ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಸಮೀಕ್ಷೆ ಕುರಿತು ಪೂರ್ವಭಾವಿ ಸಭೆ ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ

0
🌐 Belgaum News :

ಬೆಳಗಾವಿ, ಜು.28 : ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಬಾಲಕಾರ್ಮಿಕ ಪದ್ಧತಿ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಕ್ಕಳ ಸಮೀಕ್ಷೆಗೆ ಎಲ್ಲ ರೀತಿಯ ಅಗತ್ಯ ನೆರವು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜು.28) ನಡೆದ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳ ಹಿತರಕ್ಷಣೆ ದೃಷ್ಟಿಯಿಂದ ನಾವು ಕೆಲಸ ಮಾಡಬೇಕಿದೆ. ಬಾಲಕಾರ್ಮಿಕರು ಕಂಡುಬಂದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರರು ಹಾಗೂ ಪೆÇಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಸಮೀಕ್ಷೆಗಿಂತ ಮುಂಚೆ ಅನಿರೀಕ್ಷಿತ ಭೇಟಿಯ ಮೂಲಕ ಪರಿಶೀಲನೆ ನಡೆಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಬೇಕು ಇದರಿಂದ ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ನಿರ್ದೇಶನ ನೀಡಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿ ಪತ್ತೆಹಚ್ಚುವುದಕ್ಕೆ ನಿರಂತರವಾಗಿ ಪರಿಶೀಲಿಸಿ, ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದು, ಈ ಕುರಿತು ಸಮೀಕ್ಷೆ ನಡೆಸಲಾಗುವುದು. ಕಾಯ್ದೆ ತಿದ್ದುಪಡಿ ಪ್ರಕಾರ 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ 14-18 ವಯೋಮಿತಿಯ ಮಕ್ಕಳು ಅಪಾಯಕಾರಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.
ಪರಿಷ್ಕೃತ ಕಾಯ್ದೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಬಾಲಕಾರ್ಮಿಕ ಪದ್ಥತಿ ಕಂಡುಬಂದಾಗ ಸಂಬಂಧಿಸಿದ ಅಧಿಕಾರಿಗಳು ಮಾತ್ರವಲ್ಲದೇ ಯಾರು ಬೇಕಾದರೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಹೇಳಿದರು.


ಈ ವೇಳೆ ಮಾತನಾಡಿದ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಭಾರತಿ ವಾಳ್ವೇಕರ ಅವರು ಕೋವಿಡ್ ಸಂಕಷ್ಟದ ಪರಿಸ್ಥಿತಿಯು ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ. ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳುವ ಅಗತ್ಯವಿದೆ ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಇಲಾಖೆ ಹಾಗೂ ಸಂಸ್ಥೆಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಮುತುವರ್ಜಿಯಿಂದ ಸಮೀಕ್ಷೆ ಕೈಗೊಳ್ಳಬೇಕು. ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆ ಜತೆಗೆ ಸೂಕ್ತ ಪುನರ್ವಸತಿ ಕುರಿತು ಗಮನಹರಿಸಬೇಕಿದೆ ಎಂದು ಭಾರತಿ ವಾಳ್ವೇಕರ ನಿರ್ದೇಶನ ನೀಡಿದರು.
ಕಾರ್ಮಿಕ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸಮೀಕ್ಷೆ ಕೈಗೊಳ್ಳಲಾಗುವುದು ಹಾಗೂ ಸೆಪ್ಟೆಂಬರ್ ಅಂತ್ಯದೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಜಿಲ್ಲೆಯಾದ್ಯಂತ ತಂಡಗಳನ್ನು ರಚಿಸಿ ವಿಭಾಗವಾರು ಮೂರು ಹಂತಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಪರಿಷ್ಕೃತ ಎನ್.ಸಿ.ಎಲ್.ಪಿ. ಪ್ರಕಾರ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಸಮೀಕ್ಷೆಯ ವಿಧಾನಗಳನ್ನು ಸಭೆಯಲ್ಲಿ ವಿವರಿಸಲಾಯಿತು.
ಕಾರ್ಮಿಕ ಅಧಿಕಾರಿಗಳಾದ ತರನ್ನುಂ ಬೆಂಗಾಲಿ, ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಜ್ಯೋತಿ ಕಾಂತೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');