Belagavi News In Kannada | News Belgaum

ಬಿಟ್ ಕಾಯಿನ್ ಹಗರಣ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಪ್ರಿಯಾಂಕ್ ಖರ್ಗೆ ಆಗ್ರಹ

🌐 Belgaum News :

ಬೆಂಗಳೂರು : ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮೂಲಕ ವಶಪಡಿಸಿಕೊಂಡ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣದ ಕುರಿತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸರ್ಕಾರ ನಡೆಸುವ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಹಗರಣದಲ್ಲಿ ಪೊಲೀಸರು, ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ಸೇರಿದಂತೆ ಹಲವರು ಶಾಮೀಲಾಗಿದ್ದಾರೆ. ಆದ್ದರಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲೇ ತನಿಖೆ ನಡೆಸಬೇಕು’ ಎಂದರು.

ಸತ್ಯಾಂಶ ಹೊರಬಂದ ಬಳಿಕ ಮುಂದಿನ ಕ್ರಮ ಆಗುತ್ತದೆ. ಮೂರನೇ ಮುಖ್ಯಮಂತ್ರಿ ಯಾರಾದರೂ ಆಗಲಿ. ಆ ಬಗ್ಗೆ ತಾವೇನೂ ಹೇಳುವುದಿಲ್ಲ. ಮಾಜಿ ಗೃಹ ಸಚಿವರೂ ಆಗಿರುವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲವೂ ಗೊತ್ತಿದೆ. ಅವರೇ ಜನರ ಎದುರು ಸತ್ಯ ಹೇಳಲಿ ಎಂದು ಒತ್ತಾಯಿಸಿದರು.

ಶ್ರೀಕಿಯನ್ನು ಬಂಧಿಸಿದ ನಂತರ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಹಲವು ಅನುಮಾನಗಳಿವೆ. ₹ 9 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಿಸಿದ್ದರು. ಇನ್‌ಸ್ಪೆಕ್ಟರ್‌ ಶ್ರೀಧರ್‌ ಪೂಜಾರ್‌ ಎಂಬುವವರು ಪಂಚನಾಮೆಗೆ ಸಾಕ್ಷಿಗಳನ್ನಾಗಿ ಬೆಸ್ಕಾಂ ಲೈನ್‌ಮನ್‌ ಮತ್ತು ವಾಣಿಜ್ಯ ತೆರಿಗೆ ಇಲಾಖೆಯವರನ್ನು ಕರೆಸಿದ್ದರು. ಬಿಟ್‌ಕಾಯಿನ್‌ ಬಗ್ಗೆ ಲೈನ್‌ಮನ್‌ಗಳಿಗೆ ಏನು ಗೊತ್ತಿರಲು ಸಾಧ್ಯ ಎಂದು ಪ್ರಶ್ನಿಸಿದರು.

ಬಿಟ್‌ಕಾಯಿನ್‌ ವರ್ಗಾಯಿಸಿಕೊಂಡು ಹವಾಲಾ ಮೂಲಕ ಹಣ ಕೊಡುತ್ತಿದ್ದ ರಾಬಿನ್‌ ಖಂಡೇಲ್‌ವಾಲಾ ಎಂಬಾತ ಮೌರ್ಯ ಹೋಟೆಲ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದ. ಆತನ ಬಗ್ಗೆ ಸರಿಯಾದ ತನಿಖೆಯನ್ನೇ ನಡೆಸಿಲ್ಲ. ಶ್ರೀಕಿ ವಾಲೆಟ್‌ನಲ್ಲಿ 31 ಬಿಟ್‌ಕಾಯಿನ್‌ಗಳು ಇದ್ದವು ಎಂದು ಹೇಳಲಾಗಿತ್ತು. ನಂತರ ವಾಲೆಟ್‌ ತೆರೆದಾಗ ಅಲ್ಲಿ 186 ಬಿಟ್‌ಕಾಯಿನ್‌ಗಳು ಇದ್ದವು. 31 ಬಿಟ್‌ಕಾಯಿನ್‌ಗಳು 186 ಆಗಿದ್ದು ಹೇಗೆ ಎಂದು ಪ್ರಿಯಾಂಕ್‌ ಕೇಳಿದರು./////

📱 Read Top News, Belgaum News Updates, Belagavi News in Kannada, Latest News on News Belgaum