Belagavi News In Kannada | News Belgaum

ಅಮನ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಉದ್ಘಾಟನೆ

🌐 Belgaum News :

ಅಮನ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಉದ್ಘಾಟನೆ

ಮಕ್ಕಳಿಗೆ ಮನೆಯಲ್ಲಿ ಪಾಲಕರು ಒಳ್ಳೆಯ ಸಂಸ್ಕಾರ ನೀಡಿದರೆ ಅದೇ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಒಳ್ಳೆಯ ಶಿಕ್ಷಣ ನೀಡುವ ಮೂಲಕ ಬದುಕಲು ಕಲಿಸುತ್ತಾರೆ ಹೀಗಾಗಿ ಮಕ್ಕಳಿಗೆ ಮನೆಯಷ್ಟೇ ಶಾಲೆಯೂ ಕೂಡ ಮಹತ್ವದ್ದಾಗಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ಅಥಣಿ ಗ್ರಾಮೀಣ ಪ್ರದೇಶದಲ್ಲಿ ಅಮನ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
    ಅಥಣಿಯಲ್ಲಿ ೧೯೮೫ ರ ಅವಧಿಯಲ್ಲಿ ಒಂದೇ ಒಂದು ಇಂಗ್ಲೀಷ ಮಾಧ್ಯಮ ಕಾನ್ವೆಂಟ್ ಶಾಲೆ ಇತ್ತು ಆದರೆ ಇಂದು ಗ್ರಾಮೀಣ ಪ್ರದೇಶದಲ್ಲೂ ಕೂಡ ಕನ್ನಡ ಹಾಗೂ ಇಂಗ್ಲೀಷ ಮಾಧ್ಯಮದ ಕಾನ್ವೆಂಟ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದ ಅವರು ಅಮಾನುಲ್ಲಾ ಜಮಾದಾರ ಅಧ್ಯಕ್ಷತೆಯಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಾರಂಭಗೊಂಡ ಈ ಶಾಲೆ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
    ಸಾನಿಧ್ಯವಹಿಸಿ ಮಾತನಾಡಿದ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಯಾವುದೇ ವ್ಯಕ್ತಿ ಹಿಂದೂ ಇರಲಿ, ಇಸ್ಲಾಂ ಇರಲಿ, ಸಿಖ್ ಅಥವಾ ಕ್ರೈಸ್ತ ಧರ್ಮದವರಿದ್ದರೂ ಕೂಡ ಶಿಕ್ಷಣ ಬೇಕೆ ಬೇಕು, ಶಿಕ್ಷಣದಿಂದಲೇ ವ್ಯಕ್ತಿಯ ಬದುಕಿಗೆ ಪ್ರೇರಣೆ ಸಿಗುತ್ತದೆ ಎಂದ ಅವರು ಶಿಕ್ಷಣ ಸಂಸ್ಥೆಗಳು ಅಥವಾ ಶಾಲೆಗಳ ಸಂಖ್ಯೆ ಹೆಚ್ಚಾಗುವುದು ಸುಸಂಕೃತ ಸಮಾಜದ ಲಕ್ಷಣ ಎಂದರು.
   ಅಮನ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಅಮಾನುಲ್ಲಾ ಜಮಾದಾರ ಮಾತನಾಡಿ, ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿ ಈ ಶಾಲೆಯನ್ನು ಪ್ರಾರಂಭಿಸಿಲ್ಲ. ಇಲ್ಲಿ ಎಲ್ಲ ಸಮುದಾಯದ ಮಕ್ಕಳಿಗೆ ಆದ್ಯತೆ ನೀಡುತ್ತೇನೆ ಎಂದ ಅವರು ಮುಂದಿನ ದಿನಗಳಲ್ಲಿ ಈ ಶಾಲೆಯ ಮೂಲಕ ಶೈಕ್ಷಣಿಕ ಸೇವೆ ಮಾಡುತ್ತೇನೆ ಎಂದು ಹೇಳಿದರು.
    ಇಸ್ಲಾಂ ಧರ್ಮ ಗುರು ಮೌಲಾನಾ ಜುಬೇರ ಮಾತನಾಡಿ, ಮನುಷ್ಯನಿಗೆ ಶಿಕ್ಷಣ ಬೇಕೆ ಬೇಕು ಶಿಕ್ಷಣ ಇಲ್ಲದೇ ಹೋದಲ್ಲಿ ಮನುಷ್ಯ ಎನಿಸಿಕೊಳ್ಳದೇ ಆತನೊಬ್ಬ ಪ್ರಾಣಿ, ಪಕ್ಷಿಯಂತಾಗುತ್ತಾನೆ ಎಂದರು.
    ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಗಿರೀಶ ಬುಟಾಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಅನೀಲ ಸೌದಾಗರ, ಶಶಿಕಾಂತ ಸಾಳವೆ, ಹಾಜಿ ಮುಸ್ತಫಾ ಜಮಾದಾರ ಸೇರಿದಂತೆ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂತೋಷ ಬಡಕಂಬಿ ನಿರೂಪಿಸಿದರು, ಅಣ್ಣಾಸಾಹೇಬ ತೆಲಸಂಗ ವಂದಿಸಿದರು.
📱 Read Top News, Belgaum News Updates, Belagavi News in Kannada, Latest News on News Belgaum