Belagavi News In Kannada | News Belgaum

ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಹುಮತಗಳ ಅಂತರದಿಂದ ಗೆಲ್ಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮನವಿ

🌐 Belgaum News :

ಹಾನಗಲ್: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ. ಹೀಗಾಗಿ, ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಜನವಿರೋಧಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಉಪಚುನಾವಣೆ ಪ್ರಚಾರದ ಅಂಗವಾಗಿ ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದು ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ದೇಶದ ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ದೇಶವನ್ನೇ ಮಾರಲು ಹೊರಟಿದೆ. ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿಬಡಜನರ ಜೀವನವನ್ನು ದುಸ್ತರವನ್ನಾಗಿಸಿದೆ ಎಂದು ಆರೋಪಿಸಿದೆ. ರಾಜ್ಯ ಸರ್ಕಾರ ಜನಪರವಾಗಿ ಕಾರ್ಯನಿರ್ವಹಿಸದೇ, ದುರಾಡಳಿತ ನಡೆಸುತ್ತಿದೆ. ಹೀಗಾಗಿ, ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಶ್ರೀನಿವಾಸ್ ಮಾನೆಯವರನ್ನು ಗೆಲ್ಲಿಸಿ:

ಉಪಚುನಾವಣೆ ಕೇವಲ ಹಾನಗಲ್ ಗೆ ಸೀಮಿತವಲ್ಲ. ಇದು ರಾಜ್ಯ ಮತ್ತು ದೇಶದ ಗಮನಸೆಳೆಯುವ ಚುನಾವಣೆಯಾಗಿದೆ. ಇಲ್ಲಿ ಒಂದು ವೋಟು ಕೂಡ ಮುಖ್ಯವಾಗಿದೆ. ಹೀಗಾಗಿ ಕ್ಷೇತ್ರದ ಜನರು ಯೋಗ್ಯ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರನ್ನು ಬಹಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿತ್ತು. ಜನಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿತ್ತು. ಇವುಗಳನ್ನು ಮನಗಂಡು ಜನರು ಕಾಂಗ್ರೆಸ್ ಮತ ನೀಡಬೇಕು ಎಂದರು.

ರಾಜ್ಯ ಸರ್ಕಾರದ ದುರಾಡಳಿತ:

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅನೇಕ ಯೋಜನೆಗಳನ್ನು ನಿಲ್ಲಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ದುರಾಡಳಿತ ನಡೆಸುತ್ತಿದೆ. ಬಿಜೆಪಿ ಸರ್ಕಾರ ಎರಡೂವರೆ ವರ್ಷದಲ್ಲಿ ಒಂದೇ ಒಂದು ಆಶ್ರಯ ಮನೆಗಳನ್ನು ನಿರ್ಮಿಸಿಲ್ಲ. ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದ್ದ ಮನೆಗಳ ಬಿಲ್ ಗಳನ್ನು ಕೂಡ ನೀಡಿಲ್ಲ. ಯಾವುದೇ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹೊಸ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಎಕ್ಸ್ ಪರ್ಟ್ ಗಳಾಗಿದ್ದಾರೆ. ಬಿಜೆಪಿಯ ದೆಹಲಿ ನಾಯಕರಿಂದ ಹಿಡಿದು ಗ್ರಾಪಂ ಸದಸ್ಯರ ವರೆಗೆ ಎಲ್ಲರೂ ಸುಳ್ಳಿನ ಸರದಾರರೇ ಆಗಿದ್ದಾರೆ. ಚುನಾವಣೆಯಲ್ಲಿ ಗಿಮಿಕ್ ನಡೆಸಲು ಬಿಜೆಪಿಯ ಗ್ರಾಪಂ ಸದಸ್ಯರು ಈಗ ಬಂದು ನಿಮಗೆ ಮನೆ ನಿರ್ಮಿಸಿಕೊಡುತ್ತೇವೆ. ನಿಮ್ಮ ದಾಖಲಾತಿಗಳನ್ನು ಕೊಡಿ ಎಂದು ಜನರನ್ನು ಕೇಳುತ್ತಿದ್ದಾರೆ. ಅವರ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರು, ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಮೇಶಕುಮಾರ ಸೇರಿ ಅನೇಕ ನಾಯಕರು ಹಾಜರಿದ್ದರು. ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.//////

📱 Read Top News, Belgaum News Updates, Belagavi News in Kannada, Latest News on News Belgaum