ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಸಭೆ ಅನುದಾನ ಬಳಕೆ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

0
🌐 Belgaum News :

ಬೆಳಗಾವಿ, ಅ. 02 : ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸಾಂಸ್ಕೃತಿಕ ಭವನ, ಕನ್ನಡ ಭವನ ಮತ್ತಿತರ ಕಾಮಗಾರಿಗಳ ಅನುದಾನ ಬಳಕೆ ಪ್ರಮಾಣಪತ್ರ ಸಲ್ಲಿಸುವುದರ ಜತೆಗೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಕೂಡಲೇ ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಆ.2) ಜರುಗಿದ ಪ್ರಾಧಿಕಾರದ ಅನುದಾನ ಬಳಕೆ ಹಾಗೂ ಕಾಮಗಾರಿಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2010 ರಿಂದ ಇದುವರೆಗೆ ಬೆಳಗಾವಿ ಜಿಲ್ಲೆಯ ಗಡಿ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 14 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದರೆ ಇದುವರೆಗೆ ಅತ್ಯಂತ ಕಡಿಮೆ ಅನುದಾನ ಬಳಕೆಯ ಪ್ರಮಾಣಪತ್ರ ಬಂದಿರುತ್ತವೆ.

ಬಾಕಿ ಇರುವ ಕಾಮಗಾರಿಗಳ ಅನುದಾನ ಬಳಕೆ ಪ್ರಮಾಣಪತ್ರಗಳನ್ನು ಒಂದು ತಿಂಗಳೊಳಗೆ ಸಲ್ಲಿಸದಿದ್ದರೆ ಮುಂದಿನ ಅನುದಾನವನ್ನು ತಡೆಹಿಡಿಯಲಾಗುವುದು ಎಂದು ಡಾ.ಸೋಮಶೇಖರ್ ತಿಳಿಸಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೈಗೊಳ್ಳಲಾಗಿರುವ ಸಾಂಸ್ಕೃತಿಕ ಭವನ, ಗಡಿಭವನಗಳ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅನುದಾನ ಬಳಕೆಯ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನ್ನಡ ಭವನ ಕಾಮಗಾರಿ ಪೂರ್ಣಗೊಳಿಸಲು ಸೂಚನೆ:
ಕನ್ನಡ ಭವನ ನಿರ್ಮಾಣಕ್ಕೆ 3.27 ಕೋಟಿ ರೂಪಾಯಿ ಅನುದಾನವನ್ನು ಪ್ರಾಧಿಕಾರದ ವತಿಯಿಂದ ನೀಡಲಾಗಿದೆ. ಇದಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೂಡ ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದ್ದರಿಂದ ತ್ವರಿತವಾಗಿ ಕನ್ನಡ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಡಿಭವನಗಳ ನಿರ್ಮಾಣದ ಜತೆಗೆ ಅವುಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಗಡಿಭಾಗದಲ್ಲಿ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಸ್ನಾತಕೋತ್ತರ ಪದವೀಧರರಿಗೆ ಅಗತ್ಯ ತರಬೇತಿಯನ್ನು ನೀಡಿ ಅವರನ್ನು ಅತಿಥಿ ಶಿಕ್ಷಕರನ್ನಾಗಿ ತಾತ್ಕಾಲಿಕವಾಗಿ ನೇಮಿಸಲು ಪ್ರಾಯೋಗಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಮಕ್ಕಳಿಗೆ ಸಿಗುವ ಅನ್ನದಾಸೋಹ, ಸೈಕಲ್, ಸಮವಸ್ತ್ರ ಮತ್ತಿತರ ಸೌಲಭ್ಯಗಳನ್ನು ನೆರೆಯ ರಾಜ್ಯದ ಗಡಿಭಾಗದಲ್ಲಿರುವ ಕನ್ನಡಿಗರಿಗೆ ದೊರಕಿಸುವ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರ ಗಮನವನ್ನು ಕೂಡ ಸೆಳೆಯಲಾಗಿದೆ ಎಂದು ತಿಳಿಸಿದರು.

ಗಡಿಭಾಗದ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳು ತಿಂಗಳಿನಲ್ಲಿ ಒಂದು ದಿನ ಕಡ್ಡಾಯವಾಗಿ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಗಡಿಭಾಗದ ಸಾಂಸ್ಕೃತಿಕ ಅಧ್ಯಯನಕ್ಕೆ ನಿರ್ಧಾರ:
ಪ್ರಾಧಿಕಾರ 2010 ರಲ್ಲಿ ಅಸ್ತಿತ್ವಕ್ಕೆ ಬಂದಿತು. ನೆರೆಹೊರೆಯ ರಾಜ್ಯಗಳ ಗಡಿಭಾಗದಲ್ಲಿರುವ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಡಾ.ಸೋಮಶೇಖರ್ ತಿಳಿಸಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಗಡಿಭಾಗದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಧ್ಯಯನ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಗಡಿಭಾಗದ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಅದೇ ರೀತಿ, ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಪ್ರಾಧಿಕಾರದ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಡಾ.ಸೋಮಶೇಖರ್ ತಿಳಿಸಿದರು.

ಪ್ರಾಧಿಕಾರದ ವತಿಯಿಂದ ಬಿಡುಗಡೆಯಾದ ಅನುದಾನದಲ್ಲಿ ಸಾಂಸ್ಕೃತಿಕ ಭವನ, ಗ್ರಂಥಾಲಯ, ಗಡಿಭವನಗಳ ಸಮರ್ಪಕ ನಿರ್ವಹಣೆಯಾಗಬೇಕು. ಪ್ರಾಧಿಕಾರದ ಆಶಯವನ್ನು ಅರಿತುಕೊಂಡು ಸಣ್ಣಪುಟ್ಟ ಕೆಲಸಗಳಿದ್ದರೂ ಅಧಿಕಾರಿಗಳು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಡಾ.ಸೋಮಶೇಖರ್ ತಿಳಿಸಿದರು.

ಗಡಿಭಾಗದ ಸಾಹಿತಿಗಳ ಕೃತಿಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸುವ ಕೆಲಸವಾಗಬೇಕಿದೆ ಎಂದರು. ಸಂಸ್ಕೃತಿಯ ಮೂಲಕ ಪ್ರಗತಿ ಸಾಧಿಸಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಂಸ್ಕೃತಿಕ ನಿಧಿ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ ಕಾರ್ಯೋನ್ಮುಖಗೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಕಲಾವಿದರಿಗೆ ಈ ಸಾಂಸ್ಕೃತಿಕ ನಿಧಿಯಿಂದ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು ಎಂದು ಡಾ.ಸೋಮಶೇಖರ್ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾತನಾಡಿ, ಅನುದಾನ ಬಳಕೆ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗಡಿಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅನೋನ್ಯವಾಗಿದ್ದಾರೆ. ಚುನಾವಣೆ ಮತ್ತಿತರ ಸಂದರ್ಭದಲ್ಲಿ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಗಡಿಭಾಗದ ಸಾಹಿತಿಗಳಿಗೆ ಪೆÇ್ರೀತ್ಸಾಹ ಅಗತ್ಯ-ಬಿಸ್ವಾಸ್:
ಗಡಿಭಾಗದ ಸ್ಥಳೀಯ ಸಾಹಿತಿಗಳ ಕೃತಿಗಳನ್ನು ಖರೀದಿಸುವ ಮೂಲಕ ಅವರಿಗೆ ಪೆÇ್ರೀತ್ಸಾಹಿಸುವ ಅಗತ್ಯವಿದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಲಹೆ ನೀಡಿದರು.

ಗಡಿಭಾಗದ ದಿನಪತ್ರಿಕೆಗಳನ್ನು ಕೂಡ ಗ್ರಾಮ ಪಂಚಾಯಿತಿ ವತಿಯಿಂದ ಗ್ರಂಥಾಲಯಗಳಿಗೆ ಖರೀದಿಸುವುದು ಕೂಡ ಓದುವ ಅಭಿರುಚಿ ಬೆಳೆಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾಂಸ್ಕೃತಿಕ ನಿಧಿ ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಗಡಿಭಾಗದ ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯ ಜತೆಗೆ ಉದ್ಯೋಗಾವಕಾಶಗಳ ಕುರಿತು ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಎ.ಬಿ.ಪುಂಡಲೀಕ, ಗಜಾನನ ಮನ್ನಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು, ನಗರದ ವಡಗಾವಿಯಲ್ಲಿರುವ ಗಡಿಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');