Belagavi News In Kannada | News Belgaum

ಟಿ-20 ವಿಶ್ವಕಪ್; ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯ

🌐 Belgaum News :

ದುಬೈ: ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯ ದುಬೈನಲ್ಲಿರುವ ಐಸಿಸಿ ಅಕಾಡೆಮಿ ಗ್ರೌಂಡ್ ನಲ್ಲಿ ಇನ್ನು ಕೆಲವೇ ಗಂಟೆಗಳಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಆಯ್ಕೆಯಾಗಿದ್ದ ಆಟಗಾರರು ಟೀಮ್ ಇಂಡಿಯಾ ಸೇರಿಕೊಂಡಿದ್ದಾಗಿದೆ. ಸೋಮವಾರ ವಿರಾಟ್ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಅತ್ತ ಕಡೆ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದರೆ ಇತ್ತ ಅಭ್ಯಾಸ ಪಂದ್ಯಕೂಡ ರೋಚಕತೆ ಸೃಷ್ಟಿಸಿದೆ. ಪಂದ್ಯ ರಂಗೇರಲು ತಂಡದ ಸೂಕ್ತ ಕಾಂಬಿನೇಶನ್‌ ಒಂದನ್ನು ರಚಿಸುವುದು ಅಭ್ಯಾಸ ಪಂದ್ಯದ ಗುರಿಯಾಗಿದೆ. ಸೂಪರ್‌-12ರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿರುವ ಒಟ್ಟು 8 ತಂಡಗಳು ತಲಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ಇಂದು ತನ್ನ ಮೊದಲ ಪಂದ್ಯ ಆಡಿದರೆ ಬುಧವಾರ ಆಸ್ಟ್ರೇಲಿಯ ವಿರುದ್ಧ ಎರಡನೇ ಪ್ಯಾಕ್ಟೀಸ್ ಮ್ಯಾಚ್​ನಲ್ಲಿ ಕಣಕ್ಕಿಳಿಯಲಿದೆ. ವಿರಾಟ್ ಪಡೆ ಅಭ್ಯಾಸ ಪಂದ್ಯವನ್ನು ಹಗುರವಾಗಿ ತೆಗೆದುಕೊಳ್ಳದೆ ಸಾಕಷ್ಟು ಪ್ರಯೋಗಕ್ಕಿಳಿಯಲಿದೆ.

ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದುಕೊಂಡಿರುವ ಟೀಮ್ ಇಂಡಿಯಾದ ಎಲ್ಲ ಆಟಗಾರರಿಗೆ ಈಗಾಗಲೇ ಯುಎಇ ಪಿಚ್ ಬಗ್ಗೆ ಚೆನ್ನಾಗಿಯೇ ಅರಿವಿದೆ. ಆದರೆ, ಆಡುವ ಬಳಗದ್ದೇ ನಾಯಕ ಮತ್ತು ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿರುವುದು. ಪ್ರಮುಖವಾಗಿ ಓಪನರ್​ಗಳಾಗಿ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಅಥವಾ ಕೆ. ಎಲ್ ರಾಹುಲ್ ಪೈಕಿ ಯಾರಿಗೆ ಸ್ಥಾನ ಎಂಬುವುದೇ ಸವಾಲಾಗಿದೆ. ಐಪಿಎಲ್‌ನಲ್ಲಿ 30 ಸಿಕ್ಸರ್‌ ಸೇರಿದಂತೆ 626 ರನ್‌ ಪೇರಿಸಿರುವ ರಾಹುಲ್‌ ಅವರೇ ಮೊದಲ ಆಯ್ಕೆಗೆ ಸಿಗಬಹುದು. ಆಗ ಇಶಾನ್‌ ಕಿಶನ್‌ 6ನೇ ಕ್ರಮಾಂಕದಲ್ಲಿ ಆಡಲಿಳಿಯಬಹುದು.

ಟೀಮ್ ಇಂಡಿಯಾದ ಎಲ್ಲ ಆಟಗಾರರಿಗೆ ಈ ಅಭ್ಯಾಸ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಅಕ್ಟೋಬರ್‌ 24ರಂದು ಪಾಕಿಸ್ತಾನದ ಎದುರು ತನ್ನ ಅಭಿಯಾನ ಆರಂಭಿಸಲಿರುವ ಭಾರತ ತಂಡವು ಹನ್ನೊಂದರ ಬಳಗವನ್ನು ಈ ಅಭ್ಯಾಸ ಪಂದ್ಯದ ಮೂಲಕ ನಿರ್ಧರಿಸಬೇಕಿದೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ಉತ್ತಮವಾಗಿ ಆಡುವವರಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚು. ಮಾಜಿ ನಾಯಕ ಎಂ. ಎಸ್ ಧೋನಿ ಹೊಸ ಮಾರ್ಗದರ್ಶಕರಾಗಿ ಕೋಚ್​ ರವಿಶಾಸ್ತ್ರಿ ಮತ್ತು ತಂಡದ ಸಹಾಯಕ ಸಿಬ್ಬಂದಿಯೊಂದಿಗೆ ಸೇರಿ ತಂಡಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಹೊಸ ಸಮವಸ್ತ್ರದೊಂದಿಗೆ ಕಣಕ್ಕಿಳಿಯಲಿದೆ. ಹೊಸ ಸಮವಸ್ತ್ರದೊಂದಿಗೆ ಭಾರತ ತಂಡ ಶುಭಾರಂಭ ಮಾಡುವುದೇ ಎಂಬುದನ್ನು ತಿಳಿಯಲು ಕ್ರಿಕೆಟ್‌ ಪ್ರಿಯರು ಬಹಳಾ ಕಾತುರದಿಂದ ಎದುರು ನೋಡುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum