾಯ ಮಾಡಿದ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡರೆ ಪಾರಮಾರ್ಥಿಕ ಸಾಧನೆ ಮಾಡಿದ ಹಾಗೆ ಆಗುತ್ತದೆ ಎಂದು ತಾವು ಕೆಲಸ ಮಾಡುತ್ತಿದ್ದ ವೃತ್ತಿಗೆ ರಾಜೀನಾಮೆ ಸಲ್ಲಿಸಿದರು.ಸುತ್ತಮುತ್ತಲ ಪರಿಸರ ಗಮನಿಸಿದಾಗ ಅಕಾಡೆಮಿಕ್ ಶಿಕ್ಷಣದ ಜೊತೆಯಲ್ಲಿಯೇ ಮೌಲ್ಯಯುತ ಶಿಕ್ಷಣದ ಅಗತ್ಯತೆ ಕಂಡು ಬಂದಿತು.ಇದರ ಫಲವೇ 2016ರಿಂದ ಹಮ್ಮಿ ಕೊಂಡ ಜ್ಞಾನ ಯಜ್ಞ ಕಾರ್ಯಕ್ರಮ.ಇಂದಿನ ಮಕ್ಕಳಿಗೆ ಶಿಕ್ಷಣ ಕೇವಲ ಓದು ಬರಹ ಅರಿಯುವುದು ಎಂಬಂತಾಗಿದೆ.ಮಕ್ಕಳಲ್ಲಿ ಮೊದಲಿನ ಹಾಗೆ ನೈತಿಕತೆ ತುಂಬುವಲ್ಲಿ ಶಿಕ್ಷಣದ ವ್ಯವಸ್ಥೆ,ಸಮಾಜ ,ಪೋಷಕರೂ ಸೇರಿದಂತೆ ವಿಫಲರಾಗುತ್ತಿದ್ದಾರೆ.ಇದು ವ್ಯಯುಕ್ತಿಕ ಸಮಸ್ಯೆ ಆಗಿರದೆ ಸಾಮಾಜಿಕ ಸಮಸ್ಯೆ ಆಗಿದೆ.ಆದ್ದರಿಂದಲೇ ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯದ ಚಟುವಟಿಕೆಯೂ ಸೇರಿದಂತೆ ಯೋಗ ಧ್ಯಾನ.ಕರಾಟೆ ಮುಂತಾದವುಗಳನ್ನು ಹೇಳಿಕೊಡಲಾಗುತ್ತದೆ.ಮೊದಲ ಕಾರ್ಯಕ್ರಮವನ್ನು ಬೀದರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಶಾಲಾ ಪರೀಕ್ಷೆ ಮುಗಿಸಿದ ನಂತರ 9ನೆ ತರಗತಿ ತೇರ್ಗಡೆಯಾದ ಮಕ್ಕಳು ಇದರ ಫಲಾನುಭವಿಗಳು.

ಸಾಮಾನ್ಯವಾಗಿ ಶೈಕ್ಷಣಿಕ ಸ್ಥಾನದಲ್ಲಿ ಕೆಲವು ಜಿಲ್ಲೆಗಳು ಹಿಂದುಳಿದ ಪಟ್ಟಿಯಲ್ಲಿದೆ ಇದಕ್ಕೆ ಬೀದರ್ ಕೂಡ ಹೊರತಲ್ಲ.ಹಿಂದುಳಿಯಲು ಕಾರಣಗಳು ಏನೇ ಇರಬಹುದು ಸರ್ಕಾರದ ಹಾಗೂ ಶಿಕ್ಷಕರ ಪ್ರಯತ್ನ ಮುಂದುವರೆಯುತ್ತಲೇ ಇದೆ.ಇಂತಹ ಕಾರ್ಯಕ್ರಮದಲ್ಲಿ ಸಹಬಾಳ್ವೆಯ ಜ್ಞಾನಯಜ್ಞಾ ಕಾರ್ಯಕ್ರಮವೂ ಒಂದು.ವಿದ್ಯಾರ್ಥಿಗಳಲ್ಲಿ ಅರಿವಿನ ಕೊರತೆಯಿರಲಿಲ್ಲ,ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ನೇರ ಹಾಗೂ ನಿರಂತರ ಸಂಪರ್ಕದಲ್ಲಿ ಇದ್ದುದರಿಂದ ಹಾಗೂ ಇಡೀ ದಿನ ಚಟುವಟಿಯಿಂದ ಇರುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ರಾಘವೇಂದ್ರ ರಾವ್ ತಿಳಿಸುತ್ತಾರೆ.ಈವರೆಗೆ ಈ ಕಾರ್ಯಕ್ರಮದಲ್ಲಿ 1000ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದು ಉತ್ತಮ ಫಲಿತಾಂಶ ನೀಡಿದೆ. ಶೈಕ್ಷಣಕವಾಗಿ ಹಿಂದುಳಿದ ಬೀದರ್ ಇಂದು ಪ್ರತಿಯೊಬ್ಬರ ಶ್ರಮದ ಪರಿಣಾಮ ತನ್ನ ಹಣೆಪಟ್ಟಿ ಯಿಂದ ಹೊರಗುಳಿದಿದೆ .ಇಂತಹದ್ದೇ ಕಾರ್ಯಕ್ರಮಗಳನ್ನು ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದು ಸ್ಥಳೀಯ ಶಿಕ್ಷಕರು.ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.

2020 ಎಲ್ಲರ ಪಾಲಿಗೂ ಬೇಸರದ ವರ್ಷ .ಯಾರೂ ಊಹಿಸದ ರೀತಿಯಲ್ಲಿ ಎಲ್ಲರ ಬದುಕು ಕರೋನದ ಕರಿನೆರಳಿನಲ್ಲಿ ಸಾಗಿತ್ತು.ಕೆಲವರ ಜೀವನಕ್ಕೆ ಕಷ್ಟ ಒದಗಿದ ಈ ಸಂದರ್ಭದಲ್ಲಿ ಸಹಬಾಳ್ವೆ ಕೈ ಹಿಡಿದು ನಡೆಸಿದೆ.ಇದರಲ್ಲಿ ವಿದ್ಯಾರ್ಥಿಗಳು.ಕಲಾವಿದರು.ಸಣ್ಣ ಪುಟ್ಟ ವ್ಯವಹಾರ ಮಾಡಿ ಬದುಕು ಸಾಗಿಸುವವರೂ ಇದ್ದಾರೆ.ಎಲ್ಲಾ ರೀತಿಯ ಸೌಲಭ್ಯಗಳು ಇದ್ದೂ ಮಕ್ಕಳು ಗುರುವಿನ ಬಳಿ ಶಿಕ್ಷಣ ಪಡೆಯಲು ಸಾಧ್ಯವಾಗದೆ ಇರುವ ವರ್ಷವೂ ಹೌದು.ಸರ್ಕಾರದ ವಿದ್ಯಾಗಮ, ಆನ್ಲೈನ್ ಶಿಕ್ಷಣ ಇದ್ದರೂ ಮಕ್ಕಳಿಗೆ ಪೂರ್ಣಪ್ರಮಾಣದ ಶಿಕ್ಷಣ ಕೊಡಲು ಸಾಧ್ಯವಾಗಿಲ್ಲ.ಮಕ್ಕಳು ಹಾಗೂ ಪೋಷಕರು ಇದರ ಪ್ರತಿಫಲ ಅನುಭವಿಸುತ್ತಿದ್ದಾರೆ.ಇರುವ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಓದುವ ಹವ್ಯಾಸ ಹಾಗೂ ಮೌಲ್ಯ ಬಿತ್ತುವ ಹಿನ್ನಲೆಯಲ್ಲಿ ಕೆಲವು ಮೌಲ್ಯಾಧಾರಿತ ಹಾಗೂ ಮಕ್ಕಳಿಗೆಂದು ಮೀಸಲಿರುವ ಗುಬ್ಬಚ್ಚಿ ಗೂಡು ಪತ್ರಿಕೆಯನ್ನು ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳಿಗೆ ನೀಡಲಾಗುತ್ತಿದೆ.

ಶಿಕ್ಷಣ ಹಾಗೂ ಮೌಲ್ಯ ಮೊದಲು ಪೂರಕವಾಗಿತ್ತು.ನೀತಿ ಕಥೆಗಳು ,ರಾಮಾಯಣ ಮೊದಲಾದವುಗಳು ಪಠ್ಯ ಪುಸ್ತಕದ ಭಾಗವಾಗಿತ್ತು. ಶಿಕ್ಷಣದ ಪದ್ಧತಿ ಬದಲಾದಂತೆ ಪಠ್ಯಕ್ರಮ ಬದಲಾಗಿದೆ.ಈ ಹಿನ್ನಲೆಯಲ್ಲಿ ಮೌಲ್ಯಯುತ ಶಿಕ್ಷಣ ಮಕ್ಕಳ ಜ್ಞಾನ ಮಟ್ಟ ಹಾಗೂ ಬದುಕಿನ ಮೇಲೆ ಹೇಗೆ ಪರಿಣಾಮ ಉಂಟು ಮಾಡುತ್ತದೆ .ಇದರ ಬಗ್ಗೆ ಅಧ್ಯಯನ ಮಾಡುವ ದೃಷ್ಟಿಯಿಂದ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನ ಹತ್ತಿರದಲ್ಲಿ ಸ್ಥಾಪಿಸುವ ಉದ್ದೇಶ ಇರುವುದಾಗಿ ಆಡಿ. ರಾಘವೇಂದ್ರ ಪ್ರಸಾದ್ ತಮ್ಮ ಮುಂದಿನ ಯೋಜನೆಯ ರೂಪು ರೇಷಗಳನ್ನು ತಿಳಿಸಿದರು.ಇದು ಕೇವಲ ಒಬ್ಬರಿಂದ ಮಾಡುವ ಕೆಲಸವಲ್ಲ ಆದ್ದರಿಂದಲೇ ಪೂರ್ವ ಸಿದ್ಧತೆ ಮಾಡುತ್ತಿದ್ದೇನೆ.ಆದಷ್ಟು ಬೇಗ ಕಾರ್ಯ ಆರಂಭ ಮಾಡುವ ಆಶಯವಿದೆ.ಸುಮಾರು ಐ.ಟಿ ಉದ್ಯೋಗಿಗಳು ಸಹಕಾರ ಕೊಡಲು ಮುಂದೆ ಬಂದಿದ್ದಾರೆ.ಬೀದರ್ ಹಾಗೂ ಮೈಸೂರಿನ ಜ್ಞಾನ ಯಜ್ಞ ಕಾರ್ಯಕ್ರಮಕ್ಕೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಹೊಸ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕೋವಿಡ್ ಕಾರಣದಿಂದಾಗಿ ನಿಲ್ಲಿಸಿದ್ದ ಕಾರ್ಯ ಚಟುವಟಿಕೆ ಮತ್ತೆ ಆರಂಭಿಸಿದ್ದಾರೆ..

ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಸಹಬಾಳ್ವೆ ಸಂಸ್ಥೆ ಜೊತೆಯಲ್ಲಿಯೇ ಆರೋಗ್ಯ.ಜೀವನ ನಿರ್ವಹಣೆಗೆ ಅಗತ್ಯ ಇರುವವರಿಗೆ ಸ್ಪಂದಿಸಿದೆ.ಪರಿಸರ ಹಾಗೂ ಮಕ್ಕಳು ಪರಸ್ಪರ ಪೂರಕವಾದ ಚಟುವಟಿಕೆಯಲ್ಲಿ ತೊಡಗಿಸಿ ಪರಿಸರ ಉಳಿವಿಗೆ ಶ್ರಮಿಸುವ ಇರಾದೆ ಹೊಂದಿದೆ.

ಕಾಲಕಾಲಕ್ಕೆ ಶಿಕ್ಷಣ ಪದ್ಧತಿ ಬದಲಾದರೂ ಸಮಾಜದ ಏಳಿಗೆಗೆ ಮೌಲ್ಯಯುತ ಬದುಕು ಬೇಕು.ಕೇವಲ ಅಂಕಪಟ್ಟಿ ಹಿಡಿದು.ಉದ್ಯೋಗಕ್ಕೆ ಅರ್ಹತೆ ಪಡೆದರೆ ಶಿಕ್ಷಣದ ಉದ್ದೇಶ ಈಡೇರಿದ ಹಾಗೆ ಆಗದು.ಬದುಕಿಗೆ ಉತ್ತಮ ಮೌಲ್ಯ ಇದ್ದು ಸಾಮಾಜಿಕವಾಗಿ ಉತ್ತಮ ಪ್ರಜೆಯ ಕರ್ತವ್ಯ ನಿರ್ವಹಿಸಿದರೆ ಮಾತ್ರ ಎಲ್ಲೆಡೆ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಮುಖಿ ಕಾರ್ಯ ನಿರ್ವಹಿಸುವ ಸಹಬಾಳ್ವೆ ಸಂಸ್ಥೆಯ ಉದ್ದೇಶ ಈಡೇರಲಿ.

 

ಆತ್ಮ.ಜಿ.ಎಸ್.
ಬೆಂಗಳೂರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');