Belagavi News In Kannada | News Belgaum

ರಸ್ತೆ ಪುನರ್ ನಿರ್ಮಾಣಕ್ಕೆ 17.49 ಕೋಟಿ ರೂ. ಮಂಜೂರು

🌐 Belgaum News :

ಹುಕ್ಕೇರಿ:  ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದೆನಿಸಿರುವ ರಾಜಾ ಲಖಮಗೌಡ ಜಲಾಶಯ ಹಾಗೂ ರಾಷ್ಟ್ರೀಯ ಹೆದ್ದಾರಿ ನಂ.4 ರ ಮಾರ್ಗ ನಡುವಿನ ಹುಕ್ಕೇರಿ ತಾಲೂಕಿನ ಜಿನರಾಳ ಕ್ರಾಸ್-ಹಿಡಕಲ್ ಡ್ಯಾಮ್ ರಸ್ತೆ ಇನ್ನು ಮುಂದೆ ಹೊಸ ರೂಪ ಪಡೆದು ಸುಗಮ ಸಂಚಾರಕ್ಕೆ ಕಾರಣವಾಗಲಿದೆ.

 

ಈ ರಸ್ತೆ ಸಂಪರ್ಕದ ಮೂಲಕ ಬೆಳಗಾವಿ, ಸಂಕೇಶ್ವರ, ಗೊಡಚಿನಮಲ್ಕಿ, ಗೋಕಾಕ, ಗೋಕಾಕಪಾಲ್ಸ್ ಮತ್ತು ಮಹಾರಾಷ್ಟ್ರ ಕಡೆಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದೊಂದು ಸಿಹಿ ಸುದ್ಧಿಯಾಗಿದೆ. ಜಿನರಾಳ್ ಕ್ರಾಸ್-ಹಿಡಕಲ್ ಡ್ಯಾಮ್ ನಡುವಿನ ಸುಮಾರು 14 ಕಿ.ಮೀ. ರಸ್ತೆಯು ಸಂಪೂರ್ಣ ನವೀಕರಣಗೊಳ್ಳಲಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸುಮಾರು 17.49 ಕೋಟಿ ರೂ ಮಂಜೂರಾಗಿದೆ. ಈ ನವೆಂಬರ್ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ.

 

ಜಿನರಾಳ್ ಕ್ರಾಸ್-ಹಿಡಕಲ್ ಡ್ಯಾಮ್ ರಸ್ತೆಯು ಸುಸಜ್ಜಿತವಾಗಿ ಸುಗಮ ಸಂಚಾರಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಯೋಜನೆಯಲ್ಲಿ ಅಳವಡಿಸಲಾಗಿದೆ. ಈಗಿನಂತೆಯೇ ಸುಮಾರು 7 ಮೀಟರ್‍ಗೆ ಪುನರ್ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲದೇ ರಸ್ತೆಯ ಮಾರ್ಗದುದ್ದಕ್ಕೂ ಅಗತ್ಯ ಇರುವ ಕಡೆಗಳಲ್ಲಿ ಸಿಡಿ ನಿರ್ಮಾಣ, ಅಲ್ಲಲ್ಲಿನ ರಸ್ತೆ ತಿರುವುಗಳ ಮಾಹಿತಿ, ಸುತ್ತಮುತ್ತಲಿನ ಗ್ರಾಮಗಳ ನಾಮಫಲಕಗಳ ಅಳವಡಿಕೆ, ರೋಡ್ ಸ್ಟಡ್, ರಸ್ತೆ ಪಿಠೋಪಕರಣ ಸೇರಿದಂತೆ ಇತರೆ ಕೆಲಸಗಳು ಕಾಮಗಾರಿಯಲ್ಲಿ ಒಳಗೊಂಡಿವೆ.

 

ಈ ರಸ್ತೆ ಪುನರ್ ನಿರ್ಮಾಣ ಮಂಜೂರಾತಿಯಲ್ಲಿ ಕ್ಷೇತ್ರದ ಶಾಸಕರೂ ಆದ ಅರಣ್ಯ, ಆಹಾರ, ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರ ಕಾಳಜಿ, ಮುತುರ್ವಜಿ ಸಾಕಷ್ಟಿದೆ. ಕಾಮಗಾರಿ ಮಂಜೂರಾತಿ ಆಗುವವರೆಗೂ ಇಲಾಖೆಯ ಕೇಂದ್ರ ಕಚೇರಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದರು. ಜತೆಗೆ ಬೆಂಗಳೂರಿನ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು.

 

ಇನ್ನು ಹುಕ್ಕೇರಿಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಎಂಜನೀಯರರು ಕೂಡ ಕಾಲ ಕಾಲಕ್ಕೆ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಮಾರ್ಗದಲ್ಲಿ ಸಂಗಮ ಸಕ್ಕರೆ ಕಾರ್ಖಾನೆ, ಜಲಾಶಯ, ತೋಟಗಾರಿಕೆ ತರಬೇತಿ ಕೇಂದ್ರ, ಪಾಶ್ಚಾಪುರ ಬಳಿ ರೈಲ್ವೆ ಮಾರ್ಗ, ವಿದ್ಯುತ್ ಉತ್ಪಾದನಾ ಘಟಕ ಸೇರಿದಂತೆ ಮಹತ್ವದ ಕಚೇರಿಗಳಿವೆ. ಹಾಗಾಗಿ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳ ಸಂಚಾರವಿದೆ.

 

ರಸ್ತೆ ದು:ಸ್ಥಿತಿಯಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಹಳಹಳಿಸುತ್ತಲೇ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಆದರೆ, ಇದೀಗ ಈ ರಸ್ತೆಯ ಪುನರ್ ನಿರ್ಮಾಣ ಆಗಲಿರುವುದು ಈ ಭಾಗದ ಪ್ರಯಾಣಿಕರ ಹರ್ಷಕ್ಕೆ ಕಾರಣವಾಗಿದೆ.

 

ವೃತ್ತ ನಿರ್ಮಾಣಕ್ಕೆ ಪ್ರಸ್ತಾವ :
ಈ ಮಾರ್ಗ ನಡುವಿನ ಬಡಕುಂದ್ರಿ ಡೈಕ್ ರಸ್ತೆ ಬಳಿಯ ಬಾಗಲಕೋಟ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹತ್ತಿರದ ಸ್ಥಳವನ್ನು ಕಪ್ಪು ಸ್ಥಳ (ಬ್ಲ್ಯಾಕ್ ಸ್ಪಾಟ್) ಎಂದು ಗುರುತಿಸಲಾಗಿದೆ. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಟ್ರಾಫಿಕ್ ಐಲ್ಯಾಂಡ್ ಮಾದರಿಯಲ್ಲಿ ಹೊಸ ವೃತ್ತ ನಿರ್ಮಿಸುವ ಯೋಜನೆ ರೂಪಿಸಿದ್ದು ಈ ಯೋಜನೆ ಮಂಜೂರಾತಿಗೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿದೆ.

ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ ಜಿನರಾಳ್ ಕ್ರಾಸ್-ಹಿಡಕಲ್ ಡ್ಯಾಮ್ ನಡುವಿನ ರಸ್ತೆಯನ್ನು ಪುನರ್ ನಿರ್ಮಿಸಲಾಗುವುದು. ಜನ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಬರುವ ದಿನಗಳಲ್ಲಿ ಕ್ಷೇತ್ರದ ಮತ್ತಷ್ಟು ರಸ್ತೆಗಳನ್ನು ನವೀಕರಣಗೊಳಿಸಲಾಗುವುದು.

ಉಮೇಶ ಕತ್ತಿ, ಸಚಿವರು

📱 Read Top News, Belgaum News Updates, Belagavi News in Kannada, Latest News on News Belgaum