Belagavi News In Kannada | News Belgaum

ನಿತ್ಯವೂ ಕನ್ನಡಾಂಬೆಯ ಸೇವೆ ಮಾಡಿ: ಶಶಿಧರ

🌐 Belgaum News :

ಚಿಕ್ಕೋಡಿ : ಕೃಷಿ ಹಾಗೂ ತಾಂತ್ರಿಕತೆಯಲ್ಲಿ ಮುನ್ನೆಡೆ ಸಾಧಿಸಿದ ರಾಜ್ಯ ನಮ್ಮದಾಗಿದೆ. ವೈಮಾನಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಸ್ಟೀಲ್ ಮುಂಚೂಣಿಯ ನಾಡು ನಮ್ಮದಾಗಿರುವುದು ಹೆಮ್ಮೆಯ ವಿಷಯ ಎಂದು ಪ್ರಭಾರಿ  ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.

ಇಲ್ಲಿನ ತಾಲೂಕಾ  ಕ್ರೀಡಾಂಗಣದಲ್ಲಿ ಸೋಮವಾರ ತಾಲೂಕಾ ಆಡಳಿತ  ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಾವೆಲ್ಲರೂ ನಿತ್ಯವೂ ಕನ್ನಡಾಂಬೆಯ ಸೇವೆ ಮಾಡುವುದರ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ,ಬೆಳೆಸೋಣ ಹಾಗೂ ಈ  ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅಥಣಿಯ ಬಿ.ಎಲ್. ಪಾಟೀಲ ಅವರ ಸೇವೆಯನ್ನು ನಾವೆಲ್ಲಾ ಸ್ಮರಿಸೋಣ ಎಂದರು.
ಕನ್ನಡ ನಾಡು ಸ್ವಾತಂತ್ರ್ಯ ನಂತರ ತನ್ನದೇ ಆದ ಕೊಡುಗೆಯಿಂದ ಭಾರತ ಮಾತೆಯ ಹೆಮ್ಮೆಯ ನಾಡಾಗಿದೆ. ಆರ್ಥಿಕತೆಯಲ್ಲಿ ಸಾಕಷ್ಟು ಪ್ರಗತಿ ಹೊಂದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ನಮ್ಮ ನಾಡು ನೈಸರ್ಗಿಕ ಸಂಪದ್ಬರಿತವಾದ ನಾಡಾಗಿದ್ದು,  ಗಡಿಯಂಚಿನ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನ ವ್ಯಾಪ್ತಿಯಲ್ಲಿ ವೇದಗಂಗೆ,ದೂಧಗಂಗೆ ಹಾಗೂ  ಕೃಷ್ಣೆ ತುಂಬಿಹರಿಯುತ್ತಿವೆ. ಕೃಷ್ಣಾ ನದಿಯ ಪ್ರವಾಹ ಮತ್ತು ಅತೀ ವೃಷ್ಟಿಯಿಂದ ಪ್ರಕೃತಿ ಮಾತೆ ನಮ್ಮ ಮೇಲೆ ಮುನಿಸಿಕೊಂಡು ಅಪಾರ ಆಸ್ತಿ-ಪಾಸ್ತಿ, ಜೀವಹಾನಿ ಸಂಭವಿಸಿ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ.

ಇಂತಹ ಸಂಕಷ್ಟದ ಕಾಲದಲ್ಲಿ ನಾಗರಿಕರು ತಾವು ಸಹಾಯ ಹಸ್ತ ನೀಡಿ ಈ ಅವಕೃಪೆಯಿಂದ ಜನರನ್ನು ರಕ್ಷಿಸಿದ್ದೀರಿ. ಸಂಕಷ್ಟಕ್ಕೀಡಾದ ಜನರ ಕಣ್ಣೀರು ಒರೆಸಲು ಜನಪ್ರತಿನಿಧಿಗಳು ಸಹಕರಿಸಿದ್ದಕ್ಕೆ ಸರ್ಕಾರ ಋಣಿಯಾಗಿದೆ ಎಂದರು.  ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ತಹಶೀಲ್ದಾರ ಎನ್.ಬಿ.ಗೆಜ್ಜಿ, ಡಿವೈಎಸ್‍ಪಿ ಮನೋಜ ಪಾಟೀಲ, ತಾಲೂಕಾ ವೈಧ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ಪುರಸಭೆ ಮುಖ್ಯಾಧಿಕಾರಿ ಡಾ.ಸುಂದರ ರೋಗಿ, ನರೇಂದ್ರ ನೇರ್ಲಿಕರ,ನಾಗೇಶ ಮಾಳಿ ಸಂಜಯ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಎಸ್.ಬಿ.ಸೊಲ್ಲಾಪೂರೆ ನಿರೂಪಿಸಿದರು. ಪ್ರಭಾರಿ ಡಿಡಿಪಿಐ ಅನೀಲಕುಮಾರ  ಗಂಗಾಧರ ವಂದಿಸಿದರು.//////

📱 Read Top News, Belgaum News Updates, Belagavi News in Kannada, Latest News on News Belgaum