Belagavi News In Kannada | News Belgaum

ಉಪಚುನಾವಣೆ ಇಡೀ ದೇಶದ ನಾಗರಿಕರ ಗೌರವದ ಪ್ರಶ್ನೆಯಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

🌐 Belgaum News :

ಹಾನಗಲ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿಯಾಗಿ ಆಡಳಿತ ನಡೆಸುತ್ತಿವೆ. ರೈತರು ಹಾಗೂ ಜನಸಾಮಾನ್ಯರ ಜೀವನವನ್ನು ಸುಧಾರಿಸುವ ಕಾರ್ಯವನ್ನು ಈ ಸರ್ಕಾರಗಳು ಮಾಡುತ್ತಿಲ್ಲ. ಹೀಗಾಗಿ, ಉಪಚುನಾವಣೆ ಇಡೀ ದೇಶದ ನಾಗರಿಕರ ಗೌರವದ ಪ್ರಶ್ನೆಯಾಗಿದೆ. ಹಾನಗಲ್ ಮತಕ್ಷೇತ್ರದ ಜನರು ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಆಡಳಿತ ಸರ್ಕಾರಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಮತಕ್ಷೇತ್ರದ ಅಕ್ಕಿಆಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಕ್ಕಿವಳ್ಳಿ ಗ್ರಾಮದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ರೈತ ವಿರೋಧಿ ಕಾನೂನುಗಳು, ನಿರಂತರ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ಜನರಿಗೆ ತೊಂದರೆ ನೀಡುತ್ತಿದ್ದರೇ, ಪಡಿತರ ಅಕ್ಕಿ ಕಡಿತ, ಸ್ಕಾಲರ್ ಶಿಪ್ ಗೆ ತಡೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದೆ. ಹೀಗಾಗಿ, ಇದಕ್ಕೆ ಜನರೇ ಉತ್ತರ ನೀಡಬೇಕಾಗಿದೆ ಎಂದರು.

ಜನರ ನಿರೀಕ್ಷೆ ಹುಸಿ:

ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದೇಶದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, 7 ವರ್ಷಗಳಲ್ಲಿ ಮೋದಿಯವರು ಏನನ್ನು ಮಾಡದೇ ಜನರ ನಿರೀಕ್ಷೆ ಹುಸಿಯಾಗಿಸಿದ್ದಾರೆ. ಪ್ರಧಾನಿಯವರು ಸರ್ಕಾರಿ ಸಂಸ್ಥೆಗಳನ್ನೆಲ್ಲ ಖಾಸಗೀಕರಣಗೊಳಿಸವ ಮೂಲಕ ಎಲ್ಲವನ್ನೂ ಮಾರಾಟ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಪಡಿತರ ಅಕ್ಕಿಯನ್ನು ಕಡಿತಗೊಳಿಸಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಬಡವರಿಗೆ ಮನೆಗಳನ್ನೇ ನಿರ್ಮಿಸಿಕೊಟ್ಟಿಲ್ಲ. ವಿದ್ಯಾಸಿರಿ ಸೇರಿದಂತೆ ಇನ್ನಿತರೇ ಸ್ಕಾಲರ್ ಶಿಪ್ ಯೋಜನೆಗಳನ್ನೇ ನಿಲ್ಲಿಸಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಉಪಚುನಾವಣೆ ಸೇರಿ ಮುಂಬರುವ ಚುನಾವಣೆಗಳಲ್ಲಿ ಜನಸಾಮಾನ್ಯರ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಎಸ್.ಆರ್. ಪಾಟೀಲ್, ರಾಘವೇಂದ್ರ ತಹಶೀಲ್ದಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಪುತ್ರ ರಾಹುಲ್ ಜಾರಕಿಹೊಳಿ, ಪುಟ್ಟಪ್ಪ, ಸಿದ್ದಣ್ಣ ಕನಕ್ಕನವರ, ಸುಭಾಸ ತಳವಾರ ಸೇರಿ ಇನ್ನಿತರರು ಪ್ರಚಾರದಲ್ಲಿ ಭಾಗವಹಿಸಿದ್ದರು.//////

📱 Read Top News, Belgaum News Updates, Belagavi News in Kannada, Latest News on News Belgaum