Belagavi News In Kannada | News Belgaum

ಕೊರೊನಾ ಸೇನಾನಿಗಳು ಮತ್ತು ಲಸಿಕಾ ಕಾರ್ಯಕರ್ತರಿಗೆ ಸನ್ಮಾನ

🌐 Belgaum News :

ಕೊರೊನಾ ಸೇನಾನಿಗಳು ಮತ್ತು ಲಸಿಕಾ ಕಾರ್ಯಕರ್ತರಿಗೆ ಸನ್ಮಾನ

 ಲಸಿಕಾ ಕಾರ್ಯಕರ್ತರ ಕಾಯಕ ದೊಡ್ಡದು: ದುಡಪ್ಪಾ ಕೊಮಾರ

 ಅಥಣಿ: ಬೆಳಗಾವಿ ಜಿಲ್ಲೆಯಲ್ಲಿಯೇ  ಅಥಣಿ ತಾಲೂಕಿನಲ್ಲಿ  ಅತಿಹೆಚ್ಚು  ಕೋವಿಡ್  ಲಸಿಕೆ ಮಾಡಲಾಗಿದೆ.  ಮೊದಲನೆಯ ಮತ್ತು ಎರಡನೆಯ ಹಂತದ ಲಸಿಕೆಗಳನ್ನು ಸು. 5 ಲಕ್ಷ 64ಸಾವಿರದ 66 ಜನರಿಗೆ ನೀಡಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಲಸಿಕೆ ನೀಡಲು  ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ಇತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹಕಾರ ದೊಡ್ಡದು ಎಂದು ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದರು.
 ಅವರು ಗುರುವಾರ ಸ್ಥಳೀಯ ತಾಪಂ ಸಭಾಭವನದಲ್ಲಿ ಜಿಲ್ಲಾ ಪಂಚಾಯತ್,

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕೋಡಿ  ವಿಭಾಗದ ಆಡಳಿತ ಹಾಗೂ  ಅಥಣಿ ಮತ್ತು ಕಾಗವಾಡ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಕೋವಿಡ್ 19 ರ ಸಮಯದಲ್ಲಿ ‌ಲಸಿಕೆ ನೀಡುವ ಕಾರ್ಯಕ್ರಮದ ಅಡಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಕೊರೊನಾ ಸೇನಾನಿಗಳಿಗೆ ಹಾಗೂ ಕೋವಿಡ್ ಲಸಿಕಾ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಅಥಣಿ ತಾಲೂಕಿನಲ್ಲಿ ಅತಿ ಹೆಚ್ಚು  ಕೋವಿಡ್ ಲಸಿಕೆಗಳನ್ನು ನೀಡುವಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ  ಮತ್ತು ಸ್ವಯಂಸೇವಕರ ಕಾರ್ಯವನ್ನು ಸ್ಮರಿಸಿ  ಅಭಿನಂದಿಸಿದರು.
 ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಶೆಟ್ಟರ ಮಠದ  ಮರುಳಸಿದ್ದ ಸ್ವಾಮೀಜಿ ಮಾತನಾಡಿ ತಾಲ್ಲೂಕಿನಾದ್ಯಂತ  ಜನರ ಸಹಕಾರಕ್ಕೆ ಕಾರಣವಾಗಿರುವದು ಅಧಿಕಾರಿಗಳ ತಾಳ್ಮೆ ಮತ್ತು ಜನರೊಂದಿಗೆ ಬೆರೆಯುವಿಕೆಯೆ ಕಾರಣ, ಅಧಿಕಾರ ಚಲಾಯಿಸದೆ ಕಾಯಕ ಮಾಡಿದ ಪರಿಣಾಮವಾಗಿ ಮತ್ತು ಆಯಾ ಹಾಗೂ ಆಶಾ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದ್ದು, ಅವರ ಕಾಯಕದ ಗೌರವ ಸನ್ಮಾನ ಮುಖ್ಯವಾಗಿದೆ. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ್ದು ಅದನ್ನು ಎಲ್ಲರೂ ಪಾಲಿಸಿದರೆ ಮನುಷ್ಯ ಆರೋಗ್ಯವಂತ ಜೀವನ ತಮ್ಮದಾಗಿಸಿಕೊಳ್ಳುವದರ ಜೊತೆಗೆ ಸುಂದರ ಸಮಾಜ ಸಶಕ್ತ ದೇಶವನ್ನು ನಿರ್ಮಾಣ ಮಾಡಬಹುದು ಎಂದರು.
ಈ ವೇಳೆ  ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ  ಮಾತನಾಡಿ ಕೊವಿಡ್ ಸಮಯದಲ್ಲಿ ಆರೋಗ್ಯ ಇಲಾಖೆಯ ಮಹತ್ವ ಸಮಾಜಕ್ಕೆ ತಿಳಿಯುವಂತಾಯಿತು.ಸಂಘರ್ಷವೇ ಜೀವನ ಎಂದು ಚಿಕ್ಕವರಿದ್ದಾಗ ಕೇಳಿದ್ದೆವು.ಈಗ ಎದುರಿಸುತ್ತದ್ದೇವೆ.ಮನಃಪೂರ್ವಕವಾಗಿ ಕೆಲಸ ಮಾಡಿದ ಕಾರ್ಯಕರ್ತರನ್ನು ಗುರಿತಿಸುವಲ್ಲಿ ವಿಳಂಬವಾಗಿರಬಹುದು.ಇಲ್ಲಿಯವರೆಗಿನ ಸಹಕಾರ ತುಂಬಾ ದೊಡ್ಡದು, ಮುಂದೆಯೂ ಆರೋಗ್ಯ ಇಲಾಖೆ ಮತ್ತು ಉಳಿದ ಇಲಾಖೆಗಳ ಸಿಬ್ಬಂದಿ ಸಹಕರಿಸುವಂತಾಗಬೇಕು ಎಂದರು.
ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ‌ ಮಾತನಾಡಿ ಸಮಸ್ಯೆ ಬಂದಾಗ ದೇವರು ನೆನಪಾಗುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಅನಾರೋಗ್ಯದ ಸಮಯದಲ್ಲಿ ನೆನಪಾಗುವದರಿಂದ ಅವರು ದೇವರಿಗೆ ಸಮನಾಗುತ್ತಾರೆ.ವ್ಯಾಕ್ಸಿನ್ ಬಗ್ಗೆ ಆರಂಭದಲ್ಲಿ ಅಪಪ್ರಚಾರ ಇತ್ತು. ಸದ್ಯ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರ ಮನವೊಲಿಸಿ ವ್ಯಾಕ್ಸಿನೇಷನ್‌ ಮಾಡಿದ್ದಾರೆ.ಮೊದಲ ಗೆಲುವನ್ನು ಎಲ್ಲರೂ ಸಾಧಿಸುತ್ತಾರೆ.ಆದರೆ ಸತತ ಗೆಲುವನ್ನು ಸಾಧಿಸುವದು ಕಷ್ಟದಾಯಕವಾಗಿದೆ.ಇದಕ್ಕೆ ನಿರಂತರ ಹಾಗೂ ಪ್ರಾಮಾಣಿಕ ಶ್ರಮದ ಅಗತ್ಯ ಇದೆ. ಕೋವಿಡ್ ವೈರಸ್ ಬಂದವರನ್ನು ಅವರ ಆಪ್ತರೇ ಮುಟ್ಟಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ತಮ್ಮ ಜೀವನವನ್ನು ಪಣಕ್ಕೆ ಒಡ್ಡಿ ಕೆಲಸ ಮಾಡಿದ್ದನ್ನು ಸಮಾಜ ಸದಾಕಾಲ ನೆನಪಿನಲ್ಲಿ ಇಡುತ್ತದೆ ಎಂದರು.
ಈ ವೇಳೆ ಅಥಣಿ ತಾಲೂಕು ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಆರ್ ವಿ ಸಜ್ಜನ್,ಲಸಿಕಾ ವರದಿ ಮಾಡಿದ ಬಿಇಓ ಕಾಸಿನಾಥ ಕಾಂಬಳೆ, ಬಿಇಓ ಬಾಬು ಕಂಟೀಕರ, ನರ್ಸಿಂಗ್ ಅಧಿಕಾರಿ ರಫೀಕ ಮುಜಾವರ, ಬಸವರಾಜ ಗುರುಪಾದಗೋಳ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ  ಮತ್ತು ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
 ಈ ವೇಳೆ ಕಾಗವಾಡ ತಹಶಿಲ್ದಾರ ಆರ್. ಆರ್ ಬುರ್ಲಿ, ತಾಲೂಕ ವೈದ್ಯಾಧಿಕಾರಿ  ಡಾ. ಬಸಗೌಡ ಕಾಗೆ, ಅಥಣಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ  ಡಾ. ಸಿ.ಎಸ್. ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ, ಸಮಾಜ ಸೇವಕ  ರಾಮನೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಬಸ್ ಗೌಡ ಕಾಗೆ ಸ್ವಾಗತಿಸಿದರು.
📱 Read Top News, Belgaum News Updates, Belagavi News in Kannada, Latest News on News Belgaum