Belagavi News In Kannada | News Belgaum

ಕಟ್ಟಡ ಹಾಗೂ ಕಾರ್ಮಿಕ ಕಲ್ಯಾಣ ಸುಂಕ ಸಂಗ್ರಹಕ್ಕೆ “ಸುಂಕ ಅಭಿಯಾನ” ಕಟ್ಟಡ ನಿರ್ಮಾಣ ಸಂಸ್ಥೆಗಳು ನಿಗದಿತ ಅವಧಿಯಲ್ಲಿ ಸುಂಕ ಪಾವತಿಸಲು ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಸೂಚನೆ

🌐 Belgaum News :

ಬೆಳಗಾವಿ, ನ.10 : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ನಿಯಮಗಳು 1998 ರಡಿ ಎಲ್ಲಾ ನಿರ್ಮಾಣ ಸಂಸ್ಥೆಗಳಿಂದ ನಿರ್ಮಾಣ ವೆಚ್ಚಕ್ಕೆ ತಗಲುವ ಮೊತ್ತದಲ್ಲಿ ಶೇ 1 ರಷ್ಟು ಸುಂಕವನ್ನು ಸಂಗ್ರಹಿಸಲು ಆದೇಶ ಹೊರಡಿಸಲಾಗಿದ್ದು, ಸುಂಕ ಸಂಗ್ರಹಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಆಯುಕ್ತರಾದ ವೆಂಕಟೇಶ ಶಿಂಧಿಹಟ್ಟಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ನ.10) ನಡೆದ ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆಯಡಿ ಸುಂಕವನ್ನು ಸಂಗ್ರಹಿಸುವ ಕುರಿತು ಅವರು ಮಾತನಾಡಿದರು.

ಸುಂಕ ಸಂಗ್ರಹಣೆಯ ಜವಬ್ದಾರಿಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಾಯ್ದೆ ಮತ್ತು ನಿಯಮಗಳನ್ವಯ ಅಧಿಸೂಚನೆಯ ಮೂಲಕ ವಹಿಸಲಾಗಿದ್ದು, ಕಾರ್ಮಿಕ ಅಧಿಕಾರಿಗಳನ್ನು ಸುಂಕ ನಿರ್ಧರಣಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಹಾಗೂ ಮಂಡಳಿಯ ವ್ಯಾಪ್ತಿಯನ್ನು ವಿಸ್ತರಿಸಿ ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸಲು ಮಂಡಳಿಯ ಸುಂಕ ನಿಧಿಯಲ್ಲಿ ಸಾಕಷ್ಟು ಅನುದಾನದ ಅವಶ್ಯಕತೆ ಇದ್ದು, ಈ ಕಾಯ್ದೆ ಜಾರಿಗೆ ತರಲಾಗಿದೆ ಮಾಹಿತಿ ನೀಡಿದರು.

ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ನಿರ್ಮಾಣ ಹಂತದಲ್ಲಿರುವ ಸಂಸ್ಥೆಗಳಿಗೆ ಭೇಟಿ ನೀಡುವುದು ಹಾಗೂ ಸಂಸ್ಥೆಯು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996 ರ ಕಲಂ 7 ಹಾಗೂ ಕರ್ನಾಟಕ ನಿಯಮಗಳು 2006 ರ ನಿಯಮ 15 ಮತ್ತು 16 ರ ಅನ್ವಯ ನೋಂದಣಿ ಆಗಿರುವ ಕುರಿತು ಖಾತರಿಪಡಿಸಿಕೊಳ್ಳುವುದು ಎಂದು ತಿಳಿಸಿದರು.

ಕಾಯ್ದೆಯ ಕಲಂ 46 ರನ್ವಯ ನಿಯೋಜಕರು/ ಮಾಲೀಕರು ನಿರ್ಮಾಣ ಕಾಮಗಾರಿಯ ಪ್ರಾರಂಭದ ಕುರಿತು ಸೂಚನಾ ಪತ್ರವನ್ನು ನೀಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
ಡ್ರೈನೇಜ್, ಒಳಾಂಗಣ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ ನಿರ್ಮಾಣ, ಕ್ಲಬ್ ಹೌಸ್, ಗೆಸ್ಟ್ ಹೌಸ್, ಈಜುಕೊಳ ಹಾಗೂ ಮಕ್ಕಳ ಆಟದ ಮೈದಾನದ ನಿರ್ಮಾಣ ವೆಚ್ಚವನ್ನು ಕೂಡ ಪರಿಗಣಿಸಲಾಗುವುದು ಎಂದು ಹೇಳಿದರು.

ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹಾಗೂ ನಿರ್ಮಾಣ ಪೂರ್ಣಗೊಂಡ ಎಲ್ಲಾ ಖಾಸಗಿ-ಸರ್ಕಾರಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, 10 ಲಕ್ಷವನ್ನು ಮೀರಿದ ವೈಯಕ್ತಿಕ ಮನೆಗಳನ್ನು ಕೂಡ ಸುಂಕ ಪಾವತಿಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ನಮೂನೆಗಳ ಮೂಲಕ ಅರ್ಜಿ ನೀಡುವ ಕುರಿತು ಅರಿವು ಮೂಡಿಸಲಾಗುವುದು ಹಾಗೂ ಚೆಕ್ ಅಥವಾ ಡಿಡಿ ಮೂಲಕ ಸುಂಕವನ್ನು ಸಂದಾಯ ಮಾಡುವ ವಿಧಾನ ಹಾಗೂ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.

ಕಟ್ಟಡ ನಿರ್ಮಾಣ ಸಂಸ್ಥೆಗಳು ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ನಿಯಮಾನುಸಾರ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ತಿಳಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳಾದ ತರನ್ನುಂ ಬೆಂಗಾಲಿ , ಸಹಾಯಕ ಕಾರ್ಮಿಕ ಆಯುಕ್ತರಾದ ಅನ್ಸಾರಿ ಸೇರಿದಂತೆ ಜಿಲ್ಲಾ ಮಟ್ಟದ ಕಾರ್ಮಿಕ ಅಧಿಕಾರಿಗಳು, ವಿವಿಧ ಕಟ್ಟಡ ನಿರ್ಮಾಣ ಸಂಸ್ಥೆಗಳ ಮಾಲಿಕರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum