Belagavi News In Kannada | News Belgaum

ಬೆಳಗಾವಿ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡ ತಾಪಂ.ಅಧಿಕಾರಿ

🌐 Belgaum News :

ಬೆಳಗಾವಿ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಸದಾನಂದ ಅಮರಾಪುರ ಕೈಗೊಂಡಿದ್ದ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸೈಕಲ್ ಯಾತ್ರೆ ಬುಧವಾರ ಕರ್ನಾಟಕಕ್ಕೆ ತಲುಪಿದ್ದು, ನಿಪ್ಪಾಣಿ ತಾಲೂಕು ಪ್ರವೇಶಿಸಿದ ಸದಾನಂದ ಅಮರಾಪುರ ಅವರನ್ನು ನಿಪ್ಪಾಣಿ ತಾಪಂ.ಅಧಿಕಾರಿಗಳು ಮಾರ್ಲಾಪಣೆ ಮಾಡಿ ಸ್ವಾಗತಿಸಿದರು.

ಹಾವೇರಿ ಜಿಲ್ಲೆಯ ಸವಣೂರು  ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾಉ) ಸದಾನಂದ ಅಮರಾಪುರ ಅವರು ಸೈಕಲ್ ಯಾತ್ರೆ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಗೆ ತೆರಳುತ್ತಿದ್ದಾರೆ. ಬುಧವಾರ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪ್ರವೇಶ ಮಾಡಿದ್ದಾರೆ.

ಸದಾನಂದ ಅಮರಾಪುರ ಅವರು ಅ.23 ರಂದು ಕಾಶ್ಮೀರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದರು. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಆರಂಭವಾದ ಸೈಕಲ್ ಯಾತ್ರೆಯೂ ಪಂಜಾಬ್, ಹರಿಯಾಣ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕದವರೆಗೆ ನಡೆದಿದೆ. ಈಗಾಗಲೇ ಕರ್ನಾಟಕ ಪ್ರವೇಶ ಮಾಡಿರುವ ಸದಾನಂದ ಅಮರಾಪುರ ಅವರು ಸೈಕಲ್ ಮೂಲಕವೇ ತಮಿಳುನಾಡಿನ ಕನ್ಯಾಕುಮಾರಿಗೆ ತೆರಳಲಿದ್ದಾರೆ.

19 ದಿನದಲ್ಲಿ ಕರ್ನಾಟಕಕ್ಕೆ: ಅ.23 ರಂದು ಕಾಶ್ಮೀರದಲ್ಲಿ ಆರಂಭವಾದ ಸೈಕಲ್ ಯಾತ್ರೆಯೂ ನ.10 ರಂದು ಕರ್ನಾಟಕ ಪ್ರವೇಶ ಮಾಡಿದ್ದು, ಕೇವಲ 19 ದಿನಗಳಲ್ಲಿ ಏಳು ರಾಜ್ಯಗಳಲ್ಲಿ ಸಂಚರಿಸಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮಹತ್ವ ಸಾರಿದ್ದಾರೆ. ಜತೆಗೆ ಯಾತ್ರೆಯ ಮೂಲಕ ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

4 ಸಾವಿರ ಕಿ.ಮೀ. ಸೈಕಲ್ ಯಾತ್ರೆ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೈಗೊಂಡಿರುವ ಸೈಕಲ್ ಯಾತ್ರೆಯೂ 4 ಸಾವಿರ ಕಿ.ಮೀ.ವರೆಗೆ ಸಂಚರಿಸಲಿದೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಕಿ.ಮೀ. ಯಾತ್ರೆಯೂ ಪೂರ್ಣಗೊಂಡಿದೆ. ಪ್ರತಿದಿನ 200 ಕಿ.ಮೀ. ಸಂಚರಿಸುತ್ತಿದ್ದಾರೆ. ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಪೂರ್ಣಗೊಳ್ಳಲಿದೆ.

ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸೈಕಲ್ ಯಾತ್ರೆ ನಡೆಸುತ್ತಿರುವ ಸದಾನಂದ ಅಮರಾಪುರ ಅವರು ಐರನ್ ಮ್ಯಾನ್ ಖ್ಯಾತಿಗೆ ಪಾತ್ರರಾಗಿದ್ದರು. ಈ ಹಿಂದೆ 3.8 ಕಿ.ಮೀ. ಈಜು, 180 ಕಿ.ಮೀ. ಸೈಕ್ಲಿಂಗ್ ಮತ್ತು 42 ಕಿ.ಮೀ. ರನ್ನಿಂಗ್ ಸ್ಪರ್ಧೆಯನ್ನು ಕೇವಲ 15.45 ಗಂಟೆಗಳಲ್ಲಿ ಪೂರ್ಣಗೊಳ್ಳಿಸುವ ಮೂಲಕ ಐರನ್ ಮ್ಯಾನ್ ಕೀರ್ತಿಗೆ ಭಾಜರಾಗಿದ್ದರು. ಈಗ ಸೈಕಲ್ ಯಾತ್ರೆಯ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧಿಕಾರಿ ದಾಖಲೆ ಬರೆಯುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum