ಉತ್ತರ ಕರ್ನಾಟಕದಲ್ಲಿ ರೈತರ ಸಂಘಟನೆಯನ್ನು ಬಲಾಢ್ಯವಾಗಿ ಕಟ್ಟಿದ ನಾಯಕ ಬಾಬಾಗೌಡ ಪಾಟೀಲರು

0

 

ಬೆಳಗಾವಿ ಜುಂ., 05- ಎಂಬತ್ತರ ದಶಕದಲ್ಲಿ ರಾಜ್ಯ ರೈತ ಸಂಘವನ್ನು ಸೇರಿ ಉತ್ತರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟನೆಯನ್ನು ಕಟ್ಟಿದವರು ಬಾಬಾಗೌಡ ಪಾಟೀಲರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು ಮತ್ತು ಸ್ವರಾಜ್ ಪಕ್ಷದ ರಾಜ್ಯಾಧ್ಯಕ್ಷರಾದ ಚಾಮರಾಜ ಮಾಲಿಪಾಟೀಲ್ ಅವರು ಬಾಬಾಗೌಡ ಪಾಟೀಲರನ್ನು ಸ್ಮರಿಸಿದರು.

ಇಂದು ನಗರದ ಕೆಪಿಟಿಸಿಎಲ್ ಭವನದಲ್ಲಿ ಬಾಬಾಗೌಡರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತಸಂಘದಿಂದ ಮೊದಲ ಸಲ ಶಾಸನ ಸಭೆಯನ್ನು ಪ್ರವೇಶಿಸಿದ ಮೊದಲ ರೈತ ನಾಯಕ ಬಾಬಾಗೌಡ ಪಾಟೀಲರು ಎಂದರು. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ ಅವುಗಳ ವಿರುದ್ಧ ಹೋರಾಡಲು ರೈತ ಸಂಘಟನೆಯನ್ನು ಗಟ್ಟಿಗೊಳಿಸುವ ಅವಶ್ಯಕತೆಯಿದೆ. ಹೊಸ ಯುವಕರ ರೈತ ಸಂಘ ಸೇರ್ಪಡೆಗೆ ಕಾರ್ಯಕ್ರಮ ನಡೆದಿದೆ ಎಂದರು.

ನಂತರ ಮಾತನಾಡಿದ ಸಮಾಜಿಕ ಕಾರ್ಯಕರ್ತ, ಹೋರಾಟಗಾರ ಎಸ್.ಆರ. ಹಿರೇಮಠ್ ಅವರು ಬಾಬಾಗೌಡ ಪಾಟೀಲರು ರೈತಪರ ಕಾಳಜಿ ಉಳ್ಳವರು, ಮೊದಲಿನಿಂದಲೂ ರೈತರ ಬಗ್ಗೆ ಶ್ರಮಿಸುತ್ತಾ ಬಂದಿದ್ದಾರೆ ಅವರು ರೈತ ಸಂಘಟನೆಯನ್ನು ಬಲಪಡಿಸಿದ್ದರು. ಈಗ ಕೇಂದ್ರ ಸರ್ಕಾರ ಹೊರಡಿಸಿರುವ 3 ಕರಾಳ ಶಾಸನ ಹಿಂಪಡೆಯುವವರೆಗೆ ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ದೇಶದ ಸುಪ್ರೀಂಕೋರ್ಟ್ ಎಲ್ಲರಿಗೂ ಜೀವಿಸುವ ಹಕ್ಕು ಇದೆ ಎನ್ನುತ್ತದೆ, ಇಂದು ನಾವು ಸ್ವಾಭಿಮಾನದ ಬದುಕಿಗಾಗಿ ಹೋರಾಡಬೇಕಾಗಿದೆ ಎಂದರು.

ನಂತರ ಮಾತನಾಡಿದ ಮಾಜಿ ಸಚಿವ ಶಶಿಕಾಂತ ನಾಯಕ ಅವರು, ನಾವು ಎಲ್ಲೇ ಇದ್ದರೂ ಕರ್ನಾಟಕ ರಾಜ್ಯ ರೈತ ಸಂಘದ ಪ್ರೊಡಕ್ಟ್ ಗಳೆಂದೆ ಹೇಳಿಕೊಳ್ಳುತ್ತೇವೆ.
ಎಚ್.ಎಸ್. ರುದ್ರೇಶ್, ಪ್ರೊಫೆಸರ್ ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ರುದ್ರಪ್ಪನ ಮುಕಾಶಿ, ಗಜಪತಿ ಬಾಬು ಪಾಟೀಲ್ ಮತ್ತು ಅನೇಕ ಮುಖಂಡರು ರೈತರ ಸಂಘಟನೆಯನ್ನು ಕಟ್ಟಿ ಬೆಳೆಸಿದರು.

ರೈತ ಸಂಘಟನೆ ಈಗ ಸಣ್ಣಸಣ್ಣ ಸಂಘಟನೆಗಳಾಗಿ ಒಡೆದಿದೆ. ರಾಜಕೀಯ ಪಕ್ಷಗಳು ಕರ್ನಾಟಕ ರಾಜ್ಯ ರೈತ ಸಂಘವನ್ನು ಹತ್ತಿಕ್ಕಲು ತಮ್ಮ ತಮ್ಮ ಪಕ್ಷಗಳಲ್ಲಿ ರೈತರ ವಿಭಾಗಗಳನ್ನು ಮಾಡಿಕೊಂಡಿವೆ. ಈಗ ಮತ್ತೆ ನಾವೆಲ್ಲರೂ ಒಂದಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ರೈತ ನಾಯಕರನ್ನು ಒಬ್ಬೊಬ್ಬರನ್ನಾಗಿ ನಾವು ಕಳೆದುಕೊಳ್ಳುತ್ತಾ ಬಂದಿದ್ದೇವೆ ಎಚ್.ಎಸ್. ರುದ್ರೇಶ್, ಪ್ರೊಫೆಸರ್ ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಕೆಎಸ್ ಪುಟ್ಟಣ್ಣಯ್ಯ ಇತ್ತೀಚೆಗೆ ನಮ್ಮ ನೆಚ್ಚಿನ ನಾಯಕ ಬಾಬಾಗೌಡ ಪಾಟೀಲರನ್ನು ಕಳೆದುಕೊಂಡಿದ್ದೇವೆ. ರೈತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಹೇಳಿದ ರೈತ ಮುಖಂಡ ಕಲ್ಯಾಣರಾವ ಮುಚಳಂಬಿ ಅವರು, ರುದ್ರಪ್ಪನ ಮುಕಾಶಿ ಮತ್ತು ಸುರೇಶ್ ಬಾಬು ಪಾಟೀಲರು ಬಾಬಾಗೌಡರನ್ನು ರೈತ ಸಂಘಕ್ಕೆ ಪರಿಚಯಿಸಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರು.

ನಂತರ ಪ್ರೊಫೆಸರ್ ನಂಜುಂಡಸ್ವಾಮಿ ಮತ್ತು ಬಾಬಾ ಗೌಡರು ಜೋಡೆತ್ತು ಗಳಂತೆ ದುಡಿದು ರಾಜ್ಯಾದ್ಯಂತ ರೈತಸಂಘವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಿದರು. ಒಳ್ಳೆಯ ವಾಗ್ಮಿಯಾಗಿದ್ದ ಬಾಬಾಗೌಡ ಪಾಟೀಲರು ರೈತ ಸಂಘದ ವಿಚಾರಗಳನ್ನು ಜನರ ಹೃದಯಕ್ಕೆ ಮುಟ್ಟುವಂತೆ ತಿಳಿಸುತ್ತಿದ್ದರು.

ಇವರು ಬಿಜೆಪಿ ಪಕ್ಷಕ್ಕೆ ಹೋದಾಗ ಬಿಜೆಪಿಯನ್ನು ಹಳ್ಳಿಗಳಿಗೆ ಪರಿಚಯಿಸಿದ ಕೀರ್ತಿ ಬಾಬಾಗೌಡ ಪಾಟೀಲರಿಗೆ ಸಲ್ಲುತ್ತದೆ ಎಂದರು. ಸರಳ ಪ್ರಾಮಾಣಿಕ ವಿಚಾರವಾದಿ ವ್ಯಕ್ತಿಯಾಗಿದ್ದ ಬಾಬಾಗೌಡ ಪಾಟೀಲರು ಯಾವುದೇ ಪಕ್ಷಕ್ಕೆ ಹೋದರು ಹಸಿರು ಶಾಲು ಅವರನ್ನು ಬಿಟ್ಟಿರಲಿಲ್ಲ ಮತ್ತು ಅವರು ಹಸಿರು ಶಾಲನ್ನು ಬಿಟ್ಟಿರಲಿಲ್ಲ. ಹಳ್ಳಿಯಿಂದ ದಿಲ್ಲಿಗೆ ಹೋಗಿ, ದಿಲ್ಲಿಯಿಂದ ಹಳ್ಳಿಗೆ ಬಂದ ಏಕೈಕ ನಾಯಕ ಬಾಬಾಗೌಡ ಪಾಟೀಲರು ಎಂದು ಅವರನ್ನು ಮುಚಳಂಬಿ ಅವರು ಸ್ಮರಿಸಿದರು.

 

ನಂತರ ಮಾತನಾಡಿದ ಸಿದ್ದುಗೌಡ ಮೋದಿಗಿ ಬಾಬಾಗೌಡರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರ ಆರೋಪ ಇರಲಿಲ್ಲ ಎಂದು ಹೇಳಿದ ಅವರು, ಬಾಬಾಗೌಡರು ಪರಿಚಯಿಸಿದ ಗ್ರಾಮಸಡಕ್ ಮತ್ತು ಅನೇಕ ರೈತಪರ ಯೋಜನೆಗಳನ್ನು ನೆನಪಿಸಿ ಕೊಟ್ಟರು.

ಇದೇ ಸಂದರ್ಭದಲ್ಲಿ ಪಾರ್ವತಿ ಕಳಸಣ್ಣವರ, ಶಿವಪುತ್ರ ಜಕಬಾಳ, ಮಲ್ಲಿಕಾರ್ಜುನ ವಾಲಿ, ಈರನಗೌಡ ಪಾಟೀಲ್ ಮತ್ತು ಅನೇಕ ರೈತ ಮುಖಂಡರು ಬಾಬಾ ಗೌಡರನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಿಗಲ ಪೂರ್ ನಾಗೇಂದ್ರ ಅವರು ಬಾಬಾಗೌಡರ ರೈತಸಂಘಟನೆಯಲ್ಲಿಯ ಸೇವೆಯನ್ನು ಸ್ಮರಿಸುತ್ತ, ಸರಕಾರ ಬಾಬಾಗೌಡ ಪಾಟೀಲ ರ ಅಂತ್ಯಕ್ರಿಯೆಯಲ್ಲಿ ತೋರಿದ ನಿರ್ಲಕ್ಷತನ, ಬೇಜಾಬ್ದಾರಿ ಮತ್ತು ಅವರಿಗೆ ನೀಡಬೇಕಾದ ಗೌರವ ನೀಡದೆ ಇದಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಸರಕಾರ ಬಾಬಾಗೌಡ ಪಾಟೀಲರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದ ಅವರು ಮುಂದೆ ನಿಧಾನವಾದರೂ ಕೂಡ ಒಳ್ಳೆಯ ಅಭಿನಂದನಾ ಗ್ರಂಥವನ್ನು ಹೊರ ತರುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಂಕರಗೌಡ ಪಾಟೀಲ್ ಶಿವನಗೌಡ ಪಾಟೀಲ್ ರಾಜ್ಯದ ವಿವಿಧ ಜಿಲ್ಲೆಗಳ ರೈತ ಮುಖಂಡರು ಬಾಬಾಗೌಡ ಪಾಟೀಲರ ಅಭಿಮಾನಿಗಳು ಉಪಸ್ಥಿತರಿದ್ದರು

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');