ಅರೆ ಸರಕಾರಿ ನೌಕರಿ ಎಂಬ ಚಾಕರಿಯ ಬಗ್ಗೆ ಒಂದಷ್ಟು

0
🌐 Belgaum News :

ಅರೆ ಸರಕಾರಿ ನೌಕರಿ ಎಂಬ ಚಾಕರಿಯ ಬಗ್ಗೆ ಒಂದಷ್ಟು

ಯಾರ್ರಿ ಜಮಖಂಡಿ ಮುದೋಳ ಮಹಾಲಿಂಗಪೂರ ಬಾಗಲಕೋಟ… ರೈಟ್ ರೈಟ್…ಎನ್ನುತ್ತ ವಿಷಲ್ ಹೊಡೆಯುವ ಸಾರಿಗೆ ಸಂಸ್ಥೆಯ ಬಸ್ಸಿನ ಕಂಡಕ್ಟರು,ಅಥಣಿ ಕಾಗವಾಡ ಮೀರಜ್ ಅಂತ ಕೂಗುವ ಚಾಲಕರು,ದೇಶದ ಉದ್ದಗಲಕ್ಕೂ ರಾಜ್ಯ ರಾಜ್ಯಗಳನ್ನು ಸಂಪರ್ಕಿಸುವ,ಮದುವೆಯ ದಿಬ್ಬಣ ಕರೆದೊಯ್ಯುವ, ಶಾಲಾ ಮಕ್ಕಳ ಪ್ರವಾಸಕ್ಕೆ ಬರುವ ಮತ್ತು ಹೀಗೆ ಬಂದು ಹಾಗೆ ಹೋಗುವ ಬಣ್ಣ ಬಣ್ಣದ ಬಸ್ಸುಗಳ ನಡುವೆ ಯಾಕೋ ಮನಸ್ಸು ಹರಿದಾಡುತ್ತಿದೆ.ಅಲ್ಲಲ್ಲಿ ಬಸ್ ನಿಲ್ದಾಣಗಳಲ್ಲಿ ಟೈಮ್ ಪಾಸ್ ಲಿಂಬುಳಿ ಶೇಂಗಾ ಅಂತಲೊ,ಚಿಪ್ಸ್ ಪಾಪಕಾರ್ನ್ ಬಡಂಗ್ ಮಿಕ್ಸ ಅಂತಲೋ ಇಲ್ಲಾ ಪಾನಿಕಾ ಬಾಟಲ್ ಹಾಂ ಪಾನಿಕಾ ಬಾಟಲ್ ಅಂತಲೋ ಕೂಗುತ್ತಾ ಬರುತ್ತಿದ್ದ ಜೀವಗಳು ಸುಮ್ಮನೆ ಕಣ್ಣ ಮುಂದೆ ಗಿರಕಿ ಹೊಡೆಯುತ್ತಿವೆ.

 

ಬಸ್ ಸ್ಟ್ಯಾಂಡಿನ ಮೂಲೆಯಲ್ಲಿ ಗಿರಾಕಿಗೆ ಕಾಯುವ ವೇಶ್ಯೆಯಿಂದ ಹಿಡಿದು ಸಾರ್ವಜನಿಕ ಶೌಚಾಲಯದ ಉಸ್ತುವಾರಿ ನೋಡಿಕೊಳ್ಳುವವನ ತನಕ ಎಲ್ಲರೂ ಮಾಡುವದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಅನ್ನುವ ಸತ್ಯವನ್ನು ಸಾರುವ ಆ ಮುಖಗಳಲ್ಲಿ ಅಪರೂಪಕ್ಕೆ ಮೂಡುವ ಪರಿಚಯದ ನಗು ಮನಸ್ಸು ತಣಿಸುತ್ತದೆ.ಆದರೆ ಈ ಕೊರೊನಾ ಎಂಬ ಸಂಕಷ್ಟದ ಅಲೆಯಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಓಡುವ ಬಸ್ಸುಗಳು,ಅವರಿಗಾಗಿ ಕಾಯುತ್ತ ಕಲೆಕ್ಷನ್ ಇಲ್ಲಾ ಅಂದ್ರೆ ಕಮಿಷನ್ ಇಲ್ಲ ಅನ್ನೊ ಚಿಂತೆಯಲ್ಲಿ ನಿಂತ ಖಾಕಿ ತೊಟ್ಟ ಜೀವಗಳನ್ನು ನೋಡಿದಾಗ ಯಾಕೋ ಹತ್ತಾರು ವರ್ಷದ ಹಿಂದಿನ ಕೆಂಪು ಬಸ್ಸು ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ಜನರಿಂದ ಕಿಕ್ಕಿರಿದು ತುಂಬಿದ ಬಸ್ಸಿನಲ್ಲಿ ನಿದ್ದೆಗೆ ಜಾರಿ ಯಾವುದೊ ಹಿಂದಿನ ಊರಿನಲ್ಲಿ ಇಳಿಯಬೇಕಾದ ವ್ಯಕ್ತಿ ಟಿಕೆಟ್ ಚಕ್ಕರ್ ಬಂದು ಎಚ್ಚರಿಸಿದಾಗ ಹೊಮ್ಮುವ ನಗೆ,ಯಾರೋ ತಮಾಷೆಯಾಗಿ ಮಾತನಾಡುವ ಕಂಡಕ್ಟರ್ ಅಥವಾ ಗತ್ತಿನಿಂದ ವಾಹನ ಚಲಾಯಿಸುವ ಡ್ರೈವರ್ ಗಳ ಬದುಕಿನ ಅಸಲಿಯತ್ತು ಮಾತ್ರ ಹೊರಜಗತ್ತಿಗೆ ತೆರೆದುಕೊಳ್ಳುವ ದೆ ಇಲ್ಲ.ಪಿಯುಸಿ ಕಲಿತು ಪರ್ಸೆಂಟೆಜ್ ಮೇಲೆ ನೇರನೆಮಕಾತಿ ಆದವರು ಬಹುತೇಕ ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳೇ ಆಗಿರುತ್ತಾರೆ ಹೊರತು ಯಾರೂ ಕೋಟ್ಯಾಧೀಶರ ಮಕ್ಕಳಲ್ಲ.

ಆದರೆ ಆರನೆಯ ವೇತನ ಆಯೋಗದ ವರದಿ ಪ್ರಕಾರ ಸಂಬಳ ಕೊಡದ ಸರ್ಕಾರ ಚಾಲಕ ನಿರ್ವಾಹಕರನ್ನು ಹಗಲು ರಾತ್ರಿ ದುಡಿಸಿಕೊಂಡರೂ ಕೂಡ ಈ ಅರೇ ಸರಕಾರಿ ನೌಕರಿ ಮಾತ್ರ ಸಿಕ್ಕವರಿಗೆ ಸೀರುಂಡೆ ಅನ್ನುವ ಹಂತವನ್ನು ಅದು ಎಂದೋ ತಲುಪಿಯಾಗಿದೆ.ಹೆಚ್ಚುತ್ತಿರುವ ಪೆಟ್ರೋಲ್ ಡೀಜೆಲ್ ದರ,ಸ್ಪೇರ್ ಪಾರ್ಟಗಳ ದರ ಇವೆಲ್ಲವನ್ನೂ ತೂಗಿಸುವ ವೇಳೆಗಾಗಲೇ ನಷ್ಟದಲ್ಲಿ ಇರುವ ಸಾರಿಗೆ ಸಂಸ್ಥೆಗಳಾದರೂ ಅದೆಲ್ಲಿಯ ಸಂಬಳ ತರಬೇಕು.

ಯಾರೋ ಒಬ್ಬ ಕಂಡಕ್ಟರ್ ಎರಡು ರೂಪಾಯಿ ಚಿಲ್ಲರೆ ಕೊಡಲಿಲ್ಲ ಅಂತ ಜಗಳ ತೆಗೆಯುವ ಜನರ ನಡುವೆಯೇ ಹೆಣ್ಣುಮಕ್ಕಳ ಸಂಕಷ್ಟದ ಬಗ್ಗೆ ಮಾತನಾಡಲು ಹೊರಡುವ ನನ್ನ ಬರವಣಿಗೆ ನಿಮ್ಮ ಮನಸಿಗೆ ಮುಟ್ಟುತ್ತದೆ ಅನ್ನುವ ನಂಬಿಕೆಯಲ್ಲಿ ಮುಟ್ಟು ಅನ್ನುವ ಗುಟ್ಟನ್ನು ಕೂಡ ಬಚ್ಚಿಡಲಾಗದೆ ರಜೆಗೆ ಪರದಾಡುವ ಮತ್ತು ಬಸ್ಸಿನ ಪ್ರಯಾಣವೇ ಆಗಿಬರದೆ ವಾಂತಿ ಮಾಡುವ ಹೆಣ್ಣುಮಕ್ಕಳೇ ಹ್ಮ ಯಾರ್ರೀ ಟಿಕೆಟ್ ಅನ್ನುತ್ತ ಬಸ್ಸಿನಲ್ಲಿ ಅತ್ತಿಂದಿತ್ತ ಓಡಾಡುವ ನಡುವೆಯೆ ಬೇಕೆಂದೆ ದಾರಿ ಕೊಡದ ಕಾಲೇಜಿನ ಪಡ್ಡೆ ಹುಡುಗರು,ಡಬಲ್ ಮೀನಿಂಗ್ ಮಾತನಾಡುವ ಮೂರು ಬಿಟ್ಟ ಕೆಲವು ಸಹೋದ್ಯೋಗಿಗಳು, ಇವೆಲ್ಲದರ ನಡುವೆ ಮನೆಯಲ್ಲಿ ವಯಸ್ಸಾದ ಅಪ್ಪ,ಅಮ್ಮ ಅಥವಾ ಪುಟಾಣಿ ಕಂದಮ್ಮಗಳನ್ನು ಬಿಟ್ಟುಕೊಂಡು ಕಣ್ಣ ಅಂಚಿಗೆ ನೀರು ಬಂದಾಗಲೂ ತೋರಗೊಡದೆ ನಗುವ ಪ್ರಯತ್ನ ಮಾಡುವ ಮಹಿಳಾ ಕಂಡಕ್ಟರುಗಳ ಬದುಕು ಹಸನಾಗಲಿ ಅನ್ನುವ ಹಾರೈಕೆ ಜನರ ಮನಸ್ಸಿನಲ್ಲಿ ಮೂಡಿಬರಬೇಕಾಗಿದೆ.

ಗೇರು ಬದಲಾಗದ,ದಡಲ್ ಪಡಲ್ ಎಂದು ಸದ್ದು ಮಾಡುತ್ತ ಓಲಾಡುತ್ತಲೇ ಓಡುವ ಬಸ್ಸಿನ ಸ್ಟೇಯರಿಂಗ್ ಹಿಡಿದ ಚಾಲಕರು ಮತ್ತು ಹದಗೆಟ್ಟ ರಸ್ತೆಗಳಲ್ಲಿ ಬಸ್ಸು ಓಡಿಸಿ ಸಂಜೆಯ ಹೊತ್ತಿಗೆ ಹುಟ್ಟಿಕೊಳ್ಳುವ ಬೆನ್ನು ನೋವು ಅದಕ್ಕಿಂತಲೂ ಮಿಗಿಲಾಗಿ ಅನ್ನಕೊಡುವ,ಸಂಸಾರದ ಭಾರ ತೂಗಿಸುವ ನೌಕರಿ ಎಂಬ ಸರ್ಕಾರಿ ಚಾಕರಿಯ ಜೀವಗಳಿಗೆ ಬಹುತೇಕ ನೀವೆನೂ ಕೊಡಬೇಕಾಗಿಲ್ಲ.ಖಾಸಗಿ ವಾಹನಗಳನ್ನು ಬಿಟ್ಟು ಒಮ್ಮೆ ಬಸ್ಸು ಹತ್ತಿ ಪ್ರಯಾಣಿಸಿದರೂ ಸಾಕು, ಡ್ರೈವರ್ ಅಣ್ಣಾ ಊಟಾ ಆಯ್ತಾ ಅಂದರೂ ಸಾಕು,ಕಂಡಕ್ಟರ್ ಬಂದಾಗ ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿದರೂ ಸಾಕು ಅಲ್ಲವೇ….

ದೀಪಕ ಶಿಂಧೇ

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');