ಪರಿಶಿಷ್ಟ ಜಾತಿ/ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ದೌರ್ಜನ್ಯ ಪ್ರಕರಣ- ಸಮರ್ಪಕ ತನಿಖೆಗೆ ಕ್ರಮ : ಜಿಲ್ಲಾಧಿಕಾರಿ ಎಂ.ಜಿ. ಹೀರೆಮಠ

0
🌐 Belgaum News :

ಬೆಳಗಾವಿ, ಜು.07: ಸ್ಮಶಾನ ಭೂಮಿ ಒದಗಿಸಲು ಸರಕಾರಿ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಎಲ್ಲ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಪ್ರಸ್ತಾವ ಸಲ್ಲಿಕೆಯಾದ ತಕ್ಷಣವೇ ಮಂಜೂರಾತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂಜಿ.ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.07) ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಅನ್ವಯ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಸಭೆಗಳಲ್ಲಿ ಚರ್ಚಿಸಿದಂತೆ ಬೈಲಹೊಂಗಲ, ಅಥಣಿ ಹಾಗೂ ಇತರ ತಾಲೂಕುಗಳಲ್ಲಿ ಸ್ಮಶಾನಕ್ಕೆ ಜಾಗ ನೀಡುವ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು,ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕದಲ್ಲಿದ್ದು,ಪರೀಶಿಲನೆ ನಡೆಸಲಾಗುತ್ತಿದೆ.
ಸ್ಮಶಾನಕ್ಕೆ ಜಾಗ ನೀಡಲು ಖಾಸಗಿ ಭೂ ಮಾಲೀಕರಿಗೂ ಸಹ ಅವಕಾಶ ನೀಡಲಾಗುವುದು. ಖಾಸಗಿ ಭೂ ಮಾಲೀಕರು ಸ್ವಇಚ್ಛೆಯಿಂದ ಜಾಗ ನೀಡಲು ಮುಂದಾಗಬೇಕು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ತಿಳಿಸಿದರು.

ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆ ಪ್ರಕ್ರಿಯೆ ಆರಂಭಿಸಲು ಸೂಚನೆ:

ಇದೇ ವೇಳೆ,ನಗರದ ಆರ್ಪಿ.ಡಿ. ವೃತ್ತಕ್ಕೆ ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನಿಯಮಾವಳಿ ಪ್ರಕಾರ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಿದರು.
ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಖರೀದಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಮರ್ಪಕ ತನಿಖೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಮುಂದಿನ ದೌರ್ಜನ್ಯ ತಡೆ ಸಭೆಗಳಿಗೆ ಡಿ.ಎಸ್.ಪಿ.ಗಳು ಕೂಡ ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇನ್ನು,ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಬಾರದು ಎಂದು ಮೈಕ್ರೊಫೈನಾನ್ಸ್ ಹಾಗೂ ಮತ್ತಿತರ ಹಣಕಾಸು ಸಂಸ್ಥೆಗಳ ಸಭೆ ನಡೆಸಿ, ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ತಿಳಿಸಿದರು.
ವಿದ್ಯಾರ್ಥಿ ವೇತನ ವಿಳಂಬವಾಗಿದ್ದರೆ ಕೂಡಲೇ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 2021ರ ಫೆಬ್ರವರಿಯಿಂದ ಮೇ ತಿಂಗಳಿನವರೆಗೆ 69 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಯಾವುದೇ ಪ್ರಕರಣಗಳ ಪರಿಹಾರ ಬಾಕಿ ಇರುವುದಿಲ್ಲ ಎಂದು ತಿಳಿಸಿದರು.

ಅರಣ್ಯ ಹಕ್ಕು ಪತ್ರ ವಿತರಣೆಯ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ತಿಳಿಸಿದರು.
ದೌರ್ಜನ್ಯ ಪ್ರಕರಣ ಸಮರ್ಪಕ ತನಿಖೆಗೆ ಕ್ರಮ:

ನ್ಯಾಯಾಲಯದಲ್ಲಿ ದೌರ್ಜನ್ಯ ಪ್ರಕರಣಗಳನ್ನು ಸಮರ್ಪಕ ನಿರ್ವಹಣೆಗೆ ಒಬ್ಬ ಅಧಿಕಾರಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೆಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ತಿಳಿಸಿದರು.
ಬೆಳಗಾವಿ ನಗರ ಪೆಲೀಸ್ ಉಪ ಆಯುಕ್ತರಾದ ವಿಕ್ರಮ್ ಆಮಟೆ, ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಯಮಾವಳಿ ಪ್ರಕಾರ ತನಿಖೆಯ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದರು.
ಯಾವುದೇ ಪ್ರಕರಣಗಳಲ್ಲಿ ’ಬಿ’ ರಿಪೆರ್ಟ್ ಹಾಕುವುದು ಸುಲಭವಲ್ಲ; ಹಿರಿಯ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುವುದರಿಂದ ವಿನಾಕಾರಣ ಬಿ ರಿಪೆರ್ಟ್ ಹಾಕಲಾಗುವುದಿಲ್ಲ ಎಂದು ಸದಸ್ಯರ ಗಮನಕ್ಕೆ ತಂದರು.

ವಿವಿಧ ಬೇಡಿಕೆ ಈಡೇರಿಸುವಂತೆ ಸದಸ್ಯರಿಂದ ಆಗ್ರಹ:

ಸದಸ್ಯರಾದ ಅಶೋಕ ಅಸೋದೆ, ನಿಪ್ಪಾಣಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯ ಅಶೋಕ ಅಸೋದೆ ಅವರು, ಸ್ಥಳೀಯ ಭೂಮಾಲೀಕರು ಜಮೀನು ನೀಡಲು ಮುಂದಾಗಿದ್ದು, ಇದನ್ನು ತಕ್ಷಣವೇ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವಂತಹ ಡಿ.ಎಸ್.ಪಿ ಮಟ್ಟದ ಅಧಿಕಾರಿಗಳು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದರೆ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಾಧ್ಯವಾಗಲಿದೆ.
ದೌರ್ಜನ್ಯ(ಅಟ್ರಾಸಿಟಿ) ಪ್ರಕರಣಗಳನ್ನು ನಿರ್ವಹಿಸುವ ಸಂಬಂಧಿಸಿದ ಡಿ.ಎಸ್.ಪಿ. ಗಳನ್ನು ಕೂಡ ಸಭೆಗೆ ಕರೆಸಬೇಕು. ಇದರಿಂದ ಇಂತಹ ಪ್ರಕರಣಗಳ ಸಮರ್ಪಕ ತನಿಖೆ ಹಾಗೂ ದೋಷಾರೋಪಣೆ ಪಟ್ಟಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ನೂರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದರೂ ಉತಾರ ಇಲ್ಲದಿರುವ ಕಾರಣಕ್ಕೆ ಪರಿಹಾರ ಮತ್ತಿತರ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಅಂತಹ ಕುಟುಂಬಗಳಿಗೆ ಉತಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.

ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಇದುವರೆಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಬಾಕಿ ಉಳಿದಿದೆ. ಆದಷ್ಟು ಬೇಗನೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಸುರೇಶ್ ತಳವಾರ ಅವರು, ಹುಕ್ಕೇರಿ ತಾಲ್ಲೂಕು ಇಂಗಳಿ ಗ್ರಾಮದ ಸ್ಮಶಾನ ಭೂಮಿ ಇನ್ನೂ ಉತಾರ ನೀಡುತ್ತಿಲ್ಲ. ಇನ್ನೂ 36 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಭೂಮಿ ಮಂಜೂರಾತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ತಹಶೀಲ್ದಾರರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಎರಡನೇ ಅಲೆಯಲ್ಲಿ ಕೋವಿಡ್ ನಿಂದ ಮೃತರಾದವರ ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡಲಾಗುತ್ತಿದೆ. ಅದೇ ಪ್ರಕಾರ ಮೊದಲ ಅಲೆಯಲ್ಲಿ ಮೃತರಾದವರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆಯಬೇಕು ಎಂದು ಆಗ್ರಹಿಸಿದರು.

ಸದಸ್ಯರಾದ ವಿಜಯ ತಳವಾರ ಮಾತನಾಡಿ, ಬೈಲಹೊಂಗಲದ ತಾಲ್ಲೂಕಿನ ಬೆಳವಡಿ ಗ್ರಾಮದ ಸ್ಮಶಾನ ಭೂಮಿ ಮಂಜೂರಾತಿ ವಿಳಂಬವಾಗುತ್ತಿದೆ. ಕಳೆದ ಮೂರು ಸಭೆಗಳಲ್ಲಿ ಚರ್ಚೆ ನಡೆದರೂ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಸದಸ್ಯ ವಿಜಯ ತಳವಾರ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಆರ್ಪಿ.ಡಿ. ವೃತ್ತದಲ್ಲಿ ವೀರ ಮದಕರಿ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರತಿ ಸಭೆಗಳಲ್ಲಿ ಚರ್ಚೆ ಮಾಡಲಾಗಿದ್ದರೂ ಯಾವುದೇ ಕ್ರಮಗಳಾಗುತ್ತಿಲ್ಲ. ನಗರದ ರಸ್ತೆಗೆ ಅಪ್ರತಿಮ ಹೋರಾಟಗಾರನ ಹೆಸರಿಡಲು ಹಾಗೂ ಪ್ರತಿಮೆ ಸ್ಥಾಪನೆಗೆ ಇಷ್ಟೊಂದು ತಾತ್ಸಾರ ಏಕೆ ಎಂದು ಪ್ರಶ್ನಿಸಿದರು.

ಅರಣ್ಯ ಹಕ್ಕುಪತ್ರ ವಿತರಣೆಯಲ್ಲಿ ವಿನಾಕಾರಣ ವಿಳಂಬ ಮಾಡಲಾಗುತ್ತಿದ್ದು, ಕೂಡಲೇ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರಿಗೆ ಮುಕ್ತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದರೂ ಕೆಲ ರಾಜಕೀಯ ವ್ಯಕ್ತಿಗಳು ತಮಗೆ ಬೇಕಾದವರಿಗೆ ಮಾತ್ರ ಟೋಕನ್ ನೀಡುವ ಮೂಲಕ ಲಸಿಕಾಕರಣವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದರ್ಶನ್ ಹೆಚ್.ವಿ,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ್ ಊಳ್ಳಾಗಡ್ಡಿ,ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ
ಅನುದಾನ ಬಳಕೆಯಾಗದಿದ್ದರೆ ಅಧಿಕಾರಿಗಳ ಮೇಲೆ ಕ್ರಮ: ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಲಾಗಿರುವ ಗುರಿಯನ್ನು ಸಾಧಿಸದೆ ಇರುವ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.07) ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2020- 2021 ನೇ ಸಾಲಿನ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ಅವರು,ಇಲಾಖೆಗಳು ಕಾಮಗಾರಿಗಳನ್ನು ಕೈಗೊಳ್ಳುವ ಬದಲು ನಿಯಮಾವಳಿಗಳನ್ನು ಪಾಲಿಸಿ ಫಲಾನುಭವಿಗಳಿಗೆ ಅನುಕೂಲವಾಗುವಂತಹ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಒಂದು ವೇಳೆ ಅರ್ಹ ಫಲಾನುಭವಿಗಳನ್ನು ಲಭ್ಯವಿಲ್ಲದಿದ್ದರೆ ವಂತಿಕೆ ಹಣ,ವಸತಿ ನಿಲಯಗಳಿಗೆ ಹಾಸಿಗೆ ವ್ಯವಸ್ಥೆ, ವೈದ್ಯಕೀಯ ಖರ್ಚು ವೆಚ್ಚ ಭರಿಸುವುದು ಮುಂತಾದ ಕಾರ್ಯ ಚಟುವಟಿಕೆಗಳಿಗೆ ಅನುದಾನವನ್ನು ಉಪಯೋಗಿಸಬೇಕು ಎಂದು ತಿಳಿಸಿದರು.
ಗುರಿ ಸಾಧಿಸದ ವಿವಿಧ ಇಲಾಖೆಗಳಿಗೆ ನೋಟಿಸ್:

ನಿಗದಿತ ಗುರಿ ಸಾಧಿಸದ ಭಾರೀ ನೀರಾವರಿ ಇಲಾಖೆ, ಹೆಸ್ಕಾಂ ಹಾಗೂ ಬಿಮ್ಸ್ ಸೇರಿದಂತೆ ಇತರ ಇಲಾಖೆಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದರು.

ಬಿಡುಗಡೆಯಾದ ಅನುದಾನವನ್ನು ಸಮರ್ಪಕ ಬಳಕೆಗೆ ಅನುಕೂಲವಾಗುವಂತೆ ಪರ್ಯಾಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಅಂತಿಮವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಕೆಲ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಕಡಿಮೆಯಾಗಿದೆ. ಒಂದು ವೇಳೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಂಡಿದ್ದರೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ, ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.
ಬಿಡುಗಡೆಯಾದ ಅನುದಾನದಲ್ಲಿ ಎಸ್.ಸಿ.ಪಿ ಶೇ.93.34 ಮತ್ತು ಟಿ.ಎಸ್.ಪಿ ಶೇ.93.14 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಟಿ.ಎಸ್.ಪಿ. ಯೋಜನೆಯಡಿ ಬಾಕಿ ಉಳಿದ ಅನುದಾನದಲ್ಲಿ ಎಸ್.ಟಿ. ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿನ ಜನರಿಗೆ ಹೆರಿಗೆ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಆಂಬ್ಯುಲನ್ಸ್ ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದರ್ಶನ್ ಹೆಚ್.ವಿ. ಮಾತನಾಡಿ, ಕೆಲವು ತಾಲೂಕುಗಳಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಜನಸಂಖ್ಯೆ ಕಡಿಮೆ ಇರುವುದರಿಂದ ಪ್ರಗತಿಯ ದರದಲ್ಲಿ ಇಳಿಕೆ ಕಂಡು ಬಂದಿದೆ ಎಂದು ತಿಳಿಸಿದರು.

ಕೆಲ ತಾಂತ್ರಿಕ ಕಾರಣಗಳಿಂದ ಭೌತಿಕ ಪ್ರಗತಿ ಸಾಧನೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ಸಮನ್ವಯತೆಯೊಂದಿಗೆ ಅನುಷ್ಠಾನಗೊಳಿಸಲಾಗುವುದು ಎಂದರು.

ಶಾಲೆ ಶೌಚಾಲಯ, ಅಂಗನವಾಡಿ ನಿರ್ಮಾಣ, ಪೈಪಲೈನ್ ಅಳವಡಿಕೆ ಮತ್ತಿತರ ಕಾಮಗಾರಿಗಳು ಇತರೆ ಯೋಜನೆಗಳಲ್ಲೂ ಕೈಗೆತ್ತಿಕೊಳ್ಳುವುದರಿಂದ ಇವೇ ಕಾಮಗಾರಿ ಎಸ್.ಸಿ.ಪಿ ಮತ್ತು ಟಿ ಎಸ್ ಪಿ ಯೋಜನೆಯಡಿ ಕೈಗೊಂಡರೆ ಡಬಲ್ ಕೆಲಸವಾಗುತ್ತದೆ ಎಂಬುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದನ್ನು ತಡೆಗಟ್ಟುವ ಉದ್ದೇಶದಿಂದ ಇತರೆ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ತೆಗೆದುಕೊಳ್ಳದಂತೆ ಈಗಾಗಲೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ್ ಉಳ್ಳಾಗಡ್ಡಿ,ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್.,ಚಿಕ್ಕೋಡಿಯ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುರಿತು ಜಿಲ್ಲಾ ಮಟ್ಟದ ಸಭೆ
ಸರ್ಕಾರದ ನಿರ್ದೇಶನದಂತೆ ಅವಲಂಬಿತರಿಗೆ ನೆರವು: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಅವಲಂಬಿತರಿಗೆ ಯಾವ ರೀತಿಯ ನೆರವು ನೀಡಬೇಕೆಂದು ಸ್ಪಷ್ಟ ಮಾರ್ಗಸೂಚಿಗಳಿಲ್ಲ.ಆದ್ದರಿಂದ ಈ ಕುರಿತು ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.07) ನಡೆದ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ಸ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅವಲಂಬಿತರ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಅವರಿಗೆ ಯಾವ ರೀತಿಯ ನೆರವು ನೀಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಾರ್ಗದರ್ಶನ ಕೂಡ ಕೇಳಲಾಗಿದೆ.

ಜಿಲ್ಲೆಯಲ್ಲಿ ಯಾರೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಇರುವುದಿಲ್ಲ. ಆದರೆ ಅವರ ಅವಲಂಬಿತರಿಗೆ ಯಾವ ರೀತಿಯ ನೆರವು ನೀಡಬಹುದು ಎಂಬುದರ ಬಗ್ಗೆ ಸರಕಾರದ ಗಮನಸೆಳೆಯಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಸಫಾಯಿ ಕರ್ಮಚಾರಿಗಳಿಗೆ ಕಡ್ಡಾಯವಾಗಿ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು ಮತ್ತು ಅವುಗಳನ್ನು ತಪ್ಪದೇ ಬಳಕೆ ಮಾಡುವುದನ್ನು ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮನುಷ್ಯನ ಮಲಮೂತ್ರವನ್ನು ಪೌರಕಾರ್ಮಿಕರು
ಯಾವುದೇ ಸುರಕ್ಷತಾ ಪರಿಕರಗಳನ್ನು ಬಳಸದೇ ಸ್ವಚ್ಛಮಾಡುವುದು ಆಕ್ಷೇಪಾರ್ಹ ವಿಷಯ. ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಪೂರೈಸಿ,
ಅವರು ಕರ್ತವ್ಯದ ಅವಧಿಯಲ್ಲಿ ಧರಿಸುತ್ತಿರುವ ಬಗ್ಗೆ ಎಲ್ಲ ಸಂಸ್ಥೆಗಳ ಮುಖ್ಯಸ್ಥರು ಮೇಲ್ವಿಚಾರಣೆ ಮಾಡುವಂತೆ ತಿಳಿಸಿದರು.

ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ನಿರಂತರ ನೀರು ಪೂರೈಸಲು ಸಿಂಪಿಕ್ಸ್ ಅಳವಡಿಸಿ ಸ್ವಚ್ಛತೆಗೆ ಗಮನಕೊಡುವಂತೆ ತಿಳಿಸಿದರು.

ಅಲ್ಲದೇ, ಗುರುತಿಸಲ್ಪಟ್ಟ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್‍ಗಳ
ಕುಟುಂಬಗಳಿಗೆ ಗುರುತಿನ ಚೀಟಿ ಮತ್ತುಆರ್ಥಿಕ ಸೌಲಭ್ಯವನ್ನುಒಂದು ತಿಂಗಳೊಳಗಾಗಿ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಲು ತಿಳಿಸಿದರು.

ಪೌರಕಾರ್ಮಿಕರ ವಸತಿಗೃಹಗಳ ಮಾಲೀಕತ್ವದ ಆಧಾರದ
ಮೇಲೆ ಅವರಿಗೆ ಹಕ್ಕುಪತ್ರ ವಿತರಿಸುವಬಗ್ಗೆ ಕೂಡಲೇ ಕ್ರಮ ವಹಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧಿಕಾರಿಗಳಿಗೆ ಸೂಚಿಸಿದರು.

1973 ಗಿಂತ ಮುಂಚೆಯಿಂದ ಪೌರಕಾರ್ಮಿಕರ ವಸತಿಗೃಹದಲ್ಲಿ ವಾಸಿಸುತ್ತಿರುವವರಿಗೆ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ಒದಗಿಸುವುದು ಹಾಗೂ ಸರಕಾರದ ಮಾರ್ಗಸೂಚಿ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು.

ಈ ಬಗ್ಗೆ ಮಾರ್ಗಸೂಚಿಯಲ್ಲಿರುವ ಕೆಲ ಗೊಂದಲವನ್ನು ಪರಿಹರಿಸಿಕೊಂಡು 1973 ಕ್ಕಿಂತ ಪೂರ್ವದಿಂದ ವಾಸವಾಗಿರುವವರಿಗೆ ಕೂಡ ಮನೆ ಒದಗಿಸಲು ಸರಕಾರಕ್ಕೆ ತಾವೇ ಖುದ್ದಾಗಿ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಹಿರೇಮಠ ಅವರು ಸ್ಪಷ್ಟಪಡಿಸಿದರು.

ಮತ್ತೊಂದು ಸುತ್ತಿನ ಸಭೆ ನಡೆಸಿ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಒದಗಿಸಲಾಗುವುದು ಎಂದರು.

ಮಹಾನಗರ ಪಾಲಿಕೆಯ ವತಿಯಿಂದ ಎಲ್ಲ ಸಫಾಯಿ ಕರ್ಮಚಾರಿಗಳಿಗೆ ಸುರಕ್ಷಾ ಪರಿಕರಗಳನ್ನು ಒದಗಿಸಲಾಗಿದೆ.
ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಕರ್ಮಚಾರಿಗಳಿಗೆ ಮತ್ತು ಸಂಬಂಧಿಸಿದ ಗುತ್ತಿಗೆದಾರರಿಗೂ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಜಗದೀಶ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದರ್ಶನ್ ಹೆಚ್.ವಿ,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ್ ಉಳ್ಳಾಗಡ್ಡಿ,ಚಿಕ್ಕೋಡಿಯ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');