Belagavi News In Kannada | News Belgaum

ಹಾನಗಲ್: ಶ್ರೀನಿವಾಸ್ ಮಾನೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

🌐 Belgaum News :

ಹಾನಗಲ್: ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವಿನ ಕೇಕೇ ಹಾಕಿದ್ದಾರೆ.

ಶ್ರೀನಿವಾಸ್ ಮಾನೆ ಅವರ ಗೆಲುವಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕರಿಂದ ಹಿಡಿದು ಎಲ್ಲ ಕಾರ್ಯಕರ್ತರು ಕೂಡ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ್ದಾರೆ. ಮಾನೆಯವರ ಗೆಲುವಿನಲ್ಲಿ ಎಲ್ಲರ ಕೊಡುಗೆಯೂ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಕೂಡ ಮಾನೆ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬಿಜೆಪಿಯ ಕೋಟೆ ಛಿದ್ರ:

ಹಾನಗಲ್ ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಜಿಲ್ಲೆ ಹಾಗೂ ಹಿಂದಿನ ಶಾಸಕರಾದ ದಿ.ಸಿ.ಎಂ. ಉದಾಸಿಯವರ ಕ್ಷೇತ್ರವಾಗಿದ್ದರಿಂದ ಇಲ್ಲಿ ಗೆಲ್ಲಲ್ಲೇಬೇಕೆಂದು ಬಿಜೆಪಿ ಪಣ ತೊಟ್ಟಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಇಡೀ ಸರ್ಕಾರವೇ ಹಾನಗಲ್ ನಲ್ಲಿ ಬೀಡು ಬಿಟ್ಟಿತ್ತು. ಮತದಾರರನ್ನು ಸೆಳೆಯಲು ಎಲ್ಲ ರೀತಿಯ ಮಾರ್ಗಗಳನ್ನು ಅನುಸರಿಸಿದರು. ಆದರೆ, ಬಿಜೆಪಿಯ ಲೆಕ್ಕಾಚಾರವನ್ನು ಕಾಂಗ್ರೆಸ್ ತಲೆಕೆಳಗಾಗಿಸಿತು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿ ಕಾಂಗ್ರೆಸ್ ನ ಎಲ್ಲ ಘಟಾನುಘಟಿ ನಾಯಕರು ಕಾರ್ಯಕರ್ತರೊಡನೆ ಸೇರಿ ಹೆಣೆದ ರಣತಂತ್ರಕ್ಕೆ ಬಿಜೆಪಿ ಇಲ್ಲಿ ಮಕಾಡೆ ಮಲಗಿದೆ.

ಹಳ್ಳಿಹಳ್ಳಿಗೂ ಭೇಟಿ ನೀಡಿ ಮತ ಸೆಳೆದ ಸತೀಶ:

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಸಮಾವೇಶ, ರ್ಯಾಲಿಗಳಲ್ಲಿ ಮಾತ್ರ ತೊಡಗಿಸಿಕೊಂಡರು. ಆದರೆ, ಪಕ್ಷವನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಮತಕ್ಷೇತ್ರದ ಹಳ್ಳಿಹಳ್ಳಿಗೂ ಭೇಟಿ ನೀಡಿದರು. ಚಿಕ್ಕ ಸಮುದಾಯಗಳಿರುವ ಕಾಲೊನಿಗಳಿಗೂ ತೆರಳಿ ಮತದಾರರನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ಯಶಸ್ವಿಯಾದರು.

ಅಕ್ಟೋಬರ್ 14 ರಂದು ಶಿಗ್ಗಾವಿ ತಾಲೂಕಿನ ಕಲಕಟ್ಟಿ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸತೀಶ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದರು. ಬೊಮ್ಮನಹಳ್ಳಿ, ಅಕ್ಕಿಆಲೂರು ಸೇರಿದಂತೆ ಎಲ್ಲ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಳ್ಳಿಹಳ್ಳಿಗೂ ಭೇಟಿ ನೀಡಿ ಅವರು ಪ್ರಚಾರ ನಡೆಸಿದ್ದರು.

ಸತೀಶ ಪ್ರಚಾರ ತಂತ್ರಕ್ಕೆ ಕಂಗಾಲಾದ ಬಿಜೆಪಿ:

ಸತೀಶ ಜಾರಕಿಹೊಳಿಯವರು ಹಳ್ಳಿಗಳಿಗೆ ಭೇಟಿ ನೀಡಿ, ಎಲ್ಲ ಸಮುದಾಯಗಳ ಜನರನ್ನು ಕಾಂಗ್ರೆಸ್ ನತ್ತ ಸೆಳೆಯುತ್ತಿರುವುದು ಹಾಗೂ ಅವರ ಪ್ರಚಾರ ತಂತ್ರಕ್ಕೆ ಬಿಜೆಪಿಯವರು ಕಂಗಾಲಾಗಿದ್ದರು. ಮತದಾರರನ್ನು ತಮ್ಮ ತ್ತ ಸೆಳೆಯಲು ಬಿಜೆಪಿಯವರು ಸತೀಶ ಅವರು ಭೇಟಿ ನೀಡಿದ್ದ ಗ್ರಾಮಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಿದ್ದರು.

ಸತೀಶ ಅವರು ಭೇಟಿ ನೀಡಿದ ಮರುದಿನವೇ (ಅಕ್ಟೋಬರ್ 15ಕ್ಕೆ) ಶಿಗ್ಗಾವಿ ತಾಲೂಕಿನ ಕಲಕಟ್ಟಿ ಗ್ರಾಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಯವರು ತೆರಳಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಅಲ್ಲಿಂದ ಪ್ರಚಾರ ಆರಂಭಿಸಿದ್ದರು.

ಸರ್ಕಾರಗಳ ವಿರುದ್ಧ ವಾಗ್ದಾಳಿ:

ಸತೀಶ ಜಾರಕಿಹೊಳಿಯವರು ಪ್ರಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಕೇಂದ್ರದ ಜನವಿರೋಧಿ ನೀತಿ, ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಪಲ್ಯವನ್ನು ವಿವರಿಸಿದ್ದರು. ಶ್ರೀನಿವಾಸ್ ಮಾನೆ ಅವರಿಗೆ ಯಾಕೆ ಜನರು ಮತ ನೀಡಬೇಕು ಎಂಬುದನ್ನು ಕೂಡ ಸತೀಶ ಅವರು ತಮ್ಮ ಪ್ರಚಾರದಲ್ಲಿ ಹೇಳುತ್ತಿದ್ದರು. ಇವೆಲ್ಲವೂ ಕೂಡ ಮಾನೆ ಅವರಿಗೆ ಹೆಚ್ಚಿನ ಮತಗಳನ್ನು ತಂದು ಕೊಡುವಲ್ಲಿ ನೆರವಾಗಿವೆ.//////

📱 Read Top News, Belgaum News Updates, Belagavi News in Kannada, Latest News on News Belgaum