Belagavi News In Kannada | News Belgaum

ಸಿಎಂ ಬೊಮ್ಮಾಯಿಯಿಂದ ನಾಳೆ ಕಿತ್ತೂರು ಉತ್ಸವ ಉದ್ಘಾಟನೆ

🌐 Belgaum News :

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಉತ್ಸವವು ಅ.23 ಹಾಗೂ 24 ರಂದು ಜರುಗಲಿದೆ. ಈ ಬಾರಿ ಕಿತ್ತೂರು ಉತ್ಸವದ (25 ವರ್ಷ) ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅ.23 ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಸಾಯಂಕಾಲ 7 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಜಲ ಸಂಪನ್ಮೂಲ (ಬೃಹತ್ ಮತ್ತು ಮಧ್ಯಮ ನೀರಾವರಿ) ಸಚಿವರಾದ ಗೋವಿಂದ ಕಾರಜೋಳ
ಅವರು “ಕಿತ್ತೂರು ಸಂಸ್ಥಾನದ ಇತಿಹಾಸ ಮತ್ತು ಸಂಸ್ಕೃತಿ ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
ವಿಶೇಷ ಆಮಂತ್ರಿತರಾಗಿ ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ, ಜೀವಶಾಸ್ತ್ರ ಮತ್ತು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರಗೇಶ್ ನಿರಾಣಿ, ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು ವಹಿಸುವರು.
ಕಾಕತಿಯಲ್ಲಿ ಮೂರ್ತಿ ಪೂಜೆ:
ಅ.23 ರಂದು ರಾಣಿ ಚನ್ನಮ್ಮನ ತವರೂರು ಕಾಕತಿಯಲ್ಲಿ ಬೆಳಿಗ್ಗೆ 8:30ಕ್ಕೆ ಮೂರ್ತಿ ಪೂಜೆ ನೇರವೇರಲಿದೆ. ಕಾಕತಿಯ ಶಿವಪೂಜಾಮಠದ  ಶ್ರೀ ರಾಚಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮಗಳು:
ಅ.23 ರಂದು ಕಿತ್ತೂರಿನ ಗಡಾದಮರಡಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಹಾಗೂ ಕಿತ್ತೂರು ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಜಿ.ಹಿರೇಮಠ ಅವರು ಉದ್ಘಾಟನಾ ಧ್ವಜಾರೋಹಣ ನೇರವೆರಿಸಲಿದ್ದಾರೆ.

ನಂತರ, ಬೆಳಿಗ್ಗೆ 10 ಗಂಟೆಗೆ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಚನ್ನಮ್ಮ ವಿಜಯಜ್ಯೋತಿ ಬರಮಾಡಿಕೊಳ್ಳಲಾಗುವುದು ಹಾಗೂ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಲಾಗುವುದು. ಜಲ ಸಂಪನ್ಮೂಲ (ಬೃಹತ್  ಮತ್ತು ಮಧ್ಯಮ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಬಳಿಕ, ಬೆಳಿಗ್ಗೆ 10:30 ಕ್ಕೆ ಜಾನಪದ ಕಲಾವಾಹಿನಿ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಅರಣ್ಯ ಹಾಗೂ ಆಹಾರ, ನಾಗರಿಕ  ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರು ಉಪಸ್ಥಿತರಿರುವರು.

ಬೆಳಿಗ್ಗೆ 11 ಗಂಟೆಗೆ ಕಿತ್ತೂರಿನ ಕೆ.ಎನ್.ವ್ಹಿ. ಪ್ರೌಢ ಶಾಲೆಯ ಆವರಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರಗೇಶ್ ನಿರಾಣಿ ಅವರು ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅ.24 ರಂದು ಗೋಷ್ಠಿಗಳು:
ಅಕ್ಟೋಬರ್ 24 (ರವಿವಾರ) ಕಿತ್ತೂರು ರಾಣಿ ಚನ್ನಮ್ಮನ ಚರಿತ್ರೆ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಕಿತ್ತೂರಿನ ಕೋಟೆ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಗೋಷ್ಠಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಗೋಷ್ಠಿ ಉದ್ಘಾಟಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ರಾಣಿ ಚನ್ನಮ್ಮನ ಕಥೆಯ ರೂಪಕ, ರಾಣಿ ಚನ್ನಮ್ಮನ ಕೌಟುಂಬಿಕ ಜೀವನ, ರಾಣಿ ಚನ್ನಮ್ಮ ಮತ್ತು ಸರದಾರ ಗುರುಸಿದ್ದಪ್ಪ,ರಾಣಿ ಚನ್ನಮ್ಮ ಮತ್ತು ಬಿಚಗತ್ತಿ ಚನ್ನಬಸಪ್ಪ ಕುರಿತು ಗೋಷ್ಠಿ ನಡೆಯಲಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ ಅವರು ಈ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 12 ಗಂಟೆಗೆ ರಾಣಿ ಚನ್ನಮ್ಮನ ಕಿತ್ತೂರು ಸಂಸ್ಥಾನ ಹಾಗೂ ಬೆಳವಡಿ,ಜಮಖಂಡಿ ಪಠವರ್ಧನ ಸಂಸ್ಥೆಯ ಸಂಬಂಧಗಳು, ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ , ರಾಣಿ ಚನ್ನಮ್ಮನ ಪೂರ್ವಜರ ಚರಿತ್ರೆ ಕುರಿತು ಗೋಷ್ಠಿ ನಡೆಯಲಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಯ.ರು.ಪಾಟೀಲ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ 3 ನೆಯ ಗೋಷ್ಠಿ ಆರಂಭಗೊಳ್ಳಲಿದೆ. ವಿದೇಶಿ ದಾಖಲೆಗಳಲ್ಲಿ ಚನ್ನಮ್ಮ, ರಾಣಿ ಚನ್ನಮ್ಮ ಹಾಗೂ ಆಕೆಯ ಮಕ್ಕಳು ಮತ್ತು ಪತಿರಾಯ ಮಲ್ಲಸರ್ಜ ಅರಸ, ರಾಣಿ ಚನ್ನಮ್ಮನ ಮತ್ತು ಬ್ರಿಟಿಷರ ಯುದ್ಧ ಸೈನ್ಯ ದಳಗಳ ಕುರಿತು ಗೋಷ್ಠಿ ನಡೆಯಲಿದೆ.
ಡಾ. ಅರವಿಂದ ಯಾಳಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 2:30 ಗಂಟೆಗೆ ರಾಣಿ ಚನ್ನಮ್ಮ ಮತ್ತು ಬ್ರಿಟಿಷ್ ದಾಖಲೆಗಳು, ರಾಣಿ ಚನ್ನಮ್ಮ ಮತ್ತು ಬ್ರಿಟಿಷ್ ಸೆರೆಯಾಳುಗಳು ಮುಂತಾದ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ. ಡಾ.ಐ.ಕೆ.ಪತ್ತಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 3:30 ಗಂಟೆಗೆ ರಾಣಿ ಚನ್ನಮ್ಮ ಮತ್ತು ಚಾಪ್ಲಿನ್, ರಾಣಿ ಚನ್ನಮ್ಮ ಮತ್ತು ಅರಮನೆಯ ಖಜಾನೆ, ರಾಣಿ ಚನ್ನಮ್ಮ ಮತ್ತು ಅಮಟೂರು ಬಾಳಪ್ಪ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ. ಜ್ಯೋತಿ ಕಾಲೇಜಿನ ಪ್ರಾಧ್ಯಾಪಕರಾದ ರಾಮಕೃಷ್ಣ ಮರಾಠೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಯಂಕಾಲ 4:30 ಗಂಟೆಗೆ ರಾಣಿ ಚನ್ನಮ್ಮ ಮತ್ತು ಥ್ಯಾಕರೆ, ಜಾನಪದ ಸಾಹಿತ್ಯದಲ್ಲಿ ಚನ್ನಮ್ಮ, ಮೋಡಿ ದಾಖಲೆಗಳಲ್ಲಿ ಚನ್ನಮ್ಮನ ಚರಿತ್ರೆ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ. ಡಾ. ಶಿಲಾಧರ ಮುಗಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಯಂಕಾಲ 5:30 ಗಂಟೆಗೆ ರಾಣಿ ಚನ್ನಮ್ಮನ ಆಳ್ವಿಕೆಯ ಕಾಲದ ವ್ಯಾಪಾರ ಮತ್ತು ವಾಣಿಜ್ಯೋದ್ಯಮ, ಚನ್ನಮ್ಮನ ಕಾಲದ ಶಸ್ತ್ರಾಸ್ತ್ರಗಳು ಮತ್ತು ಉಡುಪುಗಳು, ಆಭರಣಗಳು ಹಾಗೂ ರಾಜಚಿನ್ಹೆಗಳು ಕುರಿತು ಗೋಷ್ಠಿ ನಡೆಯಲಿದೆ. ಡಾ. ಸ್ಮಿತ ಸುರೇಬಾನಕರ ಅಧ್ಯಕ್ಷತೆ ವಹಿಸಲಿದ್ದಾರೆ.

ವಿವಿಧ ಕ್ರೀಡಾ ಕಾರ್ಯಕ್ರಮಗಳ ಆಯೋಜನೆ:

ಅಕ್ಟೋಬರ್ 24 (ರವಿವಾರ) ಬೆಳಿಗ್ಗೆ 7 ಗಂಟೆಗೆ ಚನ್ನಮ್ಮ ವೃತ್ತದ ಬಳಿ ಪುರುಷ ಹಾಗೂ ಮಹಿಳೆಯರಿಗಾಗಿ ಸೈಕ್ಲಿಂಗ್ ಆಯೋಜಿಸಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಉಳವಪ್ಪಾ ಉಳ್ಳಿಗಡ್ಡಿ ಅವರು ಉದ್ಘಾಟಿಸಲಿದ್ದಾರೆ.

ಬಳಿಕ, ಬೆಳಿಗ್ಗೆ 11 ಗಂಟೆಗೆ ಪುರುಷ ಹಾಗೂ ಮಹಿಳೆಯರಿಗಾಗಿ ಮುಕ್ತ ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮೈದಾನದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಆರ್.ವಾಯ್. ಪರವಣ್ಣವರ ಅವರು ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭ:

ಸಮಾರೋಪ ಸಮಾರಂಭವು ಅ.24 ರಂದು ಸಂಜೆ 7 ಗಂಟೆಗೆ ಜರುಗಲಿದೆ. ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮತ್ತು ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷರಾದ ವಿಶ್ವನಾಥ ಮಾಮನಿ ಉಪಸ್ಥಿತರಿರುವರು.

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಸಭೆ ಸದಸ್ಯರಾದ ಈರಣ್ಣಾ ಕಡಾಡಿ, ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಹಣಮಂತ ನಿರಾಣಿ ಆಗಮಿಸಲಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಎಂ. ರಾಮಚಂದ್ರ ಗೌಡ ಸಮಾರೋಪ ನುಡಿಗಳಾನ್ನಡಲಿದ್ದಾರೆ. ಬಳಿಕ, ರಾತ್ರಿ 9:15 ರಿಂದ ಖ್ಯಾತ ಚಲನಚಿತ್ರಗಳ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum