ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರ: ಸಚಿವ ಗೋವಿಂದ ಕಾರಜೋಳ

0
🌐 Belgaum News :

ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಲಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದರು.

ಸ್ವಾತಂತ್ರ್ಯ ಎಂದರೆ ಸ್ವಾಭಿಮಾನ. ತಮ್ಮ ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಇಂತಹ ಸ್ವಾಭಿಮಾನವನ್ನು ತಂದುಕೊಟ್ಟ ಮಹನೀಯರನ್ನು ಇಂದು ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸಬೇಕು. ಬ್ರಿಟಿಷರ ಕಪಿಮುಷ್ಠಿಯಿಂದ ಅವರ ದರ್ಪ, ದೌರ್ಜನ್ಯದಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಹೆಸರಿಸಲಾಗದ ಅಸಂಖ್ಯಾತ ನಮ್ಮ ಬಂಧು-ಬಾಂಧವರು ಹೋರಾಡಿದ್ದಾರೆ. ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಆತ್ಮಾರ್ಪಣೆಯ ಪ್ರತಿಫಲದಿಂದ ನಾವಿಂದು ಸ್ವತಂತ್ರ ಭಾರತದಲ್ಲಿದ್ದೇವೆ ಎಂದು ಹೇಳಿದರು.

ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅಖಂಡತೆಯನ್ನು ಪ್ರತಿಪಾದಿಸುವ ನಮ್ಮ ದೇಶ ಸಾಮರಸ್ಯದ ಬದುಕಿಗೆ ಹೆಸರುವಾಸಿ. ಭಾರತ ಮಾತೆಯ ತನುಜಾತೆಯಾದ ಕರ್ನಾಟಕವು ಇದಕ್ಕೆ ಹೊರತಾಗಿಲ್ಲ ಎಂಬುದು ಅಷ್ಟೇ ಸತ್ಯ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರ:

ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರ.  ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಪ್ರಮುಖವಾಗಿದೆ.  ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು.
ಕಿತ್ತೂರು ರಾಣಿ ಚನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಗೆ ದುಸ್ವಪ್ನವಾಗಿ ಕಾಡಿದ್ದು, ಅಜರಾಮರವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ದೊರೆತು 75 ವರ್ಷಗಳ ಸಂದಿರುವ ಈ ಶುಭ ಸಂದರ್ಭದ ಸವಿನೆನಪಿನಲ್ಲಿ “ಅಜಾದಿ ಕಾ ಅಮೃತ್ ಮಹೋತ್ಸವ” ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಈ ಮಹೋತ್ಸವದ ಮುಖ್ಯ ಉದ್ದೇಶ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪ್ರತಿಯೊಂದು ಪ್ರಮುಖ ಕ್ಷಣವನ್ನು ಸ್ಮರಿಸುವುದು  ಹಾಗೂ ಭಾರತಸಂವಿಧಾನದ ಮೂಲಕ ಪ್ರಜಾತಂತ್ರದ ಬೇರುಗಳನ್ನು ಬಲಪಡಿಸುವ ಹೊಸದೃಷ್ಠಿಕೋನದೊಂದಿಗೆ ಭವಿಷ್ಯವನ್ನು ರೂಪಿಸುವುದಾಗಿದೆ ಎಂದು ತಿಳಿಸಿದರು.

ಕೋವಿಡ್ ವಾರಿಯರ್ಸ್ ಗಳ ಕಾರ್ಯ ಶ್ಲಾಘನೀಯ:

ತಮ್ಮ ಜೀವ ಹಾಗೂ ಕುಟುಂಬದ ಜೀವದ ಹಂಗನ್ನು ತೊರೆದು ಕೋವಿಡ್ ಸೋಂಕಿತರ ಜೀವ ಉಳಿಸಲು ಹಗಲಿರುಳು ಶ್ರಮಿಸಿದ  ವೈದ್ಯರು, ಸ್ಟಾಪ್ ನರ್ಸಗಳು, ಸಫಾಯಿ ಕರ್ಮಚಾರಿಗಳು,  ಪೊಲೀಸರು ಸೇರಿದಂತೆ ಎಲ್ಲಾ ಕೋವಿಡ್ ವಾರಿಯರ್ಸ್ ಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸ್ಮರಿಸುವುದು ಅಷ್ಟೆ ಪ್ರಸ್ತುತವೆನಿಸುತ್ತದೆ ಎಂದು ಕಾರಜೋಳ ಹೇಳಿದರು.

ಜಿಲ್ಲೆಯಲ್ಲಿ ಜುಲೈ 22, 2021 ರಿಂದ ಆಗಸ್ಟ್ 5, 2021 ರವರೆಗೆ ಉಂಟಾದ ಅತಿವೃಷ್ಟಿ/ಪ್ರವಾಹದಿಂದ 14 ತಾಲ್ಲೂಕುಗಳ 201 ಗ್ರಾಮಗಳು ಬಾಧಿತಗೊಂಡಿವೆ.  1,50,015 ಜನರನ್ನು ಹಾಗೂ 67,329 ಜಾನುವಾರುಗಳನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಒದಗಿಸಲು ಕಾಳಜಿ ಕೇಂದ್ರಗಳನ್ನು ತೆರೆದು, ಸಂತ್ರಸ್ತರಿಗೆ ಆಶ್ರಯ ಒದಗಿಸಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾನುವಾರುಗಳ ಶಿಬಿರಗಳನ್ನು ತೆರೆದು ಜಾನುವಾರುಗಳಿಗೂ ಆಶ್ರಯ ಕಲ್ಪಿಸಲಾಗಿದೆ.  ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಒಟ್ಟಾರೆ 2800 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು 1,15,661 ಹೆಕ್ಟೇರ್ ಪ್ರದೇಶ ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದ್ದು, ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಸರ್ವಾಂಗೀಣ  ಅಭಿವೃದ್ಧಿಗೆ ನಮ್ಮ ಸರ್ಕಾರ ಕಂಕಣಬದ್ದವಾಗಿದ್ದು, ಅನೇಕ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಾನು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಸವಾಲುಗಳನ್ನು ಮನಗಂಡಿದ್ದೇನೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.//////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');