ಸಂಪಗಾಂವದಲ್ಲಿ ಕಬ್ಬು ಬೆಳೆಯ ತರಬೇತಿ

0
🌐 Belgaum News :

ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ “ಕಬ್ಬು ಬೇಸಾಯ”ದ ಕುರಿತು ತರಬೇತಿ ನಡೆಸಲಾಯಿತು.

ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ನುರಿತ ವಿಜ್ಞಾನಿಗಳ ತಂಡವಿದ್ದು, ರೈತರಿಗೆ ತಂತ್ರಜ್ಞಾನದ ಮಾಹಿತಿಯನ್ನು ನೀಡುತ್ತಿದ್ದಾರೆ. ಕಬ್ಬು ಬೆಳೆಯ ಇಳುವರಿಯನ್ನು ಹೆಚ್ಚಿಸಲು ರೈತರು ಹೊಸ ತಂತ್ರಜ್ಞಾನಗಳನ್ನು ವಿಜ್ಞಾನಿಗಳಿಂದ ತಿಳಿದುಕೊಂಡು ಅಳವಡಿಸಬೇಕು ಎಂದರು.

ಬೇಸಾಯ ತಜ್ಞರಾದ ಜಿ. ಬಿ. ವಿಶ್ವನಾಥ ಮಾತನಾಡಿ, ಇತ್ತೀಚೆಗೆ ಬಿಡುಗಡೆಗೊಂಡ ಎಸ್‍ಎನ್‍ಕೆ-09293, ಎಸ್‍ಎನ್‍ಕೆ-9227 ಹಾಗೂ ಎಸ್‍ಎನ್‍ಕೆ-09211 ಅಧಿಕ ಇಳುವರಿ ನೀಡುವ ತಳಿಗಳನ್ನು ಪರಿಚಯಿಸಿದರು ಮತ್ತು ಕಬ್ಬು ಬೆಳೆಯ ಸಾಲಿನ ಅಂತರವನ್ನು ಹೆಚ್ಚಿಸಿ ಅಂತರ ಬೆಳೆ ಬೆಳೆಯಬೇಕು. ಇದರಿಂದ ರೈತರ ಆದಾಯವನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಮಣ್ಣು ವಿಜ್ಞಾನಿ ಎಸ್. ಎಮ್. ವಾರದ ಮಾತನಾಡಿ, ಕಬ್ಬು ಬೆಳೆಗೆ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ ಬಳಸಬೇಕು, ಕಬ್ಬು ಬೆಳೆಯುವ ಪೂರ್ವದಲ್ಲಿ ಸೆಣಬು ಅಥವಾ ಹಸಿರೆಲೆ ಗೊಬ್ಬರ ಬೆಳೆದು ಮುಗ್ಗು ಹೊಡೆಯಬೇಕು ಇದರಿಂದ ಭೂಮಿಯ ಭೌತಿಕ ಗುಣಧರ್ಮಗಳು ಹಾಗೂ ಫಲವತ್ತತೆ ಉತ್ತಮಗೊಳ್ಳುವುದು. ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಸದೆ ಮಣ್ಣು ಪರೀಕ್ಷೆ ಆಧಾರದ ಮೇಲೆ ಸಾರಜನಕ, ರಂಜಕ, ಪೊಟ್ಯಾಷ್ ಹಾಗೂ ಲಘು ಪೋಷಕಾಂಶಗಳಾದ ಜಿಂಕ್ ಹಾಗೂ ಫೆರಸ್ ಒದಗಿಸಬೇಕು ಹಾಗೂ ಜೈವಿಕ ಗೊಬ್ಬರಗಳಾದ ಅಜೋಸ್ಪಿರಿಲಂ ಹಾಗೂ ರಂಜಕ ಕರಗಿಸುವ ಬ್ಯಾಕ್ಟೀರಿಯಾ ಬಳಸಬೇಕು ಎಂದು ಸಲಹೆ ನೀಡಿದರು.

ಸಸ್ಯ ಸಂರಕ್ಷಣೆ ತಜ್ಞ ಡಾ. ಎಸ್. ಎಸ್. ಹಿರೇಮಠ ವಿವರಣೆ ನೀಡಿ ಕಬ್ಬು ಬೆಳೆಯಲ್ಲಿ ಬರುವ ಗೊಣ್ಣೆ ಹುಳುವಿನ ನಿರ್ವಹಣೆಗೆ ಜೈವಿಕ ನಿಯಂತ್ರಕ ಮೆಟರೈಝಿಯಂ ಬಳಸಬೇಕು ಎಂದು ಮಾಹಿತಿ ನೀಡಿದರು ಹಾಗೂ ಕಬ್ಬಿನಲ್ಲಿ ಬರುವ ಇತರೆ ರೋಗ/ಕೀಟಗಳ ಹತೋಟಿ ಕ್ರಮಗಳನ್ನು ವಿವರಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭಾ ಬುಲಾಖೆ, ಗ್ರಾಮ ಪಂಚಾಯತಿ ಸದಸ್ಯರಾದ ಸೀಮಾ ಚಿಟ್ಟಿ, ವಿಜಯಲಕ್ಷ್ಮೀ ಮಾಡಮಗೇರಿ, ರತ್ನವ್ವ ಮರಿಯಮ್ಮಗೊಳ ಹಾಗೂ ಪ್ರಮುಖರಾದ ಬಸನಗೌಡ ಜುಟ್ನವರ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');