ತಂದೆಗೆ ತಕ್ಕ ಮಗ; ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ರಾಜಕೀಯ ಪಯಣದ ನೋಟ

0
🌐 Belgaum News :

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಂತ ಹಂತವಾಗಿ ರಾಜಕೀಯದಲ್ಲಿ ಉನ್ನತಿಯನ್ನು ಪಡೆದವರು. ಯಾವುದೇ ವಿವಾದಗಳಿಲ್ಲದೇ ಅವರು ತಮ್ಮ ಜೀವನದುದ್ದಕ್ಕೂ ನಡೆದುಕೊಂಡು ಬಂದಿದ್ದಾರೆ. ತಂದೆ ಎಸ್.ಆರ್. ಬೊಮ್ಮಾಯಿ ಅವರಂತೆ ಮಗ ಕೂಡ ಮುಖ್ಯಮಂತ್ರಿಯಾಗಿದ್ದಾರೆ.

1960ರ ಜನವರಿ 28ರಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಹಾಗೂ ಗಂಗಮ್ಮ ಅವರ ಪುತ್ರರಾಗಿ ಜನಿಸಿದರು. ಹುಬ್ಬಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿಯುಸಿ ಶಿಕ್ಷಣ ಪಡೆದರು. ನಂತರ ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ತಾಂತ್ರಿಕ ವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 1983 ರಿಂದ 1985ರ ವರೆಗೆ ಪುಣೆಯ ಎಲ್ಕೋ ಕಂಪೆನಿಯಲ್ಲಿ ತಾಂತ್ರಿಕ ತರಬೇತಿ ಪಡೆದರು.

ವಿದ್ಯಾಭ್ಯಾಸದ ಸಂದರ್ಭದಲ್ಲೇ ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿ ಆಸಕ್ತಿ:

ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲೇ ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಬೊಮ್ಮಾಯಿ, ಸಂಘಟನೆಗಳಲ್ಲಿ ಸಕ್ರಿಯರಾದರು. ಜಯಪ್ರಕಾಶ್ ನಾರಾಯಣ ಅವರ ಹೋರಾಟದಿಂದ ಪ್ರೇರಣೆಗೊಂಡು ಬೊಮ್ಮಾಯಿ ರಾಜಕೀಯಕ್ಕೆ ಧುಮುಕಿದ್ದರು.

1993ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆಯ ನೇತೃತ್ವ ವಹಿಸಿ ತಮ್ಮ ರಾಜಕೀಯ ಜೀವನದಲ್ಲಿ ಗುರುತಿಸಿಕೊಂಡರು.

1995ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ ಮಾಡಿದ್ದರು. 1995ರಲ್ಲಿ ರಾಜ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಬೊಮ್ಮಾಯಿ ಅವರು 1996 ರಿಂದ 1997ರ ವರೆಗೆ ಆಗಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಪಡೆದಿದ್ದಾರೆ.

ವಿಧಾನ್ ಪರಿಷತ್ ಗೆ ಆಯ್ಕೆ:

ರಾಜ್ಯ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಚುನಾಯಿತರಾದರು. 2007ರ ಜುಲೈನಲ್ಲಿ ಧಾರವಾಡದಿಂದ ನರಗುಂದದವರೆಗೆ 232 ಕಿ.ಮೀ. ಉದ್ದದ ರೈತರೊಂದಿಗೆ ಪಾದಯಾತ್ರೆಯಲ್ಲಿ 21 ದಿನಗಳ ಕಾಲ ಪಾಲ್ಗೊಂಡಿದ್ದರು.

ಬಳಿಕ ಜನತಾದಳ ತೊರೆದು ಭಾರತೀಯ ಜನತಾ ಪಕ್ಷ ಸೇರಿದ ಅವರು, 2008ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಎರಡನೆ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಶಿಗ್ಗಾವಿ ಕ್ಷೇತ್ರದಿಂದ 2018ರಲ್ಲಿ ಮರು ಆಯ್ಕೆಯಾದ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಯಡಿಯೂರಪ್ಪ ಅವರ ರಾಜೀನಾಮೆಯಿಂದ ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');