Belagavi News In Kannada | News Belgaum

ಮೇಲ್ಮನೆ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ ಸತೀಶ ಜಾರಕಿಹೊಳಿಯವರ ಕೈಯಲ್ಲಿ

🌐 Belgaum News :

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್ ಗಾಗಿ ಆಕಾಂಕ್ಷಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿಯೂ ಕೂಡ ಮೇಲ್ಮನೆ ಚುನಾವಣೆಗಾಗಿ ಅಭ್ಯರ್ಥಿಗಳ ದೊಡ್ಡ ದಂಡೇ ರೆಡಿಯಾಗಿದೆ. ಟಿಕೆಟ್ ಗಾಗಿ ವಿವಿಧ ರೀತಿಯಲ್ಲಿ ಆಕಾಂಕ್ಷಿಗಳು ಕಸರತ್ತು ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಕೈಯಲ್ಲಿದೆ. ಸತೀಶ ಅವರು ಯಾರ ಮೇಲೆ ಕೃಪಾಕಟಾಕ್ಷ ತೋರುತ್ತಾರೋ ಅವರಿಗೆ ಟಿಕೆಟ್ ಒಲಿಯುವ ಸಾಧ್ಯತೆ ಅಧಿಕವಾಗಿದೆ.

ಆಕಾಂಕ್ಷಿಗಳು ಯಾರ್ಯಾರು?

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ, ಮಾಜಿ ಶಾಸಕರಾದ ವೀರಕುಮಾರ್ ಪಾಟೀಲ್, ಶಹಜಹಾನ್ ಡೊಂಗರಗಾಂವ್, ಡಾ.ಎನ್.ಎ. ಮಗದುಮ್ಮ, ಸುನೀಲ್ ಹನುಮಣ್ಣವರ್, ಕಿರಣ್ ಸಾಧುನವರ್, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಸೇರಿ ಒಟ್ಟು 8 ಜನರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಇವರಲ್ಲಿ ಪ್ರಕಾಶ ಹುಕ್ಕೇರಿ ಅವರು 6 ಬಾರಿ ಶಾಸಕ ಹಾಗೂ ಒಂದು ಬಾರಿ ಸಂಸದರಾಗಿದ್ದಾರೆ. ಹಿಂದಿನ ಬಾರಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪರಾಜಿತರಾಗಿರುವ ಅವರು ಮೇಲ್ಮನೆ  ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ.

ಹಿರಿಯ ನಾಯಕ ವೀರಕುಮಾರ್ ಪಾಟೀಲ್ ಅವರು ಮೂರು ಬಾರಿ ಎಂಎಲ್ ಸಿ ಹಾಗೂ ಎರಡು ಬಾರಿ ಶಾಸಕರಾಗಿದ್ದಾರೆ. ಸಚಿವರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ, ಇವರು ಕೂಡ ಟಿಕೆಟ್ ಪಡೆಯುವ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಟಿಕೆಟ್ ಗಾಗಿ ಸತೀಶ ಜಾರಕಿಹೊಳಿವರ ಬೆನ್ನು ಬಿದ್ದ ಆಕಾಂಕ್ಷಿಗಳು:

ಡಾ.ಎನ್.ಎ. ಮಗದುಮ್ಮ, ಸುನಿಲ್ ಹನುಮಣ್ಣವರ್, ಚನ್ನರಾಜ್ ಹಟ್ಟಿಹೊಳಿ, ವಿನಯ ನಾವಲಗಟ್ಟಿ ಅವರು ಮೊದಲ ಬಾರಿಗೆ ಎಂಎಲ್ ಸಿ ಚುನಾವಣೆಗೆ ಸ್ಪರ್ಧಿಸಲು ಕಾಯುತ್ತಿದ್ದಾರೆ.

ವಿವೇಕರಾವ್ ಪಾಟೀಲ ಅವರು ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಈ ಬಾರಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಪಡೆಯುವುದಕ್ಕಾಗಿ ಓಡಾಡುತ್ತಿದ್ದಾರೆ.

ಇವರಲ್ಲಿ ಬಹುತೇಕ ನಾಯಕರು ಟಿಕೆಟ್ ಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿವರ ಬೆನ್ನು ಬಿದ್ದಿದ್ದಾರೆ. ವಿವೇಕರಾವ್ ಪಾಟೀಲ ಸೇರಿ ಕೆಲ ಮುಖಂಡರು ಈಗಾಗಲೇ ಸತೀಶ ಅವರನ್ನು ಭೇಟಿ ಮಾಡಿ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ಮೇಲ್ಮನೆ ಚುನಾವಣೆಗೆ ಟಿಕೆಟ್ ಆಯ್ಕೆಯಲ್ಲಿ ಸತೀಶ ಜಾರಕಿಹೊಳಿವರ ಕೈ ಮೇಲಾಗಲಿದೆ.

ಎರಡೂ ಸ್ಥಾನಗಳಿಗೆ ಸ್ಪರ್ಧಿಸಲು ಚಿಂತನೆ:

ಜಿಲ್ಲೆಯಲ್ಲಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ನಾಯಕರು ಮೊದಲು ತೀರ್ಮಾನಿಸಿದ್ದರು. ಆದರೆ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು, ಜಿಲ್ಲೆಯಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಎರಡು ಕ್ಷೇತ್ರಗಳನ್ನು ನಾವೇ ಗೆಲ್ಲಬೇಕು ಎಂಬ ಉದ್ದೇಶದಿಂದ ಎರಡೂ ಕ್ಷೇತ್ರಗಳಿಗೂ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಚಿಂತನೆ ನಡೆಸಿದೆ.

ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿರುವುದು ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ಭೇಟಿಯ ಸಂದರ್ಭದಲ್ಲಿ ಮೇಲ್ಮನೆ ಚುನಾವಣೆಯ ಟಿಕೆಟ್ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಿದ್ದು, ಡಿಸೆಂಬರ್ 10ಕ್ಕೆ ಮತದಾನ ನಡೆಯಲಿದೆ. 14ಕ್ಕೆ ಫಲಿತಾಂಶ ಹೊರಬೀಳಲಿದೆ./////

📱 Read Top News, Belgaum News Updates, Belagavi News in Kannada, Latest News on News Belgaum