Belagavi News In Kannada | News Belgaum

ಟಿ20 ವಿಶ್ವಕಪ್​ನಲ್ಲಿಂದು ರೋಚಕ ಕದನ: ಪಾಕ್​- ಭಾರತ ಮುಖಾಮುಖಿ

🌐 Belgaum News :

ಬೆಂಗಳೂರು : ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾದುಕುಳಿತಿರುವ ದಿನ ಬಂದಿದೆ. ಟಿ20 ವಿಶ್ವಕಪ್ ಮಹಾಸಮರದಲ್ಲಿಂದು ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿದೆ.

ಟಿ20 ವಿಶ್ವಕಪ್ ನಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ನಾಯಕನಾಗಿ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನವನ್ನು ಬಾಬರ್ ಅಜಮ್ ಮುನ್ನಡೆಸುತ್ತಿದ್ದಾರೆ.

ಉಭಯ ತಂಡಗಳೂ ಗೆಲುವಿನ ವಿಶ್ವಾಸದಲ್ಲಿದ್ದರೂ ಭಾರತವೇ ಇಲ್ಲಿ ಫೇವರಿಟ್‌. ಇದಕ್ಕೆ ಕಾರಣವೆಂದರೆ ಇದುವರೆಗೆ ಭಾರತ ವಿಶ್ವಕಪ್‌ನಲ್ಲಿ ಪಾಕ್‌ವಿರುದ್ಧ ಸೋತೇ ಇಲ್ಲ. ಇಲ್ಲಿಯವರೆಗೆ ಐದು ಬಾರಿ ಈ ತಂಡಗಳು ಮುಖಾಮುಖೀಯಾಗಿದ್ದು, ಪ್ರತೀ ಬಾರಿಯೂ ಭಾರತವೇ ಗೆದ್ದ ಇತಿಹಾಸವಿದೆ.

ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಭಾರತ ಭರ್ಜರಿ ಸಿದ್ಧತೆ ನಡೆಸಿದೆ. ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರರು ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಚೇಸ್ ಮಾಡುವ ಸಾಮರ್ಥ್ಯವಿರುವಂತೆ ಕಾಣಿಸಿಕೊಂಡಿದ್ದಾರೆ.

ಟಿ20 ಮಾದರಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಲೇ ಬಂದಿರುವ ಪಾಕಿಸ್ತಾನದ ಬತ್ತಳಿಕೆಯಲ್ಲಿ ಅಪಾಯಕಾರಿ ಕ್ರಿಕೆಟ್‌ ಅಸ್ತ್ರಗಳಿರುವುದು ಸುಳ್ಳಲ್ಲ. ಇಲ್ಲಿನ ಕೆಲವು ಆಟಗಾರರ ಸಾಮರ್ಥ್ಯ ಎದುರಾಳಿಗಳ ಅರಿವಿಗೆ ಇನ್ನೂ ಬಂದಿಲ್ಲ. ಅನುಭವಿಗಳಾದ ಶೋಯಿಬ್‌ ಮಲಿಕ್‌, ಮೊಹಮ್ಮದ್‌ ಹಫೀಜ್‌ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಪಾಕ್‌ ರಣತಂತ್ರ ಸದ್ಯಕ್ಕೆ ನಿಗೂಢವಾಗಿಯೇ ಇದೆ.

ಒಟ್ಟಾರೆ ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ವಿರುದ್ಧ ಕೊಂಚ ಮೇಲುಗೈ ಸಾಧಿಸಿರುವ ಪಾಕಿಸ್ತಾನ, ವಿಶ್ವಕಪ್​ ಎಂದಾಕ್ಷಣ ಮುದುರಿ ಮೂಲೆ ಸೇರುತ್ತಿದೆ. ಏಕದಿನ ವಿಶ್ವಕಪ್​​ನಲ್ಲಿ 7 ಬಾರಿ, ಟಿ-20 ವಿಶ್ವಕಪ್​ನಿಂದ 2007ರಿಂದ ಇಲ್ಲಿಯವರೆಗೆ 5 ಮೂಖಾಮುಖಿಯಲ್ಲಿ ಭಾರತವೇ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಪಂದ್ಯದ ವಿವರ :

ಭಾರತ vs ಪಾಕಿಸ್ತಾನ, ಟಿ20 ವಿಶ್ವಕಪ್‌-2021

ದಿನಾಂಕ: ಅಕ್ಟೋಬರ್‌ 24, 2021

ಸಮಯ: ರಾತ್ರಿ 07:30ಕ್ಕೆ (ಭಾರತೀಯ ಕಾಲಮಾನ)

ಸ್ಥಳ: ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣ, ದುಬೈ//////

📱 Read Top News, Belgaum News Updates, Belagavi News in Kannada, Latest News on News Belgaum