Belagavi News In Kannada | News Belgaum

ಲಖನ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

🌐 Belgaum News :

ಲಖನ್ 2ನೇ ಅಭ್ಯರ್ಥಿ ಮಾಡಿ – ಬಾಲಚಂದ್ರ ಜಾರಕಿಹೊಳಿ

 

ಗೋಕಾಕ  : ಡಿಸೆಂಬರ್ ತಿಂಗಳಲ್ಲಿ ಜರುಗಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಮಾಡಿ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡರು.

 

ಶನಿವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ‍್ಸ್ ಸಭಾಭವನದಲ್ಲಿ ಅರಭಾವಿ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಲಖನ್ ಜಾರಕಿಹೊಳಿ ಅವರಿಗೆ ಸ್ಪರ್ಧಿಸಲು ಪಕ್ಷವು ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಿಜೆಪಿಯಿಂದ ಇಬ್ಬರೂ ಅಭ್ಯರ್ಥಿಗಳು ಪರಿಷತ್‌ಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.

ಕಳೆದ ೨೦೧೯ ರಲ್ಲಿ ಜರುಗಿದ ವಿಧಾನಸಭಾ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ನಂತರ ಬದಲಾದ ಸ್ಥಿತಿಯಲ್ಲಿ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡು ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಪ್ರಚಾರ ಕೈಗೊಂಡು ಅಂಗಡಿಯವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಜೆಪಿಯ ಮೊದಲನೇ ಅಭ್ಯರ್ಥಿಯಾಗಿ ಮಹಾಂತೇಶ ಕವಟಗಿಮಠ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾದಂತಾಗಿದೆ.

 

ಲಖನ್ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಪಕ್ಷವು ಘೋಷಿಸಿದರೆ ನಿಶ್ಚಿತವಾಗಿಯೂ ಎರಡೂ ಸ್ಥಾನಗಳು ಬಿಜೆಪಿ ಮಡಿಲಿಗೆ ಬೀಳಲಿವೆ. ಇದಕ್ಕೆ ಪಕ್ಷದ ಮುಖಂಡರು ಅವಕಾಶ ಮಾಡಿ ಕೊಡಬೇಕು. ಅಲ್ಲದೇ ಲಖನ್ ಅವರು ಜಿಲ್ಲೆಯಲ್ಲಿ ತಮ್ಮದೇಯಾದ ಕಾರ್ಯಕರ್ತರ ಪಡೆಯ ಜೊತೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನೆಲ್ಲ ಗಮನಿಸಿ ಲಖನ್ ಅವರನ್ನು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯನ್ನಾಗಿಸಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.

 

ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿದರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಬಂಡಾರಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಸಂದೀಪ ದೇಶಪಾಂಡೆ, ಗೋವಿಂದ ಕೊಪ್ಪದ, ಮುತ್ತೆಪ್ಪ ಮನ್ನಾಪೂರ, ಆನಂದ ಮೂಡಲಗಿ, ಪ್ರಕಾಶ ಮಾದರ, ಮಂಗಲಾ ಹಿರೇಮಠ, ಈರಣ್ಣ ಢವಳೇಶ್ವರ, ಮಹಾಂತೇಶ ಕುಡಚಿ, ಪರಸಪ್ಪ ಬಬಲಿ, ಅರಭಾವಿ ಮಂಡಲ ವಿವಿಧ ಮೋರ್ಚಾಗಳ ಅಧ್ಯಕ್ಷರಾದ ವಾಸಂತಿ ತೇರದಾಳ, ತಮ್ಮಣ್ಣ ದೇವರ, ಪ್ರಮೋದ ನುಗ್ಗಾನಟ್ಟಿ, ಇಕ್ಬಾಲ್ ಸರ್ಕಾವಸ್, ನಾಗಪ್ಪ ಕುದರಿ, ಯಲ್ಲಾಲಿಂಗ ವಾಳದ, ಬಿಜೆಪಿ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅರಭಾವಿ ಗುಡ್ಡದವಾರಿಯಲ್ಲಿ ಮತಗಟ್ಟೆ ಅಧ್ಯಕ್ಷರ ಮನೆಗಳಿಗೆ ನಾಮಫಲಕಗಳನ್ನು ಅಂಟಿಸಲಾಯಿತು.

📱 Read Top News, Belgaum News Updates, Belagavi News in Kannada, Latest News on News Belgaum