Belagavi News In Kannada | News Belgaum

ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಹಾನಗಲ್, ಸಿಂಧಗಿ ಉಪಚುನಾವಣೆಗೆ ನಾಳೆ ಮತದಾನ

🌐 Belgaum News :

ಬೆಂಗಳೂರು : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಘಟಾನುಘಟಿ ನಾಯಕರ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ.

ಈ ಎರಡೂ ಕ್ಷೇತ್ರಗಳಲ್ಲಿ ನಾಳೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯಲ್ಲೂ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

ಸಿಂಧಗಿಯಲ್ಲಿ ಮತದಾನಕ್ಕೆ ಸಂಬಂಸಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾನ ಕಾರ್ಯಕ್ಕೆ 1,308 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 2,34,584 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಹಾನಗಲ್ ಕ್ಷೇತ್ರ ವ್ಯಾಪ್ತಿಯಲ್ಲಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

1,155 ಸಿಬ್ಬಂದಿಯನ್ನು ನಿಯೋಜಿಸಿ ತರಬೇತಿ ನೀಡಲಾಗಿದೆ. ಒಂದು ಅಂಗವಿಕಲ ಸ್ನೇಹಿ ಮತಗಟ್ಟೆ ಹಾಗೂ ಎರಡು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 2,04,481 ಮತದಾರರಿದ್ದಾರೆ. 121 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ಸಿಂಧಗಿಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ರಮೇಶ್ ಭೂಸನೂರ, ಕಾಂಗ್ರೆಸ್‍ನಿಂದ ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ, ಜೆಡಿಎಸ್‍ನಿಂದ ಅಂಗಡಿ ನಾಜಿಯಾ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 06 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹಾನಗಲ್‍ನಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಬಿಜೆಪಿಯಿಂದ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್‍ನಿಂದ ಮಾನೆ ಶ್ರೀನಿವಾಸ, ಜೆಡಿಎಸ್‍ನಿಂದ ನಿಯಾಜ್ ಶೇಖ್ ಸೇರಿದಂತೆ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum