Belagavi News In Kannada | News Belgaum

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಲ್‍ಇ ಸಂಸ್ಥೆಯ 106 ನೇ ಸಂಸ್ಥಾಪನಾ ದಿನಾಚರಣೆ

🌐 Belgaum News :

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಲ್‍ಇ ಸಂಸ್ಥೆಯ 106 ನೇ ಸಂಸ್ಥಾಪನಾ ದಿನಾಚರಣೆ
ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೆಎಲ್‍ಇ ಕೃಷಿ ತರಬೇತಿ ಹಾಗೂ ಸಂಶೋಧನಾ ವಿದ್ಯಾಲಯದ ಸಹಯೋಗದಲ್ಲಿ ಕೆಎಲ್‍ಇ ಸಂಸ್ಥೆಯ 106 ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿ ಅಂಗಡಿ ದೀಪ ಬೆಳಗಿಸುವುದರ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸಪ್ತರ್ಷಿಗಳಿಂದ ಪ್ರಾರಂಭವಾದ ಹೆಮ್ಮೆಯ ಕೆಎಲ್‍ಇ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ಶಿಕ್ಷಣ, ವೈದ್ಯಕೀಯ, ತಾಂತ್ರಿಕ ಹಾಗೂ ಕೃಷಿ ರಂಗಗಳಲ್ಲಿ ಅಪಾರವಾದ ಸಾಧನೆಯನ್ನು ಮಾಡಿದೆ.

ಈ ಮಹತ್ತರ ಸಾಧನೆಯ ಗುರಿ ತಲುಪಲು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಕೊಡುಗೆ ಅಪಾರ ಮತ್ತು ಶ್ಲಾಘನೀಯವಾಗಿದೆ. ಅವರ ಅವಿರತ ಪರಿಶ್ರಮದಿಂದ ಸಂಸ್ಥೆಯು ಇಂದು ವಿವಿಧ ರಂಗಗಳÀಲ್ಲಿ 272 ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ ಎಂದರು. ಅದೇರೀತಿ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರವು ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸೂಕ್ತ ತಂತ್ರಜ್ಞಾನಗಳ ವಿಸ್ತರಣೆಯಲ್ಲಿ ತೊಡಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾವಯವ ಹಾಗೂ ಪ್ರಗತಿಪರ ರೈತರಾದ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಶ್ರೀ ಈರಣಗೌಡ ಪಾಟೀಲ ಹಾಗೂ ಬೈಲಹೊಂಗಲ ತಾಲೂಕ ಹಣಬರಹಟ್ಟಿ ಗ್ರಾಮದ ಶ್ರೀ ನೇವಿಚಂದ ಬಿಲ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಈರಣಗೌಡ ಪಾಟೀಲ ಮಾತನಾಡಿ, ಕೆಎಲ್‍ಇ ಸಂಸ್ಥೆಯು ಗ್ರಾಮೀಣ ಯುವಕರಿಗೆ ಉತ್ತಮವಾದ ಕೃಷಿ ಶಿಕ್ಷಣ ನೀಡುತ್ತಿದ್ದು, ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಗಳು ಕೃಷಿಯಲ್ಲಿ ಸ್ವಉದ್ಯೋಗ ಕೈಗೊಂಡು ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡುವುದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

 

ಅದೇರೀತಿ, ಶ್ರೀ ನೇಮಿಚಂದ ಬಿಲ್ ಮಾತನಾಡಿ, ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ಭೂಮಿಯ ಫಲವತ್ತತೆ ಉತ್ತಮಗೊಂಡು ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕೇಂದ್ರದ ವಿಜ್ಞಾನಿ ಶ್ರೀ ಜಿ. ಬಿ. ವಿಶ್ವನಾಥ, ಹಿಂಗಾರು ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ರೈತ ಹಾಗೂ ರೈತ ಮಹಿಳೆಯರಿಗೆ ತರಬೇತಿ ನೀಡಿದರು. ವಿಜ್ಞಾನಿ ಎಸ್. ಎಮ್. ವಾರದ ಸಂಸ್ಥಾಪನಾ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನಿ ಪ್ರವೀಣ ಯಡಹಳ್ಳಿ ಸ್ವಾಗತಿಸಿದರು. ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಕೃಷಿ ತರಬೇತಿ ಹಾಗೂ ಸಂಶೋಧನಾ ವಿದ್ಯಾಲಯದ ಪ್ರಾಚಾರ್ಯ ಕುಮಾರಿ ಪ್ರಿಯಂಕಾ ಬೋಳೆತ್ತಿನ ಹಾಗೂ ಸಿಬ್ಬಂದಿ ವರ್ಗ ಹಾಗೂ ನೇಸರಗಿ, ಮತ್ತಿಕೊಪ್ಪ ಹಾಗೂ ಮೊಹರೆ ಗ್ರಾಮದ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum