Belagavi News In Kannada | News Belgaum

ಆಮಿಷಕ್ಕೆ ಬಲಿಯಾಗಬಾರದು. ಯಾರು ಯಾರನ್ನೇ ಭೇಟಿಯಾದ್ರು , ನೀವು ಪಕ್ಷದ ಪರವಾಗಿ ಇರಬೇಕು ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

🌐 Belgaum News :

ರಾಯಬಾಗ : ” ಕಾಂಗ್ರೆಸ್ ಕೊರೊನಾ, ಪ್ರವಾಹ ಸಂದರ್ಭದಲ್ಲಿ ನಮ್ಮದೆಯಾದ ಸೇವೆ ಮಾಡಿದೆ. ಆದರೆ ಆ ಸಮಯದಲ್ಲಿ ಜನರ ಸೇವೆ ಮಾಡಲಿಕ್ಕೆ ಬಿಜೆಪಿ ಬರದೇ ಇರೋರು , ಈಗ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಲಿ ಕೊಡಲು ಹೊರಟಿದ್ದಾರೆ.

 

ತಾವು ಯಾರು ಸಹ ಆಮಿಷಕ್ಕೆ ಬಲಿಯಾಗಬಾರದು. ಯಾರು ಯಾರನ್ನೇ ಭೇಟಿಯಾದ್ರು , ನೀವು ಪಕ್ಷದ ಪರವಾಗಿ ಇರಬೇಕು ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

 

ರಾಯಬಾಗ ಮತ್ತು ಕುಡಚಿ ಮತಕ್ಷೇತ್ರದಲ್ಲಿ ಗುರುವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ” ಕಾಂಗ್ರೆಸ್ ಪಕ್ಷವೂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಅದೇ ರೀತಿ ಕಾರ್ಯಕರ್ತರೂ ಕೂಡಾ ಬಹಳ ಗಟ್ಟಿಯಾಗಿ ಕೆಲಸಗಳನ್ನು ಮಾಡಬೇಕು.

 

ಪ್ರಜ್ಞಾವಂತರಿರುವ ನೀವು ಯಾವುದೇ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ” ಎಂದರು.

ಪಕ್ಷೇತರ ಅಭ್ಯರ್ಥಿಯಿಂದ ಕನ್ಪೂಜ್ : ವಿಧಾನಪರಿಷತ್ ಚುನಾವಣೆ ಮೂರನೇಯ ವ್ಯಕ್ತಿಯಿಂದ ರಂಗೇರಿದೆ. ಪಕ್ಷೇತರ ಅಭ್ಯರ್ಥಿ ಟೋಟಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಫುಲ್ ಕನ್ಪೂಜ್ ಮಾಡುತ್ತಿದ್ದಾರೆ.

ಶಾಮ ಘಾಟಗೆಯವರನ್ನು ಭೇಟಿಯಾಗುತ್ತಾರೇ, ಮತ್ತೊಂದಡೆ ರಾಜು ಕಾಗೇ, ಇನ್ನೊಂದಡೆ ಬಿಜೆಪಿ ಶಾಸಕ ಪಿ. ರಾಜುಯವರನ್ನು ಭೇಟಿಯಾಗ್ತಾರೆ. ಕೊನೆಗೆ ಎಲ್ಲರೂ ಫುಲ್ ಕನ್ಪೂಜ್ ಮಾಡಿದ್ದಾರೆ ಎಂದು ಹಾಸ್ಯಾಸ್ಪದವಾಗಿ ನುಡಿದರು.

 

ನಾವು ಯಾರು ಕೂಡಾ ‘ ಗರ್ದಿ ಗಮ್ಮತ್ ನಲ್ಲಿ ಸೋಲಬಾರದು’. ಅವರು ತಾಜ್ ಮಹಲ್ , ದೆಹಲಿ ಕುತುಬ್ ಮಿನಾರ್, ಹೈದರಾಬಾದ್ ನಿಜಾಮ್ ಕೋಟೆ, ಮೈಸೂರು ಅರಮನೆ ಯಾವುದೇ ಚಿತ್ರ ತೋರಿಸಲಿ, ನೀವು ಮಾತ್ರ ಬದಲಾಗಬಾರದು. ಆ ವ್ಯಕ್ತಿ ಇನ್ನೂ ಘಾಟಗಿಯವರ ಮನೆಗೆ ಎಷ್ಟು ಬಾರಿ ಬರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

 

ದಪ್ಪ ಚರ್ಮದ ಸರ್ಕಾರ : ಬಿಜೆಪಿ ದಪ್ಪ ಚರ್ಮದ ಸರ್ಕಾರ. ಇದಕ್ಕೆ ಕಿವಿ, ಕಣ್ಣು ಏನು ಇಲ್ಲ. ಆ ರೀತಿಯಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವರ್ತನೆ ಮಾಡುತ್ತಿದೆ. ಅದಕ್ಕೆ ಅಂಕುಶ ಹಾಕಬೇಕಾದ್ರೆ, ಈ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನಿಯಂತ್ರಣ ಮಾಡಲೇ ಬೇಕು ಎಂದು ವಿನಂತಿಸಿದರು.

 

ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಚನ್ನರಾಜ್ ಹಟ್ಟಿಹೊಳಿ ಸ್ಪರ್ಧೆ ಮಾಡಿದ್ದು, ಮತ ನೀಡಿ ಆಶೀರ್ವಾದ ಮಾಡಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದಂತ ಕಾರ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ ಹಾಕಬೇಕು ಎಂದರು.

 

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ನೂರು ವರ್ಷದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಪರಿಷತ್ ಗೆ ಸ್ಪರ್ಧೆ ಮಾಡಿದ್ದೇನೆ. ನನ್ನ ಸೌಭಾಗ್ಯ, ಕಾಂಗ್ರೆಸ್ ಪಕ್ಷ ಯುವಕರಲ್ಲಿ ವಿಶ್ವಾಸ ಇಟ್ಟು ಟಿಕೆಟ್ ನೀಡಿದೆ. ಟಿಕೆಟ್ ಸಿಗಬೇಕಾದ್ರೆ, ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಆಶೀರ್ವಾದ ಇದ್ದಾಗ ಮಾತ್ರ ಸಿಗಲಿದೆ ಎಂದರು.

 

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾತನಾಡಿ, ಜನರ ಬೇಡಿಕೆಯಂತೆ 18 ಕೋಟಿ ವೆಚ್ಚದಲ್ಲಿ ರಾಯಬಾಗ ರೈಲ್ವೆ ಓರ್ ಬ್ರೀಡ್ಜ್ ನಿರ್ಮಾಣ ಮಾಡಿಕೊಡಲಾಗಿದೆ. ಸಂಸದರಾಗಿರುವ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದೇ ರೀತಿ ಚನ್ನರಾಜ್ ಹಟ್ಟಿಹೊಳಿಯವರನ್ನು ಗೆಲ್ಲಿಸಿದ್ರೆ ಈ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡಲಿದ್ದಾರೆಂಬ ಭರವಸೆ ಇದೆ ಎಂದು ಹೇಳಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಎಸ್.ಬಿ.ಘಾಟಗೆ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ಕಾಂಗ್ರೆಸ್ ಮುಖಂಡರಾದ ಧುಳಗೌಡ ಪಾಟೀಲ, ಮಹೇಶ ತಮ್ಮಣ್ಣವರ, ಮಹಾವೀರ ಮೋಹಿತೆ, ಈರನಗೌಡಾ ಪಾಟೀಲ, ಸದಾಶಿವ ಜಯಸಿಂಗ್ ಸೇರಿದಂತೆ ಇತರರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum