ಸಾಲು ಸಾಲು ಹಬ್ಬಗಳು: ಜನಸಾಮಾನ್ಯರಿಗೆ ತರಕಾರಿ, ಆಹಾರ ಧಾನ್ಯ, ಅಡುಗೆ ಅನಿಲ ಬೆಲೆ ಏರಿಕೆ ಬಿಸಿ

0
🌐 Belgaum News :

ಬೆಳಗಾವಿ: ಪ್ರತಿ ತಿಂಗಳ ಕೊನೆಯಲ್ಲಿ ಮನೆಯಲ್ಲಿ ಆಹಾರ ಧಾನ್ಯಗಳ ಡಬ್ಬಿ ಖಾಲಿ ಖಾಲಿ. ಬಾಡಿದ, ಮುರುಟಿದ ತರಕಾರಿಗಳನ್ನು ಇಟ್ಟುಕೊಂಡೇ ‘ಜಿಪುಣ’ತನದಿಂದ ಅಡುಗೆ ಬೇಯಿಸಬೇಕು. ಗ್ಯಾಸ್‌ ಸ್ಟೌ ಉರಿಸುವಾಗಲೂ ಯೋಚಿಸಬೇಕು. ಜೇಬೂ ಖಾಲಿ ಎಂಬ ಸ್ಥಿತಿಗೆ ಬಡ- ಮಧ್ಯಮ ವರ್ಗ ತಲುಪಿದೆ. ಅಡುಗೆ ಮನೆಗೆ ಬೆಲೆ ಏರಿಕೆಯ ‘ಬೆಂಕಿ’ ಬಿದ್ದಿದೆ.

ಕೋವಿಡ್‌ ಎರಡನೇ ಅಲೆಯ ಅಬ್ಬರ ಕಡಿಮೆ ಆಗಿದ್ದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೃಷ್ಟಿಸಿರುವ ತಲ್ಲಣದಿಂದ ಮನೆ- ಮನೆಗಳಲ್ಲಿ ದೈನಂದಿನ ಖರ್ಚು- ವೆಚ್ಚ ದುಬಾರಿಯಾಗಿದೆ. ತರಕಾರಿ, ದಿನಸಿ, ಅಡುಗೆ ಅನಿಲ, ಪೆಟ್ರೋಲ್/ ಡೀಸೆಲ್‌, ಖಾದ್ಯ ತೈಲಗಳ ಬೆಲೆ ಏರಿಕೆ ಗ್ರಾಹಕರ ಜೇಬು ಸುಡಲಾರಂಭಿಸಿದೆ. ಒಂದು ಕಡೆ ಮನೆ ಒಡೆಯನ ಆದಾಯ ಕುಸಿದಿದ್ದರೆ, ಇನ್ನೊಂದೆಡೆ ಖರ್ಚು ವಿಪರೀತ ಏರಿಕೆಯಾಗಿದೆ.

ಗಗನಕ್ಕೇರಿದ ಬೆಲೆ:

ಅಡುಗೆ ಅನಿಲ ಮತ್ತು ಪೆಟ್ರೋಲ್‌ ಬೆಲೆ ರಾಕೆಟ್‌ನಂತೆ ಗಗನಮುಖಿಯಾಗಿದ್ದರೆ, ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಬಹಳ ಕಡೆ ತರಕಾರಿ ಬೆಳೆಗಳು ನಾಶವಾಗಿವೆ. ಇದರಿಂದ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಟೊಮೆಟೊ ಕೆ.ಜಿ.ಗೆ  50 ರಿಂದ 80 ರೂ., ಆಲೂಗಡ್ಡೆ 60 ರಿಂದ 70 ರೂ., ಈರುಳ್ಳಿ 40 ರಿಂದ 50 ರೂ., ನುಗ್ಗೆಕಾಯಿ 100ರಿಂದ 130 ರೂ., ಕ್ಯಾರೆಟ್ 80 ರೂ., ಬೀನ್ಸ್ 70 ರೂ. (ಪ್ರತಿ ಕಿ.ಲೋಗೆ) ಹೀಗೆ ಲಂಗು ಲಗಾಮು ಇಲ್ಲದೆ ಏರುತ್ತಿವೆ.

ಪೆಟ್ರೋಲ್‌ ದರ (ಪ್ರತಿ ಲೀಟರ್‌ಗೆ) ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಭಿನ್ನವಾಗಿದ್ದು, 106 ರಿಂದ 110 ರೂ. ವರೆಗಿದೆ. ಡೀಸೆಲ್‌ ದರ 100 ರೂ. ಗಡಿ ದಾಟಿದೆ. 14.2 ಕೆ.ಜಿ. ಅಡುಗೆ ಅನಿಲದ ಸಿಲಿಂಡರ್‌ ಬೆಲೆ 900 ರೂ. ದಿಂದ ಸಾವಿರದತ್ತ ದಾಪುಗಾಲಿಡುತ್ತಿದೆ. ಖಾದ್ಯ ತೈಲದ ಬೆಲೆ ಕೂಡಾ ಪ್ರತಿ ಲೀಟರ್‌ಗೆ 150 ರಿಂದ 200 ರ ಆಸುಪಾಸಿನಲ್ಲಿದೆ.

ಕುಟುಂಬಗಳ ಬಜೆಟ್ ಏರುಪೇರು:

ಇವೆಲ್ಲದರ ಪರಿಣಾಮ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ತಿಂಗಳ ‘ಬಜೆಟ್‌’ ಏರುಪೇರಾಗಿದೆ. ದುಡಿಮೆ ಮಾಡುವವನ ಆದಾಯ ಕಡಿಮೆ ಆಗಿದ್ದು, ಖರ್ಚು ಮಾತ್ರ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ.

ಐವರು ಸದಸ್ಯರನ್ನು ಒಳಗೊಂಡ ಸಣ್ಣ ಕುಟುಂಬ ಕೆಲವು ತಿಂಗಳ ಹಿಂದೆ ದಿನಸಿಗಾಗಿ 5,000 ದಿಂದ 6000 ರೂ. ಖರ್ಚು ಮಾಡುತ್ತಿತ್ತು. ಈಗ 8,000 ಕ್ಕೆ ಏರಿಕೆ ಆಗಿದೆ. ತರಕಾರಿಗಳಿಗಾಗಿ ತಿಂಗಳಿಗೆ 2,000 ರೂ. ದಿಂದ 2,500 ರೂ. ಬೇಕಾಗುತ್ತಿತ್ತು. ಆ ಪ್ರಮಾಣ ಈಗ 3,000 ಕ್ಕೆ ತಲುಪಿದೆ. ಇದಲ್ಲದೇ ಇನ್ನೂ ಹಲವು ಅಗತ್ಯ ವಸ್ತುಗಳು, ಸೇವೆಗಳ ವೆಚ್ಚವೂ ದುಬಾರಿಯಾಗಿದೆ.

ಇದರ ಜೊತೆಗೆ ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಬಾಡಿಗೆಯ ಬಿಸಿಯೂ ತಟ್ಟಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಮಾಲೀಕರು ಮನೆ ಬಾಡಿಗೆಯನ್ನು ಹೆಚ್ಚಿಸುತ್ತಾರೆ. ಇದು ಕೂಡ ಜನಸಾಮಾನ್ಯರಿಗೆ ಹೊರೆಯಾಗಿದೆ.

ನಗರವಾಸಿಗಳ ಸ್ಥಿತಿಯೂ ಚಿಂತಾಜನಕ:

ಕೋವಿಡ್‌ ಪೂರ್ವಕ್ಕೂ ಈಗಿಗೂ ತಿಂಗಳ ಖರ್ಚಿನಲ್ಲಿ ಕನಿಷ್ಠ 5,000 ರೂ.ದಷ್ಟು ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ ತಿಂಗಳಿಗೆ ಸುಮಾರು 50,000 ರೂ.ದಿಂದ 70,000 ರೂ. ಆದಾಯ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಮನೆ ಬಾಡಿಗೆ ಸೇರಿ ಸುಮಾರು 40,000 ರೂ. ಖರ್ಚು ಬರುತ್ತಿದೆ.ಅಲ್ಲದೆ, ನಗರಗಳಲ್ಲಿ ವಾರಾಂತ್ಯದಲ್ಲಿ ಹೊಟೇಲ್‌ಗೆ ಊಟಕ್ಕೆ ಹೋಗುವ ವಾಡಿಕೆ ಇದ್ದು, ಅಲ್ಲಿಯೂ ಕಾಫಿ, ಟೀ, ತಿಂಡಿ ಬೆಲೆಯೂ ಶೇ 40 ರಿಂದ ಶೇ 50 ರಷ್ಟು ಹೆಚ್ಚಾಗಿದೆ.

50,000 ಕ್ಕಿಂತ ಕಡಿಮೆ ಆದಾಯದವರ ಸ್ಥಿತಿಯೂ ತೀರಾ ಗಂಭೀರ, ಕುಟುಂಬದ ‘ಬಜೆಟ್‌’ ಮೀರಿ ಸಾಲ ಮಾಡಿ ಬದುಕು ಸಾಗಿಸಬೇಕಾಗಿದೆ. ಮನೆ ಬಾಡಿಗೆ,ಮಕ್ಕಳ ಶಾಲಾ ಶುಲ್ಕಕ್ಕೂ ಅವರಿವರನ್ನು ಕೇಳಬೇಕಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');