ಸಭೆಗೆ ಬರದೆ ಇಸ್ಪೀಟ್ ಆಡಲು ಹೋಗಿದ್ದೇಯಾ? : RDWS ಅಧಿಕಾರಿ ಮಿಶ್ರಿಕೋಟಿ ವಿರುದ್ಧ ಸಚಿವ ಕತ್ತಿ ಗರಂ

0
🌐 Belgaum News :

ಹುಕ್ಕೇರಿ : ಸಚಿವರೊಬ್ಬರು ನಡೆಸುವ ಸಭೆಗೆ ಬರದೆ ಇಸ್ಪೀಟ್ ಆಡಲು ಹೋಗಿದ್ದೇಯಾ…? ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯನ್ನು ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರಶ್ನಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಮಳೆ, ಪ್ರವಾಹ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಆ ಅಧಿಕಾರಿಯ ವಿರುದ್ಧ ಗರಂ ಆಗಿದ್ದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿ.ಸಿ.ಮಿಶ್ರಿಕೋಟಿ ಸಭೆಗೆ ಬರದಿರುವುದನ್ನು ಗಮನಿಸಿದ ಸಚಿವರು, ಕೂಡಲೇ ಸಭೆಗೆ ಕರೆಯಿಸುವಂತೆ ಸೂಚಿಸಿದರು. ಸಚಿವರು ಸಭೆ ನಡೆಸುತ್ತಿದ್ದ ಸಭಾಂಗಣದ ಅಣತಿ ದೂರದಲ್ಲಿದ್ದ ತಮ್ಮ ಕಚೇರಿಯಿಂದ ಆಗಮಿಸಿದ ಮಿಶ್ರಿಕೋಟಿ ಅವರನ್ನು ಕಂಡ ಸಚಿವರು ತೀವ್ರ ಕೆಂಡಾಮಂಡಲರಾದರು.

ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಜಲಜೀವನ ಮಿಷನ್ ಕುರಿತು ಅನೇಕ ದೂರುಗಳಿದ್ದು ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಉತ್ತರಿಸಬೇಕಾದ ನೀವು ಸಭೆಗೆ ಬರದೆ ಇಸ್ಪೀಟ್ ಆಡಲು ಹೋಗಿದ್ದೇಯಾ? ನಿವೃತ್ತಿಗೆ ಇನ್ನೆಷ್ಟು ವರ್ಷ…? ನೀನು ಇರುವಲ್ಲಿ ನಾನೇ ಬರಬೇಕಾ..? ಎಂದು ಸಚಿವರು ಪ್ರಶ್ನಿಸಿದರು. ಈ ವೇಳೆ ಗಲಿಬಿಲಿಗೊಂಡ ಮಿಶ್ರಿಕೋಟಿ ಉತ್ತರಿಸಲು ತಡಕಾಡಿದರು.

ರೈತರಿಂದ ವಿವಿಧ ಬೆಳೆಗಳ ಮೇಲೆ ಬೆಳೆವಿಮೆ ಮಾಡಿಸಿಕೊಳ್ಳುವ ವಿಮಾಕಂಪನಿ ಬೆಳೆ ನಷ್ಟವಾದ ಮೇಲೆ ಸಮರ್ಪಕ ಸಮೀಕ್ಷೆ ನಡೆಸಿ ಪರಿಹಾರ ನೀಡುತ್ತಿಲ್ಲ. ಈ ಕುರಿತು ಕೃಷಿ ಅಧಿಕಾರಿ ಮತ್ತು ಸಂಬಂಧಿಸಿದ ವಿಮಾ ಕಂಪನಿಯವರು ಗಮನಹರಿಸಬೇಕು.ನೆರೆಹಾವಳಿ ಹಾಗೂ ಮಳೆಯಿಂದ ವಿವಿಧ ಬೆಳೆ, ಜನಗಳ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ತಾಲೂಕಿನಲ್ಲಾದ ಹಾನಿಯ ಬಗ್ಗೆ ಒಂದು ವಾರದೊಳಗೆ ಸಮಗ್ರ ಸಮೀಕ್ಷೆ ನಡೆಸಿ ವಿಸ್ಕøತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೆ ಹಾನಿಗೊಳಗಾದ ಕುಟುಂಬಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಕಂಡು ಬಂದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಅಂಗನವಾಡಿ, ಶಾಲೆ ಹಾಗೂ ಆಸ್ಪತ್ರೆ ಕಟ್ಟಡಗಳಿಗೆ ಹಾನಿಯಾಗಿದೆ. ರಸ್ತೆ, ಸೇತುವೆ, ಕುಡಿಯುವ ನೀರಿನ ಘಟಕಗಳು ಮತ್ತು ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಪರಿಕರಗಳೂ ಸಹ ಕೆಟ್ಟು ಹೋಗಿವೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಬೆಳೆಗಳು ನೀರು ಪಾಲಾಗಿವೆ. ಈ ಎಲ್ಲದರ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.

ಚಿಕ್ಕೋಡಿ ಪಿಆರ್‍ಇಡಿ ಪ್ರಭಾರಿ ಇಇ ಎ.ಬಿ.ಪಟ್ಟಣಶೆಟ್ಟಿ, ತಹಸೀಲದಾರ ಡಾ.ಡಿ.ಎಚ್.ಹೂಗಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮತ್ತಿತರರು ಉಪಸ್ಥಿತರಿದ್ದರು. ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ ಸ್ವಾಗತಿಸಿದರು. ತಾಪಂ ವ್ಯವಸ್ಥಾಪಕ ಆರ್.ಎ.ಚಟ್ನಿ ವಂದಿಸಿದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');