Belagavi News In Kannada | News Belgaum

ಗ್ರಾಮೀಣ ಸೊಗಡಿನ ದೇಶಿಯ ಕ್ರೀಡೆಗಳನ್ನು ಉಳಿಸಬೇಕಿದೆ : ರಮೇಶ ಕತ್ತಿ

🌐 Belgaum News :

ಹುಕ್ಕೇರಿ : ಪಾಶ್ಚಾತ್ಯ ಹಾವಳಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಸೊಗಡಿನ ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಬೆಳವಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯನ್ ಹಾಗೂ ಬೆಳವಿ ಹೆಮ್ಮೆಯ ಪುತ್ರರ ಸಂಯುಕ್ತಾಶ್ರಯದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಮಹಿಳಾ ಮತ್ತು ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಪ್ರದೇಶದಂತೆ ಗ್ರಾಮೀಣ ಭಾಗದಲ್ಲೂ ಯುವ ಜನಾಂಗ ಪಾಶ್ಚಾತ್ಯ ಹಾವಳಿಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ಕ್ರೀಡೆಗಳು ಮರೆಮಾಚುತ್ತಿವೆ. ಇಂಥ ಸಂಧಿಗ್ಧ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು. ಜತೆಗೆ ದೇಶಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.

ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ದೈಹಿಕ ದಂಡನೆಯಂತ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆ ಅಗತ್ಯ. ಸದೃಢ ಆರೋಗ್ಯಕ್ಕೆ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜವಾಗಿದ್ದು ಇವೆರೆಡನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಬೇಕು. ಈಗಾಗಲೇ ಪ್ರೊ ಕಬಡ್ಡಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದ್ದು ಬರುವ ಓಲಂಪಿಕ್‍ನಲ್ಲಿ ಕಬಡ್ಡಿ ಆಟವೂ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕøತ ಸಿಪಿಐ ಹನಮಂತ ಭಜಂತ್ರಿ, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಎಸ್.ಆರ್.ಕರ್ಕಿನಾಯಿಕ, ಏಷಿಯನ್ ಜುಡೋ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ವಿಜೇತೆ ಕುತುಜಾ ಮುಲ್ತಾನಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಜಯಶ್ರೀ ಸತ್ಯಾಯಗೋಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಮಗದುಮ್ಮ, ತಹಸೀಲದಾರ ಡಾ.ಡಿ.ಎಚ್.ಹೂಗಾರ, ತಾಪಂ ಇಒ ಉಮೇಶ ಸಿದ್ನಾಳ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯೆಪ್ಪಾ ನಾಯಿಕ, ರಾಜ್ಯಪಾಲರ ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಕಾಂತ ಭಜಂತ್ರಿ, ಮುಖಂಡರಾದ ರಮೇಶ ಕುಲಕರ್ಣಿ, ಬಾಳಾಸಾಹೇಬ ನಾಯಿಕ, ಉದಯಕುಮಾರ ದೇಸಾಯಿ, ಸಂತೋಷ ಕರ್ಕಿನಾಯಿಕ, ಪುಂಡಲೀಕ ಪಾಟೀಲ, ಸತೀಶ ನಾಯಿಕ, ಭರತೇಶ ನಾಯಿಕ, ಮಹಾಂತೇಶ ಬಾದವಾನಮಠ, ಪತ್ರಕರ್ತರಾದ ಮಹಾದೇವ ನಾಯಿಕ, ವಿಶ್ವನಾಥ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಪಂ ಸದಸ್ಯ ಎಸ್.ಬಿ.ನಾಯಿಕ ಸ್ವಾಗತಿಸಿದರು. ಸಿಪಿಐ ಎಚ್.ಕೆ. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಿ.ಬಿ.ಅಂಗಡಿ ನಿರೂಪಿಸಿದರು. ಸುರೇಶ ಖಡಕಭಾವಿ ವಂದಿಸಿದರು.

ನಿರ್ಣಾಯಕರಾಗಿ ಎಂ.ಕೆ.ಶಿರಗುಪ್ಪಿ, ಪಿ.ಎನ್.ಅಲಗೂರ, ಎಸ್.ಕೆ.ಕುರಬೇಟ, ಸಮ್ನೇಶ ಶಿವನ್ನಗೋಳ, ವೈ.ಕೆ.ಹಂಡ್ಯಾಗೋಳ, ಬಿರೇಶ ಕಾಂಬಳೆ ಕರ್ತವ್ಯ ನಿರ್ವಹಿಸಿದರು. ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಮಹಾರಾಷ್ಟ್ರದ ಸಾಂಗ್ಲಿ, ಪುಣೆ ವಿವಿಧ ಕಡೆಗಳಿಂದ ಸುಮಾರು 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು./////

📱 Read Top News, Belgaum News Updates, Belagavi News in Kannada, Latest News on News Belgaum