Belagavi News In Kannada | News Belgaum

ಜನಸ್ವರಾಜ್ ಅಲ್ಲ ಜನಬರ್ಬಾದ್ ಯಾತ್ರೆ: ಸಿದ್ದರಾಮಯ್ಯ ಟೀಕಾ ಪ್ರಹಾರ

🌐 Belgaum News :

ಬೆಂಗಳೂರು:ಕೊರೋನಾ ಹಾಗೂ ಮಳೆಅವಾಂತರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.  ಅರ್ಧ ರಾಜ್ಯವೇ ಜಲಾವೃತಗೊಂಡು  ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ಆದರೆ ರಾಜ್ಯ ಸರ್ಕಾರ  ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಜನಸ್ವರಾಜ್ ಅಲ್ಲ, ಇದು ಜನಬರ್ಬಾದ್ ಯಾತ್ರೆ ಎಂದು ಲೇವಡಿ ಮಾಡಿದ್ದಾರೆ. ಜೊತೆಗೆ ಜನಬರ್ಬಾದ್ಯಾತ್ರೆ ಎಂದು ಹ್ಯಾಶ್ ಟ್ಯಾಗ್ ಮಾಡಿದ್ದಾರೆ.

‘ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ, ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ಬಿಜೆಪಿ ಸರಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಿಮ್ಮ ಹನಿಮೂನ್ ಕಾಲ ಮುಗಿದಿದೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ, ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ, ರಾಗಿ, ಜೋಳ, ತರಕಾರಿ, ಬಾಳೆ, ತೆಂಗು ಎಲ್ಲವೂ ನಾಶವಾಗಿದೆ. ರೈತರು ಕಣ್ಣೀರಿನಿಂದ ಕೈ ತೊಳೆದುಕೊಳ್ಳುತ್ತಿದ್ದಾರೆ. ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ.   ಮೊದಲು ಅಧಿಕಾರಿಗಳ ತಂಡ ಕಟ್ಟಿಕೊಂಡು ಮಳೆಪೀಡಿತ ಪ್ರದೇಶಗಳಿಗೆ ಸಚಿವರು ಹೋಗಿ, ಮಳೆ ನಷ್ಟದ ಅಂದಾಜು ನಡೆಸಿ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ ನೀಡಿ. ಗಂಜಿ ಕೇಂದ್ರಗಳನ್ನುತೆರೆಯಲು ಹೇಳಿ. ನಷ್ಟದ ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಮಾಡಿ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

//////

📱 Read Top News, Belgaum News Updates, Belagavi News in Kannada, Latest News on News Belgaum