Belagavi News In Kannada | News Belgaum

ಮನೆಗಳ ಸರ್ವೇಯಲ್ಲಿ ಅಧಿಕಾರಿಗಳು ರಾಜಕಾರಣ: ನ್ಯಾಯಕ್ಕಾಗಿ ಧರಣಿ ಕುಳಿತ ಗ್ರಾಮಸ್ಥರು

🌐 Belgaum News :

ಚಿಕ್ಕೋಡಿ :  ಪ್ರವಾಹದಲ್ಲಿ ಮುಳುಗಡೆಯಾದ ಮನೆಗಳ ಸರ್ವೇ ಮಾಡುವಲ್ಲಿ ಅಧಿಕಾರಿಗಳು ರಾಜಕಾರಣ ಮಾಡಿದ್ದು, ಇದರಿಂದ ಮನೆ ಬಿದ್ದಿರುವ ಬಡ ಜನರಿಗೆ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಗುರುವಾರ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮಸ್ಥರು ಚಿಕ್ಕೋಡಿ ಉಪವಿಭಾಗ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಗ್ರಾಮ ಪಂಚಾಯತ ಸದಸ್ಯ ಅಜಯ ಸೂರ್ಯವಂಶಿಯವರ ನೇತೃತ್ವದಲ್ಲಿ ನೂರಾರು ಜನ ನೆರೆ ಸಂತ್ರಸ್ತರು ಲೋಕೋಪಯೋಗಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಲಾಯನಗೊಳ್ಳಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಅಧಿಕಾರಿಗಳ ಜೀಪ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಾಕಾರರು ಕಾರ್ ತಡೆದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆಯೇ ಅಧಿಕಾರಿಗಳು ಅಲ್ಲಿಯೇ ಕಚೇರಿ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ನಡೆಯಿತು. ಇದರಿಂದ,  ಮತ್ತಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಎಲ್ಲ ಇಲ್ಲಿಗೆ ಬಂದು ಅನ್ಯಾಯವಾಗಿರುವ ನಮಗೆ ನ್ಯಾಯದೊರಕಿಸಿಕೊಡುವವರೆಗೂ ನಾವು ಇಲ್ಲಿಂದ ಜಾಗಾ ಬಿಟ್ಟು ಕದಲುವುದಿಲ್ಲ. ಯಡೂರ,ಯಡೂರವಾಡಿ ಮುಂತಾದ ಗ್ರಾಮಗಳ ಬಿದ್ದಿರುವ ಮನೆಗಳ ಸರ್ವೇಮಾಡಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕೆ.ಬಿ.ಬಡಿಗೇರ ಮನೆಗಳ ಸರ್ವೇ ಮಾಡುವಲ್ಲಿ ಸಂಪೂರ್ಣ ರಾಜಕಾರಣ ಮಾಡಿದ್ದಾರೆ.

ಅರ್ಹ  ಫಲಾನುಭವಿಗಳ ಮನೆ ಸರ್ವೇ ಮಾಡಿಲ್ಲ. ಬಡ ಜನರಿಗೆ ಅನ್ಯಾಯ ಮಾಡಿದ್ದಾರೆ. ಅವರು ಇಲ್ಲಿಗೆ ಬರುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ. ಅವರನ್ನು ಈಗಲೇ ಕರೆಯಿಸಬೇಕು. ಇಲ್ಲಾ ಅವರು ಇದ್ದಲ್ಲಿಗೆ ನಾವೇ ಹೋಗೋಣ ನಡೆಯಿರಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತೀವೃ ತರಾಟೆಗೆ ತೆಗೆದುಕೊಂಡರು.

ಪ್ರತಿಭಟನಾಕಾರರು ಲೋಕೋಪಯೋಗ ಇಲಾಖೆ ವಾಹನಕ್ಕೆ ಮುತ್ತಿಗೆ ಹಾಕುತ್ತಿದ್ದಂತೆ ಓಡಿ ಹೋಗಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಅಭಿಯಂತರ  ಬಿ.ಬಿ.ಬೇಡಕಿಹಾಳೆಯವರು ತಹಸೀಲ್ದಾರ ದಿಲಾವರ ಜಮಾದಾರ ಮತ್ತು ಸಿ.ಎ.ಪಾಟೀಲ ಅವರೊಂದಿಗೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಆಗಮಿಸಿದ್ದರು. ಅವರನ್ನು ಧರಣಿ ನಿರತ ನೆರೆಸಂತ್ರಸ್ತರು ತೀವೃ ತರಾಟೆಗೆ ತೆಗೆದುಕೊಂಡರು.

ಗ್ರಾ.ಪಂ.ಸದಸ್ಯರಾದ ಅಜಯ ಸೂರ್ಯವಂಶಿ, ಸಂತೋಷ ಶೇಗಣೆ, ಮಂಜುನಾಥ ದೊಡ್ಡಮನಿ, ಬೀಬಾ ಮಚ್ಚೇಂದ್ರ ಕಾಂಬಳೆ, ಬೀಬಾ ಬಸ್ಸಪ್ಪಾ ಕಾಂಬಳೆ, ದೀಪಾಲಿ ಕೋಕಣೆ, ಅರ್ಚನಾ ಮಲ್ಲಪ್ಪ ಅಮ್ಮಣಗಿ. ಅಣ್ಣಪ್ಪಾ ಬೋರಗಾಂವೆ, ಚಂದ್ರಕಾಂತ ಕಮತೆ, ಈರಣ್ಣಾ ಅಮ್ಮಣಗಿ, ರಾಜು ಕೋಳಿ, ಪ್ರಕಾಶ ಕೋಕಣೆ, ಸುರೇಶ ಕೋಕಣೆ ಮುಂತಾದವರು ಧರಣಿ ಸತ್ಯಾಗ್ರಹದಲ್ಲಿ ಪಾಲಗೊಂಡಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum