Belagavi News In Kannada | News Belgaum

ಮಹರ್ಷಿ ವಾಲ್ಮೀಕಿಯವರು ಜ್ಞಾನದ ಆಗರವಾಗಿದ್ದಾರೆ: ಯುವ ನಾಯಕ ರಾಹುಲ್ ಜಾರಕಿಹೊಳಿ

🌐 Belgaum News :

ಮಹರ್ಷಿ ವಾಲ್ಮೀಕಿಯವರು ಜ್ಞಾನದ ಆಗರವಾಗಿದ್ದಾರೆ: ಯುವ ನಾಯಕ ರಾಹುಲ್ ಜಾರಕಿಹೊಳಿ

ವಂಟಮುರಿಯಿಂದ ಭೂತರಾಮನಹಟ್ಟಿ ವರೆಗೆ ಅದ್ಧೂರಿಯಾಗಿ ಬೈಕ್ ರ್‍ಯಾಲಿ

ಬೆಳಗಾವಿ: ಮಹರ್ಷಿ ವಾಲ್ಮೀಕಿಯವರು ಜ್ಞಾನದ ಆಗರವಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ಅವರು ತಮ್ಮಲ್ಲಿನ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ಸಮೀಪದ ಭೂತರಾಮನಹಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಯುವ ಸಂಘ ಹಾಗೂ ಮಹಿಳಾ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಇದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ:

ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ವಾಲ್ಮೀಕಿಯವರ ಜೀವನದ ಕುರಿತು ತಿಳಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮನವಿ ಮಾಡಿದರು.

ಪ್ರಮುಖವಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಕಟ್ಟಿಕೊಡಬೇಕಾದ ಕಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಳ ಸಮುದಾಯವಾದ ಈ ಸಮಾಜಕ್ಕೆ ರಾಜಕೀಯವಾಗಿ ಸಿಕ್ಕಿರುವ ಮೀಸಲಾತಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಿಗಬೇಕಾಗಿದೆ ಎಂದು ಹೇಳಿದರು.

ವಾಲ್ಮೀಕಿಯವರು ಮಹಾನ್ ವ್ಯಕ್ತಿಯಾಗಿದ್ದು, ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಮುಖಂಡಡರಾದ ಸಿದ್ದು ಸುಣಗಾರ, ಯಲ್ಲಪ್ಪ ಬುದ್ರಿ, ಬೀಮಗೌಡ ಪಾಟೀಲ, ಸುನೀಲ ಸುಣಗಾರ, ವಿಜಯ ವನಮನಿ, ಮಹಾದೇವಿ ಚೌಗಲಾ, ಬೀಮರಾಯಿ ನಾಯಿಕ್, ಬಾಲಕೃಷ್ಣ ಪಾಟೀಲ್, ರವೀಂದ್ರ ನಾಯ್ಕರ್, ಶಿವರಾಯಿ ಪಾಟೀಲ, ಮುಶಪ್ಪ ಪಾಟೀಲ್, ಸುರೇಶ ನಾಯ್ಕ್, ದಯಾನಂದ ಪಾಟೀಲ, ರಾಮಣ್ಣಾ ಗುಳ್ಳಿ, ಬೀಮರಾಯಿ ಕಟಬಾಳಿ, ಸಣ್ಣಪ್ಪ ಕಟಬಾಳಿ, ಪರಸಪ್ಪ ಕಟಬಾಳಿ, ನಾಗಪ್ಪ ನಾಯಕ್ ಸೇರಿ ಅನೇಕ ಮುಖಂಡರು ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು.

ವಂಟಮುರಿಯಿಂದ ಭೂತರಾಮನಹಟ್ಟಿಗೆ ಬೈಕ್ ರ್‍ಯಾಲಿ:

ಸಮಾರಂಭಕ್ಕೂ ಮೊದಲು ಭೂತರಾಮನಹಟ್ಟಿಯ ವಾಲ್ಮೀಕಿ ಯುವ ಸಂಘದ ವತಿಯಿಂದ ವಂಟಮುರಿ ಗ್ರಾಮದಿಂದ ಭೂತರಾಮನಹಟ್ಟಿ ವರೆಗೆ ಅದ್ದೂರಿಯಾಗಿ ಬೈಕ್ ರ್‍ಯಾಲಿ ಜರುಗಿತು.

ಯುವ ನಾಯಕ ರಾಹುಲ್ ಜಾರಕಿಹೊಳಿಯವರು ರ್‍ಯಾಲಿಗೆ ಚಾಲನೆ ನೀಡಿದರು. ರಾಹುಲ್ ಅವರು ತೆರೆದ ಜೀಪ್ ನಲ್ಲಿ ಮುಂದೆ ಸಾಗಿದರೇ, ನೂರಾರು ಯುವಕರು ಬೈಕ್ ರ್‍ಯಾಲಿಯ ಮೂಲಕ ಆಗಮಿಸಿದರು.

ಮೆರವಣಿಗೆಯುದ್ದಕ್ಕೂ ವಾಲ್ಮೀಕಿ ಮಹರ್ಷಿ ಅವರಿಗೆ ಜೈಕಾರ ಕೂಗಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ರ್‍ಯಾಲಿ ವೀಕ್ಷಿಸಿದರು. ವಂಟಮುರಿಯಿಂದ ಆರಂಭವಾದ ರ್‍ಯಾಲಿ ಹೆದ್ದಾರಿ ಮಾರ್ಗವಾಗಿ ಸಂಚರಿಸಿ, ಭೂತರಾಮನಹಟ್ಟಿ ವರೆಗೆ ಜರುಗಿತು.

ಮೆರವಣಿಗೆಯಲ್ಲಿ ಮುಖಂಡರಾದ ಸಿದ್ದು ಸುಣಗಾರ, ರಾಮಣ್ಣಾ ಗುಳ್ಳಿ, ಈರಪ್ಪ ಪಾಟೀಲ, ಬಸು ಜಿದ್ದಿ ಸೇರಿದಂತೆ ವಿವಿಧ ಮುಖಂಡರು, ರಾಹುಲ್ ಜಾರಕಿಹೊಳಿ ಅಭಿಮಾನಿಗಳು ಹಾಗೂ ಸುತ್ತಲಿನ ಗ್ರಾಮಗಳ ಯುವಕರು ಭಾಗವಹಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum