ಗಡಿ ಭಾಗದ ಅಭಿವೃದ್ಧಿಯ ಕುರಿತು ನಿರಂತರ ಪರಿಶೀಲನೆ: ಡಾ.ಸಿ ಸೋಮಶೇಖರ್

0
🌐 Belgaum News :

ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೂಲಕ ಗಡಿಭಾಗದ ಜನರ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಥಿತಿ ಬಗ್ಗೆ ಅಂಕಿ-ಅಂಶಗಳ ಮೂಲಕ ಸಮಗ್ರ ವೈಜ್ಞಾನಿಕ ಅಧ್ಯಯನ ಮಾಡಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.

ಗಡಿ ಭಾಗದ ಅಭಿವೃದ್ಧಿ ಯೋಜನೆಯ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ (ಆ.೦೩) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗಡಿಭಾಗದ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳು ತಿಂಗಳಿನಲ್ಲಿ ಒಂದು ದಿನ ಕಡ್ಡಾಯವಾಗಿ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುವ ಕೆಲಸ ಹಾಗೂ ಅವರ ಅನಾಥಪ್ರಜ್ಞೆ ದೂರಮಾಡುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇದುವರೆಗೆ ಬೆಳಗಾವಿ ಜಿಲ್ಲೆಯ ಗಡಿ ತಾಲ್ಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ೧೪ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಕೆಲ ಅನುದಾನ ಬಳಕೆಯ ಪ್ರಮಾಣಪತ್ರ ಸಲ್ಲಿಕೆಯಾಗಿರುವುದಿಲ್ಲ ಹಾಗೂ ಇದರ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ೧೦ ದಿನದ ಒಳಗಾಗಿ ಅನುದಾನ ಬಳಕೆಯ ಪ್ರಮಾಣ ಪತ್ರ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

ವಡಗಾವಿಯ ಗಡಿ ನಾಡು ಕನ್ನಡ ಭವನಕ್ಕೆ ಹಾಗೂ ಯಳ್ಳೂರಿನಲ್ಲಿರುವ ನಿರ್ಮಾಣಗೊಳ್ಳುತ್ತಿರುವ ಗ್ರಂಥಾಲಯಕ್ಕೆ  ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲನೆ ನಡೆಸಲಾಗಿದೆ. ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.

ಸಾಂಸ್ಕೃತಿಕ ನಿಧಿ ಮೀಸಲಿಡುವಂತೆ ಸೂಚನೆ: 

ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾಂಸ್ಕೃತಿಕ ನಿಧಿ ಸ್ಥಾಪನೆ ಮಾಡಬೇಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಾರ್ಷಿಕ ರೂ.೫ ಲಕ್ಷ ತಾಲೂಕು ಪಂಚಾಯತಿಯಲ್ಲಿ ರೂ.೨೫ ಲಕ್ಷ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ರೂ. ೫೦ ಲಕ್ಷ ನಿಧಿ ಮೀಸಲಿಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾಮಗಾರಿಗಳ ಜೊತೆಗೆ ಸಾಂಸ್ಕöÈತಿಕ ಕಾರ್ಯಕ್ರಮ ನಡೆಸುವುದರ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಲು ತಿಳಿಸಲಾಗಿದೆ ಜೊತೆಗೆ ಗಡಿ ಭಾಗದ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸಾಂಸ್ಕೃತಿಕ ಕಲೆಗಳ ಅಭಿವೃದ್ಧಿ ಕುರಿತು ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗಡಿ ಭಾಗದ ಕನ್ನಡ ಲೇಖಕರಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಹಾಗೂ ಸ್ಥಳೀಯ ಸಾಹಿತಿಗಳು ಬರೆದ ಪುಸ್ತಕಗಳು ಹಾಗೂ ಕೃತಿಗಳನ್ನು ಪ್ರಕಟ ಮಾಡಲು ಪ್ರಾಧಿಕಾರದ ವತಿಯಿಂದ ಸಹಾಯ ಮಾಡಲಾಗುವುದು ಹಾಗೂ ಈ ಕುರಿತಂತೆ ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಅಲ್ಲದೇ, ಗಡಿ ಭಾಗದ ಮಹಿಳಾ ಸ್ವಾವಲಂಬನೆ ಯೋಜನೆಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಗಡಿಭಾಗದಲ್ಲಿ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಸ್ನಾತಕೋತ್ತರ ಪದವೀಧರರಿಗೆ ಅಗತ್ಯ ತರಬೇತಿಯನ್ನು ಎರಡು ತಿಂಗಳು ಕಾಲ ನೀಡಿ ಅವರನ್ನು ಅತಿಥಿ ಶಿಕ್ಷಕರನ್ನಾಗಿ ತಾತ್ಕಾಲಿಕವಾಗಿ ನೇಮಿಸಲು ಪ್ರಾಯೋಗಿಕವಾಗಿ ಪ್ರಯತ್ನಿಸಲಾಗುವುದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್  ತಿಳಿಸಿದರು.

ಕೋರೋನಾ ಹಿನ್ನೆಲೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ. ಅದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ೬೩ ತಾಲೂಕುಗಳಲ್ಲಿ ಹಾಗೂ ಹೊರನಾಡಿನಲ್ಲಿ ಗಡಿ ಉತ್ಸವಗಳನ್ನು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು  ಎಂದು ಅವರು ತಿಳಿಸಿದರು.

ಗಡಿ ಭಾಗದಲ್ಲಿ ಕನ್ನಡ ನಾಮಫಲಕ ಬಳಕೆಗೆ ಸೂಚನೆ: 

ಗಡಿ ಭಾಗದಲ್ಲಿ ಕನ್ನಡ ನಾಮಫಲಕ ಬಳಕೆಗೆ ಸೂಚನೆ ನೀಡಲಾಗಿದ್ದು, ಈ ಕುರಿತು ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳಿಗೆ ಜೊತೆಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ವಿಶ್ವ ವಿದ್ಯಾಲಯದಲ್ಲಿ ಜಾನಪದ ಅಧ್ಯಯನ ಪದವಿ ಪ್ರಾರಂಭಿಸುವ ಕುರಿತು ಚರ್ಚೆ ಮಾಡಲಾಗಿದೆ ಹಾಗೂ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ೫೦ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ೨ ತಿಂಗಳು ಕನ್ನಡ ಜಾನಪದ ಕಲೆಯ ಕುರಿತು ತರಬೇತಿ ನೀಡಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.

ಗಡಿ ಭಾಗದಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಎಲ್ಲ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ. ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಲ್ಲಿ ಶೌಚಾಲಯ ಮತ್ತು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚು ಅನುದಾನ ಬಳಸಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಸಿ ಸೋಮಶೇಖರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');