Belagavi News In Kannada | News Belgaum

ಒಂದೇ ಕುಟುಂಬದ ಐವರ ಸಾವು; ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ದಿಗ್ಭ್ರಮೆ; ಸಂತಾಪ

🌐 Belgaum News :

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಜಿ ಯೋಧನೊಬ್ಬ ತನ್ನ ನಾಲ್ವರು ಮಕ್ಕಳಿಗೆ ವಿಷ ನೀಡಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗೆ ಜಲಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ಸೋಂಕಿನಿಂದ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ ಇವರು ನಾಲ್ಕು ಮಕ್ಕಳಿಗೆ ವಿಷ ಪ್ರಾಶನ ಮಾಡಿ ತಾನೂ ದಾರುಣವಾಗಿ ಸಾವಿಗೀಡಾಗಿರುವುದು ಮನಕಲಕುತ್ತದೆ ಎಂದು ಶೋಕ ವ್ಯಕ್ತಪಡಿಸಿರುವ ಸಚಿವ ಕಾರಜೋಳ, ಎಂತಹ ಪರಿಸ್ಥಿತಿಯಲ್ಲೂ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವ ಕಳೆದುಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ:

ಪತ್ನಿ ಸಾವಿನಿಂದ ಮನನೊಂದು ವ್ಯಕ್ತಿಯೋರ್ವ ತನ್ನ ನಾಲ್ಕು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲ್ಲೂಕಿನ ಬೋರಗಲ್ ಗ್ರಾಮದಲ್ಲಿ ಇಂದು ನಡೆದಿತ್ತು.

ಗೋಪಾಲ ಹಾದಿಮನಿ (46) ಹಾಗೂ ಮಕ್ಕಳಾದ ಸೌಮ್ಯಾ ಹಾದಿಮನಿ (19), ಸ್ವಾತಿ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನಾ ಹಾದಿಮನಿ (8) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.

ಗೋಪಾಲ ಅವರ ಪತ್ನಿ  ಜುಲೈ 6 ರಂದು ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಮೃತಪಟ್ಟಿದ್ದರು. ಇದರಿಂದ ಮನನೊಂದು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗೋಪಾಲ್ ಅವರು ನಿವೃತ್ತ ಸೈನಿಕರಾಗಿದ್ದಾರೆ. ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum