ಪೊಲೀಸರ ಸೋಗಿನಲ್ಲಿ ಚಿನ್ನದ ವ್ಯಾಪಾರಿಯನ್ನು ಅಪಹರಿಸಿದ್ದ ಮೂವರು ಕಿಡ್ನಾಪರ್ಸ್ ಅರೆಸ್ಟ್

0
🌐 Belgaum News :

ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಚಿನ್ನದ ವ್ಯಾಪಾರಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಅವರನ್ನು ಅಪಹರಿಸಿ ಪೊಲೀಸರೆಂದು ಹೇಳಿಕೊಂಡು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಪೂರ್ವ ವಿಭಾಗದ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಅಸ್ಗರ್, ನಾಸಿರ್ ಶರೀಫ್ ಮತ್ತು ಸಂತೋಷ್ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಚಿನ್ನದ ವ್ಯಾಪಾರಿ ಅರವಿಂದ್‍ಕುಮಾರ್ ಮೆಹ್ತಾ ಅವರ ಮಾಹಿತಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಆ ಪತ್ರಿಕೆಯ ತುಣುಕುಗಳನ್ನು ಅಂತರ್ಜಾಲದಲ್ಲಿ ಡೌನ್‍ಲೋಡ್ ಮಾಡಿಕೊಂಡು ಅರವಿಂದ್ ಮೆಹ್ತಾ ಅವರನ್ನು ಅಪಹರಿಸಿ ದರೆ ಹಣ ಸಿಗಬಹುದೆಂದು ಅಪಹರಣಕಾರರು ಸಂಚು ರೂಪಿಸಿದ್ದರು.

ಅದರಂತೆ ಚಾರ್ಟೆಡ್ ಅಕೌಂಟೆಂಟ್ ದಿವಾಕರ್ ರೆಡ್ಡಿ ಮತ್ತು ಚಿನ್ನದ ವ್ಯಾಪಾರಿ ಅರವಿಂದ್ ಕುಮಾರ್ ಮೆಹ್ತಾ ಅವರನ್ನು ಆ.6ರಂದು ರಾತ್ರಿ 10.30ರಲ್ಲಿ ಬುಲೀಯನ್ ವ್ಯವಹಾರದ (ಚಿನ್ನ ಕೊಳ್ಳುವ ಮತ್ತು ಮಾರುವ) ಬಗ್ಗೆ ಮಾತನಾಡಬೇಕೆಂದು ಡಿಕೆನ್ಸನ್ ರಸ್ತೆಯಲ್ಲಿರುವ ರಾಯಲ್ ಆರ್ಚಿಡ್ ಹೊಟೇಲ್ ಬಳಿ ಕರೆಸಿಕೊಂಡು ಕಾರಿನಲ್ಲಿ ಅಪಹರಿಸಿ ನಾವು ಪೊಲೀಸರೆಂದು ಹೇಳಿಕೊಂಡು ನಿಮ್ಮ ವ್ಯವಹಾರ ನಮಗೆ ಗೊತ್ತು. 10 ಲಕ್ಷ ಹಣ ಕೊಡದಿದ್ದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು.

ಅಪಹರಣಕಾರರು ಈ ಇಬ್ಬರನ್ನು ಕಾರಿನಲ್ಲಿ ಸುತ್ತಾಡಿಸುತ್ತಾ ನಂತರ ಕೋರಮಂಗಲದಲ್ಲಿರುವ ಹೊಟೇಲ್‍ವೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು. ದಿವಾಕರ್ ರೆಡ್ಡಿ ಹಾಗೂ ಅರವಿಂದ್ ಮೆಹ್ತಾ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆಂದು ಸ್ನೇಹಿತ ಸಂದೀಪ್ ಪರಮೇಶ್ವರನ್ ಎಂಬುವವರು ಹಲಸೂರು ಠಾಣೆಗೆ ದೂರು ನೀಡಿದ್ದರು.

ಆರೋಪಿಗಳ ಪತ್ತೆಗೆ ಹಾಗೂ ಅಪಹರಣಕ್ಕೊಳಗಾದ ವ್ಯಕ್ತಿಗಳನ್ನು ಪತ್ತೆ ಮಾಡಲು ಹಲಸೂರು ಠಾಣೆ ಇನ್ಸಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಪಿಎಸ್‍ಐ ಸುರೇಶ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಅಪಹರಣಕಾರರ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿತ್ತು.

ಅಪಹರಣಕಾರರು ಹಾಗೂ ಅಪಹರಣಕ್ಕೊಳಪಟ್ಟವರು ಕೋರಮಂಗಲದಲ್ಲಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ಥಳಕ್ಕೆ ದಾವಿಸಿ ಆ ಜಾಗವನ್ನು ಸುತ್ತುವರೆದು ಮೂವರನ್ನು ಬಂಧಿಸಿ ಅಪಹರಣಕ್ಕೊಳಪಟ್ಟ ದಿವಾಕರ್ ರೆಡ್ಡಿ ಮತ್ತು ಅರವಿಂದ್‍ಕುಮಾರ್ ಮೆಹ್ತಾ ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಡಿಸಿಪಿ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಹಲಸೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕುಮಾರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ತಂಡ ಅಪಹರಣಕಾರರನ್ನು ಬಂಧಿಸಿ ಅಪಹರಣಕ್ಕೊಳಗಾದ ವ್ಯಕ್ತಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');