ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ -ರಾಜು ಕಂಬಾರ

0
🌐 Belgaum News :

ಬೆಳಗಾವಿ 02: ರಾಜ್ಯಸರ್ಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಸುಮಾರು ಹತ್ತು ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ನೂತನ ಮುಖ್ಯಮಂತ್ರಿಗಳಿಗೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷ ಡಾ. ರಾಜು ಕಂಬಾರ ಒತ್ತಾಯಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸುಮಾರು 430 ಸರಕಾರಿ ಪದವಿ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರಿಗೆ ಈಗಾಗಲೇ ವಯೋಮಿತಿ ಮೀರಿದೆ. ಹತ್ತು ಹದಿನೈದು ವರ್ಷಗಳಿಂದ ನಿರಂತರ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬದುಕು ಚಿಂತಾಜನಕ ಸ್ಥಿತಿಯಲ್ಲಿದೆ. ಕೋವಿಡ್ ಪರಿಣಾಮದಿಂದಾಗಿ ಮತ್ತಷ್ಟು ಆ ಕುಟುಂಬಗಳು ಬೀದಿಪಾಲಾಗುವ ದುಸ್ಥಿತಿ ಬಂದೊದಗಿದೆ.

ಅನೇಕರು ನೋವಿನಿಂದಾಗಿ ಸಾವನ್ನಪ್ಪಿದ್ದಾರೆ. ಆ ಕುಟುಂಬಗಳ ಸದಸ್ಯರು ಅಧೋಗತಿ ಹೊಂದಿದ್ದಾರೆ. ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಕಳೆದ 2 ದಶಕಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬರಲಾಗಿದೆ. ಸಂಬಂಧಿಸಿದ ಮಂತ್ರಿಗಳಿಗೆ,ಅಧಿಕಾರಿಗಳಿಗೆ ಸಾವಿರಾರು ಬಾರಿ ಮನವಿ ಪತ್ರ ನೀಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಬೆಳಗಾವಿ ಸುವರ್ಣಸೌಧದಲ್ಲಿ ಜರುಗಿದ ಅಧಿವೇಶನದಲ್ಲಿಯೂ ಉಗ್ರ ಹೋರಾಟ ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ, ಇಂದಿನ ಮಾಜಿ ಮುಖ್ಯಮಂತ್ರಿ ಮಾನ್ಯ ಬಿ. ಎಸ್. ಯಡಿಯೂರಪ್ಪನವರು ನಮ್ಮ ಸರ್ಕಾರ ಬಂದರೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದರು. ಅದಾದ ನಂತರ ಬಿಜೆಪಿ ಸರಕಾರ ಬಂದಿತು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳು ಆದರೂ ಹಾಗೂ ಹೋದರು. ಆದರೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ದೊರೆಯಲಿಲ್ಲ.

ಮಾತು ಕೊಟ್ಟ ಬಿಜೆಪಿ ಸರಕಾರ ಈಗಲಾದರೂ ತಾವು ವಿರೋಧ ಪಕ್ಷದಲ್ಲಿ ಇದ್ದಾಗ ಅತಿಥಿ ಉಪನ್ಯಾಸಕರಿಗೆ ನೀಡಿದ ಸೇವಾ ಭದ್ರತೆ ಭರವಸೆಯನ್ನು ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಈಡೇರಿಸಬೇಕೆಂದು ಮನವಿ ಮಾಡಿದ ಕಂಬಾರ ಅವರು, ಶೈಕ್ಷಣಿಕ ವರ್ಷದ ಮಾರ್ಚ್ ತಿಂಗಳಿನಿಂದ ಇದುವರೆಗೂ ಗೌರವಧನ ನೀಡಿಲ್ಲ. ತುರ್ತಾಗಿ ಗೌರವಧನ ಬಿಡುಗಡೆಗೊಳಿಸಬೇಕು. ಅತಿಥಿ ಉಪನ್ಯಾಸಕರ ಸೇವೆಯನ್ನು ವರ್ಷದೂದ್ದಕ್ಕೂ ಮುಂದುವರೆಸಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಈ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಠ್ಠಲ ಮಾಳವದೆ, ನಿಂಗಪ್ಪ ಸಂಗ್ರೇಜಿಕೊಪ್ಪ, ಖಜಾಂಚಿ ಅಡಿವೆಪ್ಪ ಬಿ. ಇಟಗಿ ಸಂಘಟನಾ ಕಾರ್ಯದರ್ಶಿ ನೀಲಕಂಠ ಬೊಮ್ಮಣ್ಣವರ, ಸದಸ್ಯ ಕೆ. ಎನ್. ಕಾಂಬಳೆ, ಪ್ರಕಾಶ್ ಮಬನೂರ ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');