ಸಹೋದರಿಯರಿಬ್ಬರ ಸೌಂದರ್ಯ ಲಹರಿ

0

ಅಭಿವೃದ್ಧಿಯ ಹಾದಿಯಲ್ಲಿ ನಲುಗಿದವರು

ಸಹೋದರಿಯರಿಬ್ಬರ ಸೌಂದರ್ಯ ಲಹರಿ

ನಾವಿಬ್ಬರು ಸುಕೋಮಲೆಯರು. ರಮಿಸುವ ರವಿರಶ್ಮಿಗೆ ಪುಳಕಿತರಾಗಿ, ತೇಲಾಡುವ ಮುಂಗುರುಳಿನಂತೆ
ವೈಯ್ಯಾರದಲೆಗಳ ತರಂಗಿಣಿಯರಾಗಿ, ಹಸಿರು ಪ್ರಭೇದಕ್ಕೆ ಉಸಿರಾಗಿ, ಪ್ರಾಣಿ ಪ್ರಪಂಚಕ್ಕೆ ಬಸಿರಾಗಿ, ಬೆಳೆಗಳಿಗೆ ಜೀವಸೆಲೆಯಾಗಿ, ಇಳೆಗೆ ಭೂಷಿತೆಯರಾಗಿ, ಊರಿನವರಿಗೆಲ್ಲ ಬದುಕಾಗಿ, ಒಟ್ಟಾರೆ ಪ್ರಾಣಿ- ಸಸ್ಯ- ಮನುಷ್ಯರೆಲ್ಲರಿಗೂ ಸರ್ವಸ್ವವಾಗಿದ್ದೆವು.

ನಮ್ಮ ತೀರದುದ್ದಕ್ಕೂ ನೀರೆಯರಂತೆ ನೆರೆದಿದ್ದ ಹತ್ತಾರು ಬಗೆಯ ಗಿಡ- ಮರ- ಪೊದೆಗಳು ತಂಗಾಳಿಗೆ ನಲಿದಾಡುತ್ತಾ ನಮ್ಮ ಸೆರಗಿನಂತಿದ್ದವು. ಮಾವು, ಬೇವು ಪೇರಲ, ಆಲ, ಗೋಣಿ, ನೇರಳೆಯ ಸಾಲು ಸಾಲು ಮರಗಳ ರೆಂಬೆ ಕೊಂಬೆಗಳ ಮೇಲೆ ಹಕ್ಕಿಗಳ ಚಿಲಿಪಿಲಿ ಶಬ್ದ ನಮಗಾಗಿ ಜೋಗುಳದಂತಿತ್ತು. ಅವುಗಳು ಗೂಡುಗಳ ಕಟ್ಟಿ,
ತತ್ತಿಗಳನ್ನಿಟ್ಟು, ಕಾವು ಕೊಟ್ಟು, ಮರಿಗಳು ಹೊರಬಂದು, ಚೀಂವ್, ಚೀಂವ್ ನೀನಾದ ನಮಗಾಡುವ ಮಂತ್ರಘೋಷದಂತೆ ಕೇಳಿಸುತ್ತಿತ್ತು. ಗೀಜಗ ಪಕ್ಷಿಕುಲವಂತೂ, ನಮ್ಮೆಡೆಗೆ ಚಾಚಿಕೊಂಡ ಗಿಡ-ಮರಗಳ ಟಿಸಿಲಿನಲ್ಲೇ ಚಿತ್ತಾರವಾಗಿ, ರಕ್ಷಣಾತ್ಮಕವಾಗಿ ಗೂಡು ಕಟ್ಟುತ್ತಿತ್ತು. ಗಾಳಿಗೆ ಆ ಗೂಡುಗಳು ಹೊಯ್ದಾಡುತ್ತಿದ್ದರೆ, ಆಲಯದಿ ಇಳಿಬಿಟ್ಟ ಗಂಟೆಗಳಂತೆ ತೋರಿ, ಅವುಗಳೊಳಗಿಂದ ಗೀಜಗ ಮರಿಗಳ ಕೊರಳ ಸದ್ದು, ಗಂಟೆಯ ನಿನಾದದಂತೆಯೂ ತೋರಿ ನಾವು ಮುದಗೊಳ್ಳುತ್ತಿದ್ದೆವು.

ಪೊದೆಗಳು ಹೂ- ಬಳ್ಳಿಗಳಿಂದಾವೃತ್ತಗೊಂಡು ಪರಿಮಳ ಸೂಸುತ್ತಾ, ನಮ್ಮ ಪೂಜೆಗೆ ಪುಷ್ಪಗಳಂತೆ ತೋರಿ, ಆ ಹೂವುಗಳ ಮಕರಂದವನ್ನೀರಲು ಬರುವ ದುಂಬಿಗಳ ಝೇಂಕಾರ ಮಂತ್ರಘೋಷದಂತೆ ಸಾರಿ, ದಿವ್ಯ ಭಾವ ಮೂಡುತ್ತಿತ್ತು.  ತಂಗಾಳಿಗೆ ಆ ಹೂವುಗಳು ಹಾರಿ ಬಂದು, ನಮ್ಮಲೆಗಳಲ್ಲಿ ತೇಲುತ್ತಾ, ನಮಗೆ ಪುಷ್ಪಾರ್ಚನೆಯಾಗುತ್ತಿತ್ತು. ಮರಗಳಲ್ಲಿನ ಹಣ್ಣುಗಳು ಕೂಡಾ ನೀರಲ್ಲಿ ಬಿದ್ದು ತೇಲುತ್ತಾ ಫಲ ಸಮರ್ಪಣೆಯೂ ಆದಂತೆ ಭಾಸವಾಗಿ ನಮ್ಮ ತನುಮನ ಉಬ್ಬುತ್ತಿತ್ತು.ಮುಂಜಾನೆಯ ನೀರವತೆಯಲ್ಲಿ ರವಿರಶ್ಮಿ ಮೂಡುವ ಮುನ್ನ ನಮ್ಮೆಲೆಗಳಿಂದ ನೀರಾವಿಯು ಮೇಲೇಳುತ್ತಿದ್ದ ದೃಶ್ಯವಂತೂ ನಮಗೆ ಧೂಪಾರಾದನೆಯಾದರೆ, ರವಿರಶ್ಮಿಯ ಹೊಳಪು ದೀಪಾರಾಧನೆಯಾಗುತ್ತಿರುವಂತೆ ತೋರಿ ರೋಮಾಂಚಿತರಾಗುತ್ತಿದ್ದೆವು.

ಬೆಳಗು ಹರಿಯುತ್ತಿದ್ದಂತೆಯೇ ಊರಿನ ಜನರು ಒಬ್ಬೊಬ್ಬರಾಗಿ ಹೊರಬಂದು ತಿಂಡಿ – ಅಡುಗೆ ಮಾಡಲು ತಾಮ್ರದ ಬಿಂದಿಗೆ, ಗುಂಡಿಗಳಲ್ಲಿ, ಮಣ್ಣಿನ ಮಡಿಕೆಗಳಲ್ಲಿ ನಮ್ಮನ್ನು ತುಂಬಿಕೊಂಡು ಹೋಗುತ್ತಿದ್ದರು. ಅರೆ! ಏಕೆ ಮುಖ ಸಿಂಡರಿಸಿಕೊಂಡಿರಿ? ನಮ್ಮನ್ನು ತಿಂಡಿ-ಅಡುಗೆಗೆ ಬಳಸಲು ಹೇಗೆ ಸಾಧ್ಯ? ಎಂತಲೇ. ನಾವೀಗ ಎಷ್ಟೇ ಗೋಗರೆದರೂ ನೀವು ಯಾರೂ ಅದನ್ನು ನಂಬುವುದಿಲ್ಲ ಅಲ್ಲವೇ? ಆದರೆ ನಾವಾಗ ಶುದ್ಧಸ್ಫಟಿಕ ಶುಭ್ರಜಲ. ನಮ್ಮ ತಳ ಸುಸ್ಪಷ್ಟವಾಗಿ ಕಾಣುವಷ್ಟು ಪಾರದರ್ಶಕ ತಿಳಿ ಜಲರಾಶಿ. ಊರ ಹೆಣ್ಣುಮಕ್ಕಳಿಗೆ ನಮ್ಮ ನೀರೇ ಕನ್ನಡಿ. ನಮ್ಮಲ್ಲಿ ಪ್ರತಿಬಿಂಬ ನೋಡಿಕೊಂಡೇ ತಲೆಬಾಚಿಕೊಳ್ಳುತ್ತಿದ್ದದ್ದು,ಸಿಂಧೂರದಾರಣೆ ಮಾಡುತ್ತಿದ್ದದ್ದು, ಸೀರೆ ಸೆರಗು ಸರಿಪಡಿಸಿಕೊಳ್ಳುತ್ತಿದ್ದದ್ದು. ಏಕೆಂದರೆ ಆಗಿನ್ನೂ ಕನ್ನಡಿಗಳ ಆವಿಷ್ಕಾರವೇ ಆಗಿರಲಿಲ್ಲ. ಆದರೆ ಊರಿನ ಗಂಡಸರ್ಯಾರೂ ನಮ್ಮಲ್ಲಿ ಹಾಗೆ ಪ್ರತಿಬಿಂಬ ನೋಡಿಕೊಳ್ಳುತ್ತಿರಲಿಲ್ಲ, ಕಾರಣ ಅಪ್ಪಟ ರೈತರಾದ ಅವರೆಂದೂ ತಲೆಯನ್ನೇ ಬಾಚುತ್ತಿರಲಿಲ್ಲ.

ದನಕರುಗಳನ್ನು ನೇರವಾಗಿ ನಮ್ಮ ಬಳಿಗೆ ಬಿಡುತ್ತಿರಲಿಲ್ಲ. ಬಿಂದಿಗೆ, ಗುಂಡಿಗಳಲ್ಲಿ  ತುಂಬಿಕೊಂಡು ಮುಸುರೆಪಾತ್ರೆಗೆ ಸುರಿದು ದನಕರುಗಳಿಗೆ ಕುಡಿಸುತ್ತಿದ್ದರು. ಹಾಗೆಯೇ ನೇರವಾಗಿ ಯಾರೂ ನಮ್ಮಲ್ಲಿ ಬಟ್ಟೆ ಒಗೆಯುತ್ತಿರಲಿಲ್ಲ. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು, ದಂಡೆಗಳಲ್ಲಿ ಕುಳಿತು ಬಟ್ಟೆ ಒಗೆಯುತಿದ್ದರು, ಪಾತ್ರೆ ತೊಳೆಯುತ್ತಿದ್ದರು. ತೊಳೆದ ನೀರು ನಮಗೆ ಸೇರದಂತೆ ಜಾಗೃತೆ ವಹಿಸುತ್ತಿದ್ದರು. ಮಕ್ಕಳು ವೃದ್ಧರಾದಿಯಾಗಿ ಯಾರೂ ನಮ್ಮನ್ನು ಕಲುಷಿತಗೊಳಿಸುತ್ತಿರಲಿಲ್ಲ. ಬೆಳಗಾಗುತ್ತಲೇ ಮಕ್ಕಳೆಲ್ಲ ಓಡಿ ಬಂದು, ಮರಗಳಿಂದ ಬಿದ್ದು ನಮ್ಮ ಅಲೆಗಳಲ್ಲಿ ತೇಲುತ್ತಿದ್ದ ಹಣ್ಣು-ಕಾಯಿಗಳನ್ನು ಆಯ್ದುಕೊಂಡೊಯ್ಯುತ್ತಿದ್ದರು. ಅದು ಅವರ ಪಾಲಿಗೆ ನಮ್ಮ ನೈವೇದ್ಯ, ಪೂಜೆಯ ನಂತರದ ಎಡೆ.

ಶನಿವಾರ ಬಂತೆಂದರೆ ಎಲ್ಲರೂ ಪಾತ್ರೆ ಪಗಡೆಗಳನ್ನು ಹೊತ್ತು ತಂದು, ನಮ್ಮಲ್ಲಿಗೆ ಬಂದು, ನೀರು ಮೊಗೆದು, ಏರಿಯ ಮೇಲೆ ನಿಂತು ಸ್ನಾನ ಮಾಡುತ್ತಿದ್ದರು. ಒರಟು ಕಲ್ಲುಗಳಲ್ಲಿ ಅವರು ಮಯ್ಯುಜ್ಜಿಕೊಳ್ಳುವುದು, ಮೈಯಲ್ಲಿನ ಕೊಳೆಯೆಲ್ಲಾ ಉದುರುದುರಾಗಿ ಕೆಳಗೆ ಬೀಳುವುದು- ಇದನ್ನು ನೋಡಲು ತಮಾಷೆಯಾಗಿರುತ್ತಿತ್ತು. ಶನಿವಾರ ಬಂತೆಂದರೆ ನನಗಂತೂ ಮನರಂಜನೆಯ ದಿನವೆಂದೇ ಹೇಳಬೇಕು.ತಾಯಂದಿರು ಮಕ್ಕಳನ್ನು ದಂಡೆಯ ಕಲ್ಲು ಬಂಡೆಗಳ ಮೇಲೆ ಕೂರಿಸಿ ಪರಪರವೆಂದು ಮಯ್ಯುಜ್ಜುತ್ತಿದ್ದರು. ಸ್ನಾನ ಬೇಡವೆಂದು ಹಠ ಹಿಡಿಯುವ ಮಕ್ಕಳು ಕೆಲವರಾದರೆ, ಕಲ್ಲಿನಿಂದ ಉಜ್ಜುವಾಗ ನೋವೆಂದು ಅಳುವವರು ಹಲವರು. ಗಂಡಂದಿರು ತಮ್ಮ ಹೆಂಡತಿಯರಿಂದ ಬೆನ್ನು ತಿಕ್ಕಿಸಿಕೊಳ್ಳುತ್ತಿದ್ದರು.

ಹಬ್ಬ-ಹರಿದಿನಗಳಲ್ಲಂತೂ ಇಡೀ ದಿನ ಬಿಂದಿಗೆ ಗುಂಡಿಗಳಲ್ಲಿ ನಮ್ಮನ್ನು ಹೊತ್ತೊಯ್ಯುತ್ತಿದ್ದರು-ಮನೆಗಳ ಸ್ವಚ್ಛತೆ, ಕೊಟ್ಟಿಗೆಗಳ ಸ್ವಚ್ಛತೆ, ಸ್ನಾನ – ಮಡಿ, ಮನೆಗೆ ಬಂದ ನೆಂಟರಿಸ್ಟರಿಗೆಲ್ಲ ಅಡುಗೆ, ಇತ್ಯಾದಿಗಳಿಗೆ. ಕನ್ಯಾಮಣಿಗಳು, ಮುತ್ತೈದೆಯರಿಗೆಲ್ಲಾ ನಮ್ಮ ಬಳಿಬಂದು ಪವಿತ್ರ ಭಾವನೆಯಿಂದ *ಗಂಗಮ್ಮನ ಪೂಜೆ* ನೆರವೇರಿಸಿ,ತಲೆಯ ಮೇಲೆ ನಾಲ್ಕು ಹನಿ ಪ್ರೋಕ್ಷಿಸಿಕೊಳ್ಳುತ್ತಿದ್ದರು. ಮದುವೆಯಾಗದವರು ಒಳ್ಳೆಯ ವರ ದೊರೆತು ಬೇಗ ಮದುವೆಯಾಗಲೆಂದೂ, ಮಕ್ಕಳಿಲ್ಲದ ಕೊರಗಿನವರು ಸಂತಾನಭಾಗ್ಯ ದೊರೆಯಲೆಂದೂ, ಭಕ್ತಿಭಾವದಿಂದ ಪ್ರಾರ್ಥಿಸಿಕೊಳ್ಳುತ್ತಿದ್ದರು. ಅವರವರ ಅಭೀಷ್ಟಗಳು ಅತಿ ಶೀಘ್ರ ಲಭಿಸಲೆಂದು ನಾವೂ ಮನದುಂಬಿ ಹಾರೈಸುತ್ತಿದ್ದೆವು.

ನಮ್ಮ ಒಂದು ಬದಿಗೆ ಊರಿದ್ದರೆ ಇನ್ನು ಮೂರು ಬದಿಗೂ ಗದ್ದೆ- ಹೊಲ- ತೋಟಗಳ ತೋರಣ. ತೊನೆದಾಡುವ ರಾಗಿ, ಭತ್ತದ ಪೈರುಗಳು; ತೆಂಗು, ಪೇರಲ, ಹೂವು, ತರಕಾರಿಗಳ ತೋಟಗಳಿಂದ ಎಲ್ಲೆಲ್ಲೂ ಹಸಿರು ಮುಕ್ಕಳಿಸುವ ದೃಶ್ಯಗಳು ನೋಡಲು ನಯನಮನೋಹರವಾಗಿದ್ದವು. ತೋಟಗಳಲ್ಲಿ ಬೆಳೆಯುತ್ತಿದ್ದ ಹೂ, ಹಣ್ಣು, ಸೊಪ್ಪುಗಳನ್ನು ಮಾರ್ಕೆಟಿಗೆ ಕೊಂಡೊಯ್ದು ಮಾರಿ, ನಾಲ್ಕು ಕಾಸು ಸಂಪಾದಿಸಿ, ಅದರಿಂದ ಮನೆಗಳಿಗೆ ಸುಣ್ಣಬಣ್ಣ ಬಳಿಸುತ್ತಿದ್ದರು, ಗುಡಿಸಲು ಮನೆಗಳನ್ನು ಕಿತ್ತು ಹೆಂಚಿನ, ಕಲ್ಲು ಚಪ್ಪಡಿಗಳ
ಮಾಳಿಗೆಗಳೊಂದಿಗೆ ಸುಸಜ್ಜಿತಗೊಳಿಸುತ್ತಿದ್ದರು. ಸೈಕಲ್ ಗಳನ್ನು ಕೊಂಡು ತರಕಾರಿಗಳನ್ನು ಸಾಗಿಸುವ ವಾಹನವನ್ನಾಗಿ ಮಾಡಿಕೊಂಡರು, ಹೊಸ ಬಟ್ಟೆ-ಬರೆ ಹೊಲೆಸಿಕೊಂಡರು. ಬದಲಾವಣೆಯ ಗಾಳಿ ಬಲವಾಗಿಯೇ ಬೀಸತೊಡಗಿತು.

ಅಭಿವೃದ್ಧಿಯ ಅವಾಂತರಗಳು

ಊರು ಎಲ್ಲಾ ದಿಕ್ಕಿಗೂ ಹಬ್ಬಿದಂತೆಲ್ಲ, ಕೆಲವರು ನಮ್ಮ ಬಳಿ ಬಂದು ನೀರು ಕೊಂಡೊಯ್ಯಲು ದೂರವಾಗುತ್ತದೆಂದು ತಮ್ಮ ಮನೆಗಳ ಅಕ್ಕಪಕ್ಕದಲ್ಲೇ ಬಾವಿ ತೆಗೆಸಿ ನಮ್ಮಲ್ಲಿಗೆ ಬರುವುದನ್ನು ನಿಲ್ಲಿಸಿದರು. ನೋಡನೋಡುತ್ತಿದ್ದಂತೆಯೇ ಅವರಿಗಿಂತ ನಾವೇನು ಕಡಿಮೆಯೆಂದು ಹಟಕ್ಕೆ ಬಿದ್ದವರಂತೆ ಬೀದಿಗೊಂದು ಬಾವಿ ತೆಗೆಸಿಕೊಳ್ಳತೊಡಗಿದರು. ಅಡುಗೆಗೆ ನಮ್ಮ ನೀರನ್ನು ಉಪಯೋಗಿಸುವುದು ನಿಲ್ಲುತ್ತಿದ್ದಂತೆಯೇ, ದಿನವೂ ಬೆಳಗ್ಗೆ ಸಂಜೆ ದನಕರುಗಳನ್ನು ನೇರವಾಗಿ ನಮ್ಮಲ್ಲಿಗೆ ತಂದು ನೀರು ಕುಡಿಸತೊಡಗಿದರು, ಬಟ್ಟೆಗಳನ್ನು ನಮ್ಮಲ್ಲಿಯೇ ಜಾಲಿಸತೊಡಗಿದರು, ಸ್ನಾನವೂ ನಿಂತುಹೋಗಿ ಮಲಸ್ವಚ್ಛತೆಗೆ ನಮ್ಮನ್ನು ಬಳಸಿ ಅಪವಿತ್ರಗೊಳಿಸಲು ತೊಡಗಿದರು. ಕೊನೆಗೆ ಗಂಗಾಪೂಜೆಯು ಬಾವಿಯ ಬಳಿಗೆ ಸ್ಥಳಾಂತರಗೊಂಡು ನಾವು ಸಂಪೂರ್ಣ ನಿರ್ಲಕ್ಷಕ್ಕೊಳಗಾದೆವು. ಇದನ್ನೆಲ್ಲಾ ಕಂಡು, ದುಃಖಗೊಂಡು ಅಳು ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತೆವು. ಆದರೆ ಅದನ್ನು ನೋಡಲಾಗಲಿ, ಸಂತೈಸಲಾಗಲಿ ಯಾರೂ ಇಲ್ಲದೆ ಮತ್ತಷ್ಟು ಖಿನ್ನರಾದೆವು.

ಒಂದು ದಿನ ಊರಿನವರೆಲ್ಲ ಗುಂಪುಗೂಡಿ ನೆರೆದಿರುವುದನ್ನು ಕಂಡು ಕುತೂಹಲದಿಂದ ಏನಿರಬಹುದೆಂದು ಚಿಂತಿಸತೊಡಗಿದೆವು. ಮಲಸ್ವಚ್ಛತೆಗೆ ಬಂದಿದ್ದ ಗೆಳೆಯರಿಬ್ಬರ ಮಾತಿನಿಂದ ವಿಷಯ ತಿಳಿಯಿತು, ಪಂಚಾಯತಿಯವರು ಊರಿನ ಬೀದಿಗಳಿಗೆಲ್ಲ ಮೋರಿ ನಿರ್ಮಿಸಿ, ಎಲ್ಲಾ ಮನೆಗಳ ಬಚ್ಚಲು ನೀರು ರಸ್ತೆಯ ತುಂಬೆಲ್ಲ ಹರಿಯುವುದನ್ನು ತಡೆಯಲು ಕಾರ್ಯೋನ್ಮುಖರಾಗಿದ್ದಾರಂತೆ. ಒಂದೆರಡು ತಿಂಗಳ ನಂತರ ಮೋರಿ ಕೆಲಸಗಳೆಲ್ಲ ಮುಗಿದು ಕಲುಷಿತ ನೀರನ್ನೆಲ್ಲ ಒಗ್ಗೂಡಿಸಿ ನಮ್ಮ ಒಡಲಿಗೆ ಸೇರಿಸಬೇಕೆ! ಅಯ್ಯೋ, ಇವರಿಗೇಕೆ ಬಂತು ಇಂತಹ ದುರ್ಬುದ್ಧಿ? ತಾತ ಮುತ್ತಾತನ ಕಾಲದಿಂದ ನಮ್ಮನ್ನೇ ಸರ್ವಸ್ವವನ್ನಾಗಿಸಿಕೊಂಡು, ಈಗ ಈ ರೀತಿ ಮಾಡಲು ಇವರಿಗೆ ಮನಸ್ಸು ಹೇಗೆ ಬಂತು? ಅಷ್ಟು ದೊಡ್ಡ ಊರಲ್ಲಿ ಒಬ್ಬರಾದರೂ ಪ್ರತಿಭಟಿಸುವುದಿರಲಿ, ತಡೆಯಲಾದರೂ ಮುಂದೆ ಬರಬೇಡವೇ? ಎಷ್ಟು ಬೇಗ ನಮ್ಮನ್ನು ಮರೆತುಬಿಟ್ಟರೆಂದು ಇಡೀ ದಿನ ಬಿಕ್ಕಳಿಸಿ ಅತ್ತೆವು. ಆದರೇನು ಪ್ರಯೋಜನ? ವರ್ಷಗಟ್ಟಲೆ ಉಪಯೋಗ ಪಡೆದು ಇದೀಗ ನಮ್ಮ ಕುತ್ತಿಗೆ ಹಿಸುಕಿ ಪ್ರಾಣ ತೆಗೆಯುತ್ತಿದ್ದಾರೆಂದು ಕೋಪವೂ ಬಂತು. ಆದರೆ ಬಡವನ ಕೋಪ ದವಡೆಗೆ ಮೂಲ ಎಂಬಂತೆ ಯಾರಿಗೂ ಬೇಡದ ಈ ನತದೃಷ್ಟೆಯರ ಕೋಪದಿಂದ ಏನು ತಾನೇ ಮಾಡಲು ಸಾಧ್ಯ? ಎಲ್ಲವನ್ನೂ ನೋಡುತ್ತಾ ಮೂಕಪ್ರೇಕ್ಷಕರಾಗುವುದನ್ನು ಕಲಿತೆವು.

ಸಹೋದರಿಯರ ಆರ್ತನಾದ

ನಮ್ಮ ಶುಭ್ರ ಸ್ಪಟಿಕತೆ ಕ್ರಮೇಣ ಮಾಯವಾಗತೊಡಗಿತು, ಬಣ್ಣವೂ ಕಳೆಗುಂದಿ ನೀರು ಸಸ್ಯಗಳು ಬೆಳೆಯತೊಡಗಿದವು,  ನನ್ನೊಡಲಿನ ಜಲಚರಗಳು ವಿಲವಿಲ ಒದ್ದಾಡುತ್ತಾ ಸಾಯತೊಡಗಿದವು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನಳನಳಿಸುತ್ತಿದ್ದ ಭತ್ತದ ಗದ್ದೆಗಳೆಲ್ಲಾ ರೋಗ ಬಾಧೆಗೆ ತುತ್ತಾಗತೊಡಗಿದವು. ತೋಟದಲ್ಲಿ ಹೂ ತರಕಾರಿ ಬೆಳೆಗಳು ನಿಸ್ತೇಜವಾಗತೊಡಗಿದವು. ಮನುಷ್ಯರು ಇದರಿಂದ ಎಚ್ಚೆತ್ತುಕೊಂಡು ತಮ್ಮ ತಪ್ಪು ಸರಿಪಡಿಸಿಕೊಂಡು ಮತ್ತೆ ನಮ್ಮನ್ನು ಶುದ್ಧೀಕರಿಸುತ್ತಾರೆ ಎಂದುಕೊಂಡೆವು, ಆದರೆ ಆದದ್ದೇ ಬೇರೆ.

ನಮಗೆ ಕೂಗಳತೆಯ ದೂರದಲ್ಲಿ  ವಿಶಾಲ ವಿಸ್ತೀರ್ಣದ ಕಾರ್ಖಾನೆಗಳ ಸಮುಚ್ಚಯಗಳು ತಲೆಯೆತ್ತತೊಡಗಿತು. ಒಂದೊಂದೇ ಕಾರ್ಖಾನೆಗಳು ಸ್ಥಾಪನೆಗೊಳ್ಳತೊಡಗಿದವು.  ಕಾರ್ಖಾನೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಯತೊಡಗಿದರು. ಇದರಿಂದ ಊರಿನ ಬಾವಿಗಳೆಲ್ಲ ಒಣಗಿ, ಊರಲ್ಲೂ ಕೊಳವೆಬಾವಿಗಳು ಆಕ್ರಮಿಸಿಕೊಂಡವು‌. ನೂರಾರು ವರ್ಷಗಳಿಂದ ನಮ್ಮಲ್ಲಿ ಶೇಖರವಾಗಿದ್ದ ಶುದ್ಧ ನೀರೆಲ್ಲ ಹಿಂಗಿ,ಕೇವಲ ಕೊಳಚೆ ನೀರು ನಮ್ಮೊಡಲಲ್ಲಿ ತುಂಬಿತು.

ಕೈತುಂಬಾ ಹಣ ಸಿಕ್ಕಿದ್ದರಿಂದ ಜನರೆಲ್ಲಾ ತಮ್ಮ ತಮ್ಮ ಹೊಲಗದ್ದೆಗಳನ್ನು ಮಾರಿಕೊಳ್ಳತೊಡಗಿದರು. ಜನರ ಜೇಬು ಜಬರ್ದಸ್ತ್ ಆಗತೊಡಗಿದಂತೆ ನಾಲ್ಕು ಐದು ಅಂತಸ್ತುಗಳ ಬಾಡಿಗೆ ಮನೆಗಳು ತಲೆಯೆತ್ತಿ, ಜನಸಂಖ್ಯೆ ಹೆಚ್ಚಿ,ಕೊಳಚೆ ನೀರು ನದಿಯಂತೆ ಬಂದು ನಮ್ಮೊಡಲು ಸೇರತೊಡಗಿತು. ಕಟ್ಟಡಗಳ ತ್ಯಾಜ್ಯ, ಊರಿನ ಮಾಂಸದಂಗಡಿಗಳ ಹೊಲಸು, ಮನೆಗಳ, ಬೀದಿಗಳ ಕಸವೆಲ್ಲ ರಾಶಿರಾಶಿಯಾಗಿ ನಮ್ಮೊಡಲಲ್ಲಿ ಬೀಳತೊಡಗಿತು. ನಾವು ಮಲಿನವಾದಂತೆ ಕೊಳವೆ ಬಾವಿಗಳ ನೀರೂ ಮಲಿನಗೊಂಡು, ಜನರೆಲ್ಲ ತುರಿಕೆ, ಕಜ್ಜಿಗಳಂತಹ ಚರ್ಮರೋಗಗಳಿಂದ, ಹೃದಯಸಂಬಂಧಿ ಕಾಯಿಲೆಗಳಿಂದ ನರಳತೊಡಗಿದರು. ಈಗಲಾದರೂ ನಮ್ಮ ಬೆಲೆ ಅರ್ಥವಾಗುತ್ತದೆಂದುಕೊಂಡೆವು, ನಮಗೆ ಕಾಯಕಲ್ಪದ ಭಾಗ್ಯ ದೊರೆಯಬಹುದೆಂದು ಕಾದೆವು. ಆದರೆ ಕುರುಡು ಕಾಂಚಾಣ ಕುಣಿಯುತ್ತಿತ್ತು, ಬಿಸ್ಲೆರಿ ನೀರಿನ ಮೊರೆಯೋದರೇ ಹೊರತು ನಮ್ಮನ್ನು ಶುದ್ಧೀಕರಿಸುವ ಯೋಚನೆಯನ್ನೇ ಮಾಡಲಿಲ್ಲ.

ಇನ್ನೊಂದು ಗುಟ್ಟನ್ನು ನಿಮಗೆಲ್ಲರಿಗೂ ರಟ್ಟಾಗಿಸಲೇಬೇಕು. ಒಂದು ದಿನ ಬೆಳಗಿನ ಜಾವ ಮೂರು -ನಾಲ್ಕು ಗಂಟೆಯ ಸಮಯ. ನೀರಿನ ಟ್ಯಾಂಕರ್ ಗಳು ಸಾಲುಸಾಲಾಗಿ ನಮ್ಮ ಬಳಿ ಬರತೊಡಗಿದವು. ಇವತ್ತೇನಾದರೂ ವಿಶೇಷವೇ? ಇಷ್ಟು ಹೊತ್ತಿನಲ್ಲಿ, ಇನ್ನೂ ಕತ್ತಲಲ್ಲಿ ಗಾಡಿಗಳನ್ನು ತೊಳೆಯಲು ಬರುತ್ತಿದ್ದಾರಲ್ಲ ಎಂದುಕೊಂಡೆವು. ಆದರೆ ನೋಡುನೋಡುತ್ತಿದ್ದಂತೆ ಮೋಟಾರ್ ಗಳನ್ನು ತೆಗೆದು ನನ್ನೊಡಲಿಗೆ ತೂರಿಸಿ ನೀರನ್ನು ತುಂಬಿಸಿಕೊಳ್ಳತೊಡಗಿದರು.  ಬೇಸಿಗೆಯ ಸಮಯದಲ್ಲಿ ನೀರಿಗೆ ಹಾಹಾಕಾರವುಂಟಾಗಿ, ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡುವವರಿಗೆ ಡಿಮ್ಯಾಂಡ್ ಜಾಸ್ತಿಯಾಗಿ, ಹಣದಾಸೆಗಾಗಿ ಬೋರ್ವೆಲ್ ನೀರಿನ ಜೊತೆಗೆ ನಮ್ಮ ನೀರನ್ನು ಸೇರಿಸಿ ಸರಬರಾಜು ಮಾಡಲು ನಿಶ್ಚಯಿಸಿದ್ದಾರೆಂದು ಡ್ರೈವರ್ ಗಳ ಮಾತಿನಿಂದ ಸತ್ಯ ತಿಳಿದು ಆಘಾತಕ್ಕೊಳಗಾದೆವು. ಈ ಜನ್ಮದಲ್ಲಿ ಮನುಷ್ಯರನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲವೆಂದು ನಿಶ್ಚಯಿಸಿ, ಕರುಳು ಕಿತ್ತಂತಾಗಿ ವ್ಯಾಕುಲಗೊಂಡೆವು.

ಶಾಶ್ವತ ಕೋವಿಡ್ ಸೋಂಕಿತರು

ಇಷ್ಟು ಸಾಲದೆಂಬಂತೆ ಜನರಿಗೆ ಸೈಟ್ ಗಳ ಆಸೆ ತೋರಿಸಿ, ಬಡಾವಣೆ ನಿರ್ಮಿಸಿದ ಬಿಲ್ಡರ್ ಗಳು , ನನ್ನ ವಿಶಾಲತೆಯನ್ನು ಕುಗ್ಗಿಸಿದರು. ಅವನಿಂದ ಎಂಜಲು ತಿಂದ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ನಮ್ಮನ್ನು ಅವನಿಗೆ ತಲೆ ಹಿಡಿದುಬಿಟ್ಟರು. ನಮ್ಮ ಅಂದ- ಚಂದ, ಇನ್ನೂ ಅಳಿದುಳಿದಿದ್ದ ಸೌಂದರ್ಯವನ್ನೆಲ್ಲ ಹೀರಿ, ನಮ್ಮನ್ನು ಸಂಪೂರ್ಣ ಬೆತ್ತಲೆಗೊಳಿಸಿದರು. ನಾವೀಗ
ಸುಕೋಮಲೆಯರಲ್ಲ, ಕುರೂಪಿಗಳು; ನಮ್ಮಲ್ಲೀಗ ಪವಿತ್ರತೆ ಇಲ್ಲ, ಕಳಂಕಿತೆಯೇ ಎಲ್ಲಾ. ಇದೀಗ ನಮ್ಮ ಬಳಿ ಓಡಾಡುವವರೆಲ್ಲ ತಮ್ಮ ಕೈಗಳನ್ನೇ ಮಾಸ್ಕ್ ಗಳನ್ನಾಗಿಸಿಕೊಂಡು, ಮುಖ ಸಿಂಡರಿಸಿಕೊಂಡು, ನಮ್ಮೆಡೆಗೆ ಥೂ ಎಂದು ಉಗಿಯುತ್ತ ಬಿರುಸಾದ ಹೆಜ್ಜೆಯಿಟ್ಟು ಬೇಗ ಬೇಗ ದೂರಹೋಗುತ್ತಾರೆ. ಒಂದು ಕಾಲದ ಕಾಮಧೇನುವಾಗಿದ್ದ ನಾವೀಗ ಯಾರಿಗೂ ಬೇಡವಾದ, ಎಲ್ಲರಿಂದಲೂ ತಿರಸ್ಕೃತರಾದ ಶಾಶ್ವತ ಕೋವಿಡ್-19 ಸೋಂಕಿತೆಯರು. ಇದಿಷ್ಟು ನಮ್ಮ ಕಥೆ -ವ್ಯಥೆ.

ಎರಡು ವರ್ಷದ ಹಿಂದೆ ಇದ್ದಕ್ಕಿದ್ದಂತೆ ನಮ್ಮ ಸ್ವಚ್ಛತೆ ಆರಂಭವಾಯಿತು. ಅದಕ್ಕಾಗಿ ಒಟ್ಟು ಮೂರು ಕೋಟಿ ರೂ. ಹಣ ಬಿಡುಗಡೆಯಾಗಿದೆಯೆಂದು ತಿಳಿಯಿತು. ಮತ್ತೆ ಮೊದಲಿನ ಸುವರ್ಣಕಳೆ ನಮ್ಮದಾಗುತ್ತದೆಂದು ಸಂಭ್ರಮಪಟ್ಟೆವು. ಕೆರೆಯ ಒಡಲಲ್ಲಿ ದ್ವೀಪಗಳು ಬಂದವು. ಸುತ್ತಲೂ ನಡಿಗೆ ಪಥ ಬಂತು. ಆದರೆ ಇದ್ದಕ್ಕಿದ್ದಂತೆ ಕೆಲಸ ನಿಂತುಹೋಯಿತು. ಮೂರು ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದಂತಾಯಿತು. ಇತ್ತೀಚೆಗೆ ಮತ್ತೆ ಕೆಲವರು ಬಂದು ನಡಿಗೆಪಥಕ್ಕೆ ಸಿಮೆಂಟ್ ಸ್ಲಾಬ್ ಹಾಕಿಸಿ ಮಾಯವಾದರು. ಅದಕ್ಕೆಷ್ಟು ಹಣ ನುಂಗಿದರೋ ತಿಳಿಯದು. ಕೊಳೆತು ನಾರುತ್ತಿರುವ ನಮ್ಮನ್ನು ಶುದ್ಧೀಕರಿಸುವುದು ಬಿಟ್ಟು, ಯಾವ ಪುರುಷಾರ್ಥಕ್ಕೆ ನಡಿಗೆ ಪಥ ಸಿದ್ಧಗೊಳಿಸುತ್ತಿದ್ದಾರೆಯೋ? ತಿಳಿಯದು.

ಮೀನುಗಾರಿಕೆ ಇಲಾಖೆ ಏನು ಮಾಡುತ್ತಿದೆ?

ಇನ್ನಾದರೂ ನಮ್ಮನ್ನು ಸುಮ್ಮನೆ ಬಿಟ್ಟಿದ್ದಾರೆಂದುಕೊಂಡಿರಾ? ಕೆಲವರು ನಮ್ಮ ನೀರಿಗೆ ಪಂಪ್ ಸೆಟ್ ಜೋಡಿಸಿ, ಇನ್ನೂ ಅಳಿದುಳಿದ ಜಮೀನುಗಳಿಗೆ ಹಾಯಿಸಿ, ಹೂ ತರಕಾರಿ ಬೆಳೆದು ಮಾರಿ ಹಣ ಮಾಡುತ್ತಲೇ ಇದ್ದಾರೆ. ಅದನ್ನು ತಿಂದವರ ಗತಿಯೇನು? ಇನ್ನೂ ಹಲವರು ನನ್ನ ಒಡಲಿಂದ ಮೀನು ಹಿಡಿದು ಮಾರಿ ಜೀವನ ನಡೆಸುತ್ತಿದ್ದಾರೆ. ತಿಳಿಯದೆ ಅವನ್ನು ಕೊಂಡು ತಿನ್ನುವವರ ಗತಿಯೇನು?. ಕೆಲವು ಹೋಟೆಲ್ ನವರು ಸಹ ಕಡಿಮೆ ದರಕ್ಕೆ ಸಿಗುತ್ತದೆಂದು, ಇದೇ ಮೀನುಗಳನ್ನು ಕೊಂಡು ಬಗೆ ಬಗೆಯ ಖಾದ್ಯ ತಯಾರಿಸಿ ಗ್ರಾಹಕರಿಗೆ ಬಡಿಸುತ್ತಿದ್ದಾರೆ. ಅವರ ಆರೋಗ್ಯದ ಗತಿಯೇನು?ಇದೇ ಮೀನನ್ನು ತಿಂದು ಬದುಕುವ ಕೊಕ್ಕರೆ, ನೀರಕ್ಕಿ, ಹಾವು ಮುಂತಾದ ಜಲಚರಗಳ ಗತಿಯೇನು?

ನನ್ನಿಂದ ಕೇವಲ 50 ಅಡಿ ದೂರದಲ್ಲಿರುವ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಇದೆಲ್ಲಾ ಕಾಣಿಸುತ್ತಿಲ್ಲವೇ? ಕಚೇರಿಯಲ್ಲಿ ಕುಳಿತುಕೊಳ್ಳದೆ ಸದಾ ಫೀಲ್ಡ್ ವರ್ಕ್ ಎಂದು ಸುತ್ತುವ ಇವರುಗಳಿಗೆ ಪಕ್ಕದಲ್ಲಿರುವ ನನ್ನನ್ನೊಮ್ಮೆ ಕಣ್ಣೆತ್ತಿ ನೋಡುವ ವ್ಯವಧಾನವಿಲ್ಲವೇ? ಇದನ್ನೆಲ್ಲಾ ನೋಡಿ ಸುಮ್ಮನಿದ್ದಾರೆ. ಮೀನು ಹಿಡಿಯಲು ಟೆಂಡರ್ ಕೊಟ್ಟಿದ್ದಾರೆಯೇ? ತಿಳಿಯದು.ಹಾಗೇನಾದರೂ ಆಗಿದ್ದರೆ ಜನರ ಜೀವದ ಜೊತೆ  ಚೆಲ್ಲಾಟವಾಡುತ್ತಿರುವ ಇವರನ್ನೆಲ್ಲ ಏನು ಮಾಡಬೇಕು?. ಯಾರಿಗೆ ಏನಾದರಾಗಲಿ, ನಮಗೆ ಹಣ ದೊರೆತು ಜೀವನ ಸಾಗಲಿ ಎಂಬ ಧೋರಣೆಯೇ? ಈ ಅನ್ಯಾಯವನ್ನು ಎಲ್ಲರಿಗೂ ಕೂಗಿ ಜೋರಾಗಿ ಹೇಳೋಣವೆಂದರೆ, ನಮ್ಮ ಗಂಟಲಿನಿಂದ ಶಬ್ದವೇ ಹೊರಡದಂತೆ ಕಲ್ಮಶ ಮಾಡಿದ್ದಾರೆ. ಬಳಿಬಂದು ಕಿವಿಗೊಟ್ಟು ಆಲಿಸಿದರೆ ಪಿಸುಮಾತಿನಲ್ಲಾದರೂ ಹೇಳೋಣವೆಂದರೆ ಒಬ್ಬರೂ ಇತ್ತ ಸುಳಿಯುತ್ತಿಲ್ಲ.

ಊರಿನ ತುಂಬಾ ಕೋಟ್ಯಾಧಿಪತಿಗಳು; ಒಂದೊಂದು ಮನೆಯಲ್ಲಿ ಮಕ್ಕಳಿಗೊಂದೊಂದರಂತೆ ಮೂರು ನಾಲ್ಕು ಕಾರುಗಳು; ನಗರಕ್ಕೊಂದು ನಗರಸಭೆ; ಅದಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಹತ್ತಾರು ಉದ್ಯೋಗಿಗಳು;  ಸಿಟಿ ತುಂಬೆಲ್ಲಾ ಕೋಟ್ಯಾಂತರ ರೂ.ಗಳ ವ್ಯವಹಾರ ನಡೆಸುವ ಕಂಪನಿಗಳು; ಸಾವಿರಾರು ಕೋಟಿ ಲಾಭ ಘೋಷಿಸುವ ಕುಬೇರರು; ಸಣ್ಣ ನೀರಾವರಿ ಇಲಾಖೆ, ಕಿರು ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ, ನಾಗರಿಕ ಸೌಲಭ್ಯ ಇಲಾಖೆ, ಆರೋಗ್ಯ ಇಲಾಖೆ, ಅಬ್ಬಬ್ಬಬ್ಬಾ ಎಷ್ಟೊಂದು ಇಲಾಖೆಗಳು? -ಇವರೆಲ್ಲರೂ ಇದ್ದರೂ ನಮ್ಮನ್ನು ಸ್ವಚ್ಛಗೊಳಿಸಬೇಕೆಂಬ ಮನಸ್ಸು ಯಾರಿಗೂ ಬರುತ್ತಿಲ್ಲವಲ್ಲ? ಏನಾಗಿದೆ ಮನುಕುಲಕ್ಕೆ? ಎತ್ತ ಸಾಗಿದೆ ನಾಗರೀಕ ಜಗತ್ತು? ನೋಡೋಣ, ನಮ್ಮನ್ನು ಈ ಸ್ಥಿತಿಯಿಂದ ಪಾರುಮಾಡುವ ಭಗೀರಥರು ಯಾವಾಗ ಬರುತ್ತಾರೋ? ಅಲ್ಲಿಯವರೆಗೂ ನಾವು ಶಾಶ್ವತ ಕೋವಿಡ್ ಸೋಂಕಿತೆಯರು.

ಅಂದ ಹಾಗೆ ನಿಮಗೆ ನಮ್ಮ ಹೆಸರೇ ಹೇಳಲಿಲ್ಲ ಅಲ್ಲವೇ? ನಾವು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದೊಡ್ಡಕೆರೆ ಮತ್ತು ಬಿನ್ನಮಂಗಲ ಕೆರೆಗಳು ಎಂಬ ಸಹೋದರಿಯರು.

ನೆಲಮಂಗಲದ ನಾಗರಿಕರೇ, ಶತಮಾನಗಳಿಂದ ನಾವು ನಿಮ್ಮ ಪೂರ್ವಜರನ್ನು ಪೊರೆದಿದ್ದೇವೆ. ಆದಕಾರಣ ತಾವುಗಳು ಎಚ್ಚೆತ್ತುಕೊಂಡು ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯಿರಿ. ನಮ್ಮ ಕೆಳಗಿನ ಬೇಡಿಕೆಗಳನ್ನು ನಿಮ್ಮ ಬೇಡಿಕೆಗಳೆಂದು ತಿಳಿದು ಈಡೇರಿಸಲು ಪ್ರಯತ್ನಿಸಿ.
1) ನಮ್ಮ ಒತ್ತುವರಿ ತೆರವುಗೊಳಿಸಿ ಸುತ್ತಲೂ ಬೇಲಿ ಹಾಕಿಸಿ
2) ಕೊಳಚೆ ನೀರು ನಮ್ಮ ಒಡಲು ಸೇರದಂತೆ ಕ್ರಮವಹಿಸಿ,
3) ನಮ್ಮನ್ನು ಸಂಪೂರ್ಣ ಸ್ವಚ್ಛಗೊಳಿಸಿ
4) ಪಾರ್ಕ್, ನಡಿಗೆ ಪಥ, ಮಕ್ಕಳ ಆಟದ ಮೈದಾನ, ಬೋಟಿಂಗ್ ವ್ಯವಸ್ಥೆ ನಿರ್ಮಿಸಿ ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡಿ
5) ಮುಂದಿನ ದಿನಗಳಲ್ಲಿ ನಮ್ಮನ್ನು ಮಲಿನಗೊಳಿಸದೆ, ನಮ್ಮ ಸಹಜ ಸೌಂದರ್ಯವನ್ನು ಸದಾ ಕಾಪಾಡಿ.

ಹ್ಹಾ! ನೀವು ನಮ್ಮನ್ನು ಸ್ವಚ್ಛಗೊಳಿಸಲೇಬೇಕು. ಯಾಕೆಂದು ಕೇಳುವಿರಾ? ನಮ್ಮ ಐತಿಹಾಸಿಕ ಹಿನ್ನೆಲೆ ತಿಳಿದುಕೊಳ್ಳಿ. ಆಗ ನಿಮಗೇ ತಿಳಿಯುತ್ತದೆ ನಮ್ಮ ಮಹತ್ವ.

ಐತಿಹಾಸಿಕ ಹಿನ್ನೆಲೆ

ಸುಮಾರು 800 ವರ್ಷಗಳ ಹಿಂದೆ ಇಲ್ಲೆಲ್ಲ ಗೊಂಡಾರಣ್ಯ ದಿಂದ ಕೂಡಿ ಭೂಮಂಡಲ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಒಮ್ಮೆ ಈ ಹಾದಿಯಲ್ಲಿ ತೆರಳುತ್ತಿದ್ದ ಆ ಕಾಲದ ಸಾಮಂತರು ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿ ಗೊಂಡಾರಣ್ಯವನ್ನು ತೆರವುಗೊಳಿಸಿ ವಾಸಯೋಗ್ಯ ಸ್ಥಳವನ್ನಾಗಿ ಮಾಡಿ ಆಳತೊಡಗಿದರು.ಜನವಸತಿ ಪ್ರದೇಶಗಳಿಗೆ ನೀರು ಜೀವಾಧಾರವಾದ್ದರಿಂದ ನನ್ನನ್ನು (ದೊಡ್ಡಕೆರೆ) ಕಟ್ಟಿಸಿದರು.

1227 ರ ಸುಮಾರಿಗೆ ಇಲ್ಲಿ ಕಂಚುಗಾರ ಬೈಚನೆಂಬುವನು ಪ್ರಾಬಲ್ಯಕ್ಕೆ ಬಂದ. ಕಂಚು ಹಿತ್ತಾಳೆಯ ಪಾತ್ರೆ ಪಗಡೆಗಳನ್ನು ಮಾಡುತ್ತಾ, ಮಾರುತ್ತಾ ಹಣವಂತನಾಗಿ, ಪುಂಡರ ಗುಂಪು ಕಟ್ಟಿಕೊಂಡು ಬಲಿಷ್ಠನಾಗಿ, ಜನರನ್ನು ಕೊಳ್ಳೆ ಹೊಡೆದು ಬದುಕತೊಡಗಿದ. ಕೆರೆಯ ಪಕ್ಕ ಕೋಟೆ ಕೊತ್ತಲು ಕಟ್ಟಿಸಿ, ನೀಲಾವತಿ ಪಟ್ಟಣವೆಂಬ ಹೆಸರಿನಲ್ಲಿ ಆಳ್ವಿಕೆ ಆರಂಭಿಸಿದ. ಛಪ್ಪನ್ನಾರು ದೇಶಗಳಲ್ಲಿ ತನ್ನನ್ನು ಸೋಲಿಸಲು ಯಾರೂ
ಇಲ್ಲವೆಂದು ಮೆರೆಯತೊಡಗಿದ.

ಅವನಿಂದ ಸಂಕಷ್ಟಕ್ಕೊಳಗಾದ ಜನರು ಅಕ್ಕಪಕ್ಕದ ಸಾಮಂತರ ಸಹಾಯ ಯಾಚಿಸಿದರು.ಸಾಮಂತರುಗಳು ಬೈಚನ ಮೇಲೆ ಯುದ್ದ ಘೋಷಿಸಿದರು ಆದರೆ ಬೈಚ ಮೋಸದಿಂದ ಅವರನ್ನು ಸೋಲಿಸಿದ. ಆನಂತರ ಜನಗಳು ಆ ಕಾಲದ ಪ್ರಸಿದ್ಧ ಅಧಿಪತಿಗಳಾಗಿದ್ದ ಪೆನುಗೊಂಡೆದೇವರಾಯರ ಮೊರೆ ಹೋದರು. ಅವರ ರಕ್ಷಣೆಗೆಂದು ರಾಯರು ಬೈಚನ ಮೇಲೆ ಯುದ್ಧ ಘೋಷಿಸಿದರು. ತಾನು ಕಲಿತ ಮಾಯಾವಿ ವಿದ್ಯೆಯಿಂದ, ಕುಟಿಲೋಪಾಯಗಳಿಂದ ಬೈಚನು ಪೆನುಗೊಂಡೆರಾಯರನ್ನು ಸೋಲಿಸಿ, ಅವರ ಸೈನ್ಯವನ್ನು ಹಿಮ್ಮೆಟ್ಟಿಸಿದ. ನಂತರ ಬೈಚನ ಆಟೋಟೋಪ ಮತ್ತಷ್ಟು ಹೆಚ್ಚಾಯಿತು.

ಕೆಲವು ದಿನಗಳ ನಂತರ ಪೆನುಗೊಂಡೆದೇವರಾಯ ಕುಂಚಿಟಿಗರ ನಾಯಕನಾದ, ಮಹಾನ್ ಪರಾಕ್ರಮಿಯೆಂದು ಹೆಸರಾಗಿದ್ದ ಶಿವಭಕ್ತ ವಡ್ಡಗೆರೆ ವೀರಕ್ಯಾತರಾಯನನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡು, ಬೈಚನ ದುರುಳುತನವನ್ನು ವಿವರಿಸಿ ಅವನನ್ನು ಸೋಲಿಸಬೇಕೆಂದು, ಅದಕ್ಕಾಗಿ ದೊಡ್ಡಕೆರೆಯ ಹಿಂದಿನ ದೊಡ್ಡವಕ್ಕಳ ಭೂಮಿಯ
ಮಾನ್ಯವನ್ನು  ಕೊಡುವುದಾಗಿ ಎರೆಮಂಚನಹಳ್ಳಿ ಶಾಸನ ಬರೆಸಿದ.  ಅದರಂತೆ ವೀರಕ್ಯಾತರಾಯ ಪೆನುಗೊಂಡೆಯ  ಹಿರಿದಾದ ಸೈನ್ಯದಳದೊಂದಿಗೆ ಬೈಚನ ಪಟ್ಟಣದ ಬಳಿ ಬಂದು ಡೇರೆಯಾಕಿದ. ಅದು ಹೆದ್ದಾಳ ಎಂದು ಹೆಸರಾಗಿ, ಇದೀಗ ಹ್ಯಾಡಾಳು ಎಂದು ಕರೆಯಲಾಗುತ್ತದೆ.

ವೀರಕ್ಯಾತರಾಯನು ತನ್ನ ಪಟ್ಟಣದ ಸರಹದ್ದಿಗೆ ಬಂದಿರುವ ವಿಷಯ ಬೈಚನಿಗೆ ತಿಳಿದು,ಅವನು ದೊಡ್ಡವ್ಯಾಪಾರಿಯೆಂದು ಬಗೆದು ಅವನ ಬಳಿ ಬಂದು  ಸ್ನೇಹ ಬಯಸುತ್ತಾನೆ. ಮೂರು ದಿನದಲ್ಲಿ ಕಂಚಿನ ಪಂಚಮುಖದ ಗಂಟೆ ಮಾಡಿಕೊಟ್ಟರೆ ಗೆಳೆತನ ಮಾಡುತ್ತೇನೆಂದು ವೀರಕ್ಯಾತರಾಯ ಹೇಳುತ್ತಾನೆ. ಆಗಲೆಂದು ಬೈಚ ಒಪ್ಪುತ್ತಾನೆ. ಆದರೆ ಬೈಚನಿಗೆ ಅದು ಸಾಧ್ಯವಾಗುವುದಿಲ್ಲ. ಕೋಪಗೊಂಡ ವೀರಕೇತುರಾಯ ಆತನನ್ನು ಸಂಹರಿಸುತ್ತಾನೆ. ನೀಲಾವತಿ ಪಟ್ಟಣದ ಸೈನ್ಯಕ್ಕೂ ಪೆನುಗೊಂಡೆ ಸೈನ್ಯಕ್ಕೂ ಯುದ್ದವಾಗಿ  ವೀರಕ್ಯಾತರಾಯ ಜಯಶಾಲಿಯಾಗುತ್ತಾನೆ.

ನಂತರ ನೀಲಾವತಿ ಪಟ್ಟಣ ಅನೇಕ ಸಾಮಂತರಿಂದ ಒಳ್ಳೆಯ ಆಳ್ವಿಕೆಗೊಳಪಟ್ಟು ನೆಲಮಂಗಲವಾಗುತ್ತದೆ. ಮೊದಲಿದ್ದ ಭೂಮಂಡಲ (ಭೂ ಎಂದರೆ ನೆಲ,ಮಂಡಲ ಎಂಬುದು ಮಂಗಲ) ಹೆಸರು ಕೂಡ ನೆಲಮಂಗಲವೆನಿಸಲು ಕಾರಣವಾಗುತ್ತದೆ. ಹಾಗೆಯೇ ಹೇರಳವಾಗಿ ಭತ್ತ ಬೆಳೆಯುತ್ತಿದ್ದರಿಂದ (ನೆಲ್ಲು+ಅಂಗಳ) ಕೂಡ. ಮರದ ಮೇಲಿರಬೇಕಿದ್ದ ಮಂಗಗಳು ನೆಲದ ಮೇಲೆ ವಾಸಿಸುತ್ತಿದ್ದರಿಂದ ನೆಲಮಂಗಲವಾಯ್ತೆಂದು ಕೆಲವರು ಹಾಸ್ಯವಾಗಿ ಹೇಳುವುದುಂಟು. ನೆಲಮಂಗಲ ವಿಸ್ತಾರವಾಗಿ ಬೆಳೆಯುತ್ತದೆ. ಅದರ ಒಂದು ಭಾಗವನ್ನು ಬೇರೆಯಾಗಿಸಿ, ಬಿನ್ನಮಂಗಲ ಎಂದು ಹೆಸರಿಸಿ,ಅಲ್ಲೊಂದು ಕೆರೆಯನ್ನು ಕಟ್ಟಿಸುತ್ತಾರೆ. ಅವಳೇ ನನ್ನ ಸಹೋದರಿ.

ನೆಲಮಂಗಲದ ಊರು ಬಾಗಿಲಿನಲ್ಲಿ ಮರಿಯಕ್ಕನ ದೇವಸ್ಥಾನ, ಬಲಭಾಗದಲ್ಲಿ ಹಿಪ್ಪೆಆಂಜನೇಯಸ್ವಾಮಿ ದೇವಸ್ಥಾನ(ಬಾಗೇಪಲ್ಲಿ ವಂಶಜರು ದೇವಾಲಯದ ಪೂಜೆಗೆಂದು ಹಿಪ್ಪೆವನವನ್ನು ಉಂಬಳಿ ನೀಡಿದ್ದರು).ದೊಡ್ಡ ಕೆರೆಗೆ ಹೊಂದಿಕೊಂಡಂತೆ ಕೋಟೆ ಬೀದಿ, ಅಗ್ರಹಾರ, ಬ್ರಾಹ್ಮಣರ ಬೀದಿ, ತಲಕಾಡು ಸುಬ್ಬಾರಾವ್ ಬೀದಿಗಳೆಲ್ಲ ರೂಪುಗೊಳ್ಳುತ್ತವೆ. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ರವರು ತಮ್ಮ ಆಡಳಿತದ 25ನೇ ವರ್ಷಾಚರಣೆಗೆಂದು ನೆಲಮಂಗಲಕ್ಕೆ ಬಂದಿದ್ದ ಗುರುತಿಗೆ ಸಿಲ್ವರ್ ಜುಬಿಲಿ ಪಾರ್ಕ್ ಕೂಡ ಸಿದ್ಧವಾಗುತ್ತದೆ. ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಮುಂದಿನ ಕಥೆಯೇ ನಾವು ಇಲ್ಲಿಯವರೆಗೂ ಹೇಳಿದ ನಮ್ಮ ದುರಂತ ಕಥೆ. ಮಣ್ಣೆ ಮೋಹನ್ ರವರು ಬಂದು ನಮ್ಮ ಕಥೆಯನ್ನು ಕೇಳಿದ್ದರಿಂದ ಇದೆಲ್ಲವನ್ನು ಅವರಿಗೆ ತಿಳಿಸಿದ್ದೇವೆ.ನಮ್ಮ ಕಥೆ ಕೇಳಿ ನಿಮಗೆ ಏನನ್ನಿಸಿತು ಎಂಬುದನ್ನು ಅವರಿಗೆ ತಿಳಿಸಿ. ಹಾಗೆಯೇ ನಿಮ್ಮೂರಿನ ಕೆರೆಗಳು ಹೇಗಿವೆ ಎಂಬ ವಿಷಯವನ್ನೂ ಕೂಡ.

ಮಣ್ಣೆ ಮೋಹನ್.                        ಬೆಂಗಳೂರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');