ಜಲಜೀವನ ಮಿಷನ್- ಕುಡಿಯುವ ನೀರು ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ

0

ಬೆಳಗಾವಿ: ಎಲ್ಲರಿಗೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಜಲಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಐದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು, ಈ ನೆರವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದಲ್ಲಿ ಗುರುವಾರ (ಜು.8) ನಡೆದ 2021-22 ನೇ ಸಾಲಿನ ಕೆಡಿಪಿ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುರಗೋಡಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ನಿರಂತರ ವಿದ್ಯುತ್ ಒದಗಿಸಲು ಅಗತ್ಯವಿರುವ ಎಕ್ಸ್‌ಪ್ರೆಸ್‌ ಫೀಡರ್ ಲೈನ್ ನಿರ್ಮಿಸಿ ಕೊಡಬೇಕು ಎಂದು ಹೆಸ್ಕಾಂ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹದಿಂದ ಹಾನಿಗೊಳಗಾಗಿರುವ ಸಂಪರ್ಕ ಸೇತುವೆ ಮತ್ತಿತರ ಮೂಲಸೌಕರ್ಯಗಳ ಯಾವುದಾದರೂ ಕೆಲಸ ಉಳಿದುಕೊಂಡಿದ್ದರೆ ಹೊಸದಾಗಿ ಪ್ರಸ್ತಾವ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ 3 ನೇ ಅಲೆ ನಿರ್ವಹಣೆ- ಸಿದ್ಧತೆಗೆ ಸೂಚನೆ:
ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಾದರೆ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಇರಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮೂರನೇ ಅಲೆಯ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿವೆ. ಆದರೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಗೊಬ್ಬರ ಮಾರಾಟ-ಪಿಕೆಪಿಎಸ್ ಗಳಿಗೆ ಲೈಸೆನ್ಸ್ ನೀಡಲು ನಿರ್ದೇಶನ:
ಗೊಬ್ಬರ ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಮುಕ್ತವಾಗಿ ಲೈಸೆನ್ಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಸಮರ್ಪಕ ಪೂರೈಕೆಗೆ ಅನುಕೂಲವಾಗುವಂತೆ ರೈತರ ನೇತೃತ್ವದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲೈಸೆನ್ಸ್ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಸಹಕಾರಿ ಸಂಘಗಳಿಗೆ ಗೊಬ್ಬರ ಮಾರಾಟಕ್ಕೆ ಲೈಸೆನ್ಸ್ ನೀಡುವಾಗ ಯಾವುದೇ ರೀತಿಯ ಷರತ್ತುಗಳನ್ನು ಹಾಕಬಾರದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಧಾರವಾಡ ಜಿಲ್ಲೆಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಗ್ರಾಮಗಳ ರೈತರಿಗೆ ಬೆಳೆವಿಮೆ ಪರಿಹಾರ ನಿಗದಿಯಲ್ಲಿ ಹಲವಾರು ವರ್ಷಗಳಿಂದ ಮುಂದುವರಿದಿರುವ ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್ ವಿತರಣಾ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ:
ಪ್ರವಾಹ ಸಂದರ್ಭದಲ್ಲಿ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ವಿದ್ಯುತ್ ಪರಿವರ್ತಕಗಳು, ವಿದ್ಯುತ್ ವಾಹಕಗಳು, ಕಂಬಗಳು ಹಾಗೂ ವಿದ್ಯುತ್ ತಂತಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು.

ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸೂಕ್ತ ಜಾಗೆ ಗುರುತಿಸಬೇಕು. ಸರ್ಕಾರಿ ಜಾಗೆ ಲಭ್ಯವಿದ್ದರೆ ಜಿಲ್ಲಾಧಿಕಾರಿಗಳು ತಕ್ಷಣವೇ ಮಂಜೂರು ಮಾಡುತ್ತಾರೆ. ಒಂದು ಖಾಸಗಿ ಜಾಗೆ ಗುರುತಿಸಿದರೂ ಖರೀದಿಗೆ ಅನುಮತಿ ನೀಡಲಾಗುವುದು ಎಂದರು.

33 ಕೆ.ವಿ. ವಿದ್ಯುತ್ ಸ್ಟೇಷನ್ ಗಳನ್ನು 110 ಕೆ.ವಿ. ಗೆ ಉನ್ನತೀಕರಿಸಲು ಶಾಸಕರು ಜಾಗೆ ಒದಗಿಸಿಕೊಟ್ಟರೆ ವಿದ್ಯುತ್ ಸ್ಟೇಷನ್ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಎಲ್ಲರಿಗೂ ಲಸಿಕೆ ನೀಡಿ: ಸತೀಶ ಜಾರಕಿಹೊಳಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಜಿಲ್ಲೆಯ ಎಲ್ಲರಿಗೂ ಲಸಿಕೆ ಹಾಕುವ ಅಗತ್ಯವಿದೆ. ಆದರೆ ಲಸಿಕಾಕರಣ ನಿಧಾನಗತಿಯಲ್ಲಿ ಸಾಗಿದೆ. ಮುಂದಿನ ಎಷ್ಟು ದಿನಗಳಲ್ಲಿ ಲಸಿಕಾಕರಣ ಪೂರ್ಣಗೊಳ್ಳಲಿದೆ ಎಂದು ಪ್ರಶ್ನಿಸಿದರು.

ಗ್ರಾಮಗಳ ಮ್ಯೂಟೇಷನ್ ಪ್ರಕ್ರಿಯೆ ಯಾವ ಹಂತದಲ್ಲಿ ಎಂದು ಕೇಳಿದರು. ಈ ಪ್ರಕ್ರಿಯೆ ನಡೆದರೆ ಗ್ರಾಮ ಮಟ್ಟದಲ್ಲಿರುವ ಅನೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ಸತೀಶ ಹೇಳಿದರು.

ಸುಳ್ಳುಜಾತಿ ಪ್ರಮಾಣಪತ್ರದ ಬಗ್ಗೆ ಚರ್ಚೆ:

ಸುಳ್ಳು ಜಾತಿ ಪ್ರಮಾಣಪತ್ರದ ಹಾವಳಿ ಜಾಸ್ತಿಯಾಗುತ್ತಿದೆ. ಅಧಿಕಾರಿಗಳಿಗೆ ಗೊತ್ತಿದ್ದರೂ ಪ್ರಮಾಣಪತ್ರ ವಿತರಿಸುತ್ತಿದ್ದಾರೆ ಎಂದು ಶಾಸಕ ಪಿ.ರಾಜೀವ್  ತಿಳಿಸಿದರು.
ಸುಳ್ಳುಜಾತಿ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳ ಪ್ರತ್ಯೇಕ ಸಭೆಯನ್ನು ನಡೆಸಿ ಸಮಗ್ರವಾಗಿ ಚರ್ಚೆ ನಡೆಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಚನ್ನದಾಸರು ಎಂಟು ಪ್ರಕರಣಗಳು ಹಾಗೂ ಗೋಕಾಕ ತಾಲ್ಲೂಕಿನಲ್ಲಿ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದ 25 ಪ್ರಕರಣಗಳ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಉಮಾ ಸಾಲಿಗೌಡರ ಸಭೆಗೆ ಮಾಹಿತಿಯನ್ನು ನೀಡಿದರು.

ತೋಟಗಾರಿಕೆ ಬೆಳೆಹಾನಿ ಸಮರ್ಪಕ ಸಮೀಕ್ಷೆಗೆ ಸೂಚನೆ:
ಕೈಮಗ್ಗ, ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಅವರು, ಅತಿವೃಷ್ಟಿ ಸಂದರ್ಭದಲ್ಲಿ ಬೆಳೆಹಾನಿ ಆದಾಗ ಪ್ರತಿಯೊಬ್ಬ ರೈತರಿಗೂ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯಾಗಿರುವುದರಿಂದ ಇದು ಪೂರ್ಣಗೊಂಡ ಬಳಿಕ ನಿರ್ವಹಣೆ ಬಗ್ಗೆಯೂ ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಶಾಸಕರ ವಿವಿಧ ಮನವಿ:
ಶಾಸಕ ಮಹಾಂತೇಶ ಕೌಜಲಗಿ, ಮುರಗೋಡಗೆ ಕುಡಿಯುವ ನೀರು ಪೂರೈಕೆಯಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ರೈತರಿಗೆ ಟಿಸಿ ನೀಡಲು ಹೆಸ್ಕಾಂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಶಾಸಕ ಅಭಯ್ ಪಾಟೀಲ, 557 ಮನೆಹಾನಿಗಳ ಸಮೀಕ್ಷೆ ಮಾಡಲಾಗಿದೆ. ಇದುವರೆಗೆ ಲಾಗಿನ್ ಮಾಡದಿರುವುದರಿಂದ ಪರಿಹಾರ ಸಿಗುತ್ತಿಲ್ಲ ಎಂದು ಒತ್ತಾಯಿಸಿದರು. ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ 557 ಕುಟುಂಬಗಳಿಗೆ ಮೊದಲ ಕಂತು ಪರಿಹಾರವೇ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಅಂಜಲಿ ನಿಂಬಾಳ್ಕರ್, ಖಾನಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗುವಂತೆ ನೈಸರ್ಗಿಕವಾಗಿ ಹರಿಯುವ ನೀರು ಸಂಗ್ರಹಕ್ಕೆ ಸಣ್ಣ ಪ್ರಮಾಣದ ಜಲಾಶಯ ಮಾದರಿ ಬಂಡಿಂಗ್ಸ್ ನಿರ್ಮಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

ಕೋವಿಡ್ ನಿಂದ ಮೃತಪಟ್ಟವರಿಗೆ ಮರಣ ಪ್ರಮಾಣಪತ್ರ ನೀಡಲು ಕಿರಿಕಿರಿ:

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಕೋವಿಡ್ ನಿಂದ ಮೃತಪಟ್ಟವರಿಗೆ ಸರಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಆದರೆ ಮರಣ ಪ್ರಮಾಣಪತ್ರ ನೀಡಲು ವಿನಾಕಾರಣ ಸತಾಯಿಸಲಾಗುತ್ತಿದೆ.  ಆಸ್ಪತ್ರೆಗಳಲ್ಲಿ ಬೆಡ್ ದೊರಕದೇ ಮನೆಯಲ್ಲಿ ಕೋವಿಡ್ ನಿಂದ ಮೃತರಾದವರಿಗೆ ಕೋವಿಡ್ ನಿಂದ ಮೃತಪಟ್ಟಿರುವ ಕುರಿತು ಮರಣಪ್ರಮಾಣ ಪತ್ರ ದೊರಕುತ್ತಿಲ್ಲ. ಇದರಿಂದಾಗಿ ಅಂತಹ ಕುಟುಂಬಗಳು ಪರಿಹಾರ ದಿಂದ ವಂಚಿತಗೊಳ್ಳುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು.

ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಸುರೇಶ್ ಅಂಗಡಿ, ಜವಳಿ ಸಚಿವ ಶ್ರೀಮಂತ ಪಾಟೀಲ, ವಿಪ ಸದಸ್ಯರಾದ ಮಹಾಂತೇಶ ಕವಟಿಗಿಮಠ, ವಿವೇಕರಾವ್ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಓ ದರ್ಶನ್ ಎಚ್.ವಿ‌., ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');