Belagavi News In Kannada | News Belgaum

ಬೆಳಗಾವಿಯಲ್ಲಿ ಏಕಕಾಲಕ್ಕೆ 13 ಮನೆಗಳ ದರೋಡೆ

🌐 Belgaum News :

ಬೆಳಗಾವಿ: ಇತ್ತೀಚೆಗೆ ಗಡಿ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿದ್ದು, ಜನ ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ. ಕಳ್ಳರ ಗ್ಯಾಂಗೊಂದು ಲಾಂಗು, ಮಚ್ಚು ಹಾಗೂ ಪಿಸ್ತೂಲ್‌ ಹಿಡಿದು ಮನೆ ಕಳ್ಳತನ ಮಾಡ್ತಿದೆ. ಈವರೆಗೂ 20ಕ್ಕೂ ಹೆಚ್ಚು ಮನೆಗಳ್ಳತನದ ಪ್ರಕರಣಗಳು ವರದಿಯಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ಗಡಿಯ ಕಾಗವಾಡ ತಾಲೂಕಿನ ಐನಾಪೂರ ಹಾಗೂ ಮೋಳೆ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನವಾಗಿರುವ ಪ್ರಕರಣಗಳು ಕಂಡುಬಂದಿವೆ. ಈ ಪ್ರಕರಣಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳ ಹಿಂದೆ ಐನಾಪುರ ಪಟ್ಟಣದ ಹೃದಯಭಾಗದಲ್ಲಿರುವ 13 ಮನೆಗಳ ಬೀಗ ಮುರಿದು ಏಕಕಾಲಕ್ಕೆ ಕಳ್ಳತನ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ, ನಗದು ಹಣ ಹೀಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಎಲ್ಲೆಲ್ಲಿ ಎಷ್ಟು ಕಳ್ಳತನ?

ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಸಿದ್ದು ದಶರಥ ಜಾಧವ ಎಂಬುವವರ ಮನೆಯಲ್ಲಿ 70ಗ್ರಾಂ ಚಿನ್ನಾಭರಣ, 10ಗ್ರಾಂ ಬೆಳ್ಳಿ ಮತ್ತು 20 ಸಾವಿರ ನಗದು ಕಳ್ಳತನವಾಗಿದೆ. ಇನ್ನೂ ಬಸಪ್ಪ ವಡಿಯರ ಮನೆಯಲ್ಲಿ 120ಗ್ರಾಂ ಚಿನ್ನಾಭರಣ, 100ಗ್ರಾಂ ಬೆಳ್ಳಿ ಆಭರಣ 10 ಸಾವಿರ ನಗದು ಸೇರಿದಂತೆ 13 ಮನೆಗಳ ಬೀಗ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಇಂದು ನಸುಕಿನ ಜಾವ ಮೋಳೆ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಮನೆ ಕಳ್ಳತನವಾಗಿದ್ದು, ಮೋಳೆ ಗ್ರಾಮದ ಸೇವಂತ ರೂಪನವರ ಮನೆಯಲ್ಲಿ 120ಗ್ರಾಂ ಬಂಗಾರ, ಅರ್ಧ ಕೆಜಿ ಬೆಳ್ಳಿ ಹಾಗೂ 5,000 ನಗದು ಹಣ ಕಳ್ಳತನವಾಗಿದೆ‌.

ಕಳ್ಳತನ ನಡೆದ ಸ್ಥಳಕ್ಕೆ ಅಥಣಿ ಡಿವೈಎಸ್‌ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಪಾಟೀಲ ಹಾಗೂ ಅಥಣಿ ಪಿಎಸ್​ಐ ರಬಕವಿ ಭೇಟಿ ನೀಡಿ ಪರಶೀಲಿಸಿದ್ದು, ಮನೆಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕಳ್ಳತನದ ನಡೆಯುತ್ತಿದ್ದನ್ನು ರಾತ್ರಿ 12 ಗಂಟೆ ಸುಮಾರಿಗೆ ಸ್ಥಳೀಯ ಓರ್ವ ವ್ಯಕ್ತಿ ನೋಡಿ ಗೆಳೆಯರಿಗೆ ಮಾಹಿತಿ ನೀಡಿದ್ದಾನೆ. ಗೆಳೆಯರೆಲ್ಲರೂ ಸೇರಿ ಕಳ್ಳರನ್ನ ಹಿಡಿಯಲು ತೆರಳಿದ ವೇಳೆ, ಕಳ್ಳರು ಆ ವ್ಯಕ್ತಿಗಳಿಗೆ ಮಾರಕಾಸ್ತ್ರಗಳನ್ನು ತೋರಿಸಿದ್ದಾರೆ. ಇದರಿಂದ ಭಯಭೀತರಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇತ್ತೀಚೆಗೆ ಗಡಿ ಭಾಗದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಗ್ರಾಮೀಣ ಭಾಗದ ಜನರು ರಾತ್ರಿ ಹೊತ್ತು ಓಡಾಡಲು ಹೆದರುತ್ತಿದ್ದಾರೆ. ಈ ಖದೀಮರನ್ನು ಪೊಲೀಸ್​ ಇಲಾಖೆ ಆದಷ್ಟು ಬೇಗ ಬಂಧಿಸಿ ಗ್ರಾಮದಲ್ಲಿ ಭಯಮುಕ್ತ ವಾತಾವರಣ ಕಲ್ಪಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum