Belagavi News In Kannada | News Belgaum

ಭಾರತವನ್ನು ಒಗ್ಗೂಡಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ : ಸಿಎಂ ಬೊಮ್ಮಾಯಿ

ಈ ದಿನ ಸಂವಿಧಾನ ವನ್ನು ಅಂಗೀಕರಿಸಿದ ಮಹತ್ವದ ದಿನ

ದಾವಣಗೆರೆ :  ಭಾರತವನ್ನು ಒಗ್ಗೂಡಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಂವಿಧಾನ ದಿನದ ಅಂಗವಾಗಿ ದಾವಣಗೆರೆಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿದ ನಂತರ ಮಾತನಾಡಿದರು.

 

ಈ ದಿನ ಸಂವಿಧಾನ ವನ್ನು ಅಂಗೀಕರಿಸಿದ ಮಹತ್ವದ ದಿನ. ಭಾರತದ ಸಂವಿಧಾನ ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಾಮಾಜಿ, ಆರ್ಥಿಕ, ಧಾರ್ಮಿಕ ಚಟುವಟಿಕೆಗಳಿಗೆ ಸ್ವಾತಂತ್ರ್ಯ ಜೊತೆಗೆ ಸಮಾನತೆ, ಭ್ರಾತೃತ್ವ, ಪರಸ್ಪರ ಪ್ರೀತಿ ವಿಶ್ವಾಸ, ಎಲ್ಲ ಧರ್ಮೀಯರ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಈ ಸಂವಿಧಾನ ಒಳಗೊಂಡಿದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಈ ಸಂವಿಧಾನ. ರಚನೆ ಆಗಿದೆ ಎಂದು ತಿಳಿಸಿದರು.

 

ಅಂಬೇಡ್ಕರ್ ಅವರು ಬಹಳ ದೊಡ್ಡ ಮಾನವತಾವಾದಿ. ಬುದ್ಧ, ಬಸವ ತತ್ವಜ್ಞಾನಿಗಳಿಂದ ಪ್ರಭಾವಿತರಾಗಿ ಅವರ ವಿಚಾರಧಾರೆಗಳುನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದಾಗಿದೆ. ಅಂಬೇಡ್ಕರ್ ಅವರು ಆಧುನಿಕ ಭಾರತದ ಪಿತಾಮಹ. 75 ವರ್ಷಗಳಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದರೂ ಕೂಡ ನಮ್ಮ ದೇಶದಲ್ಲಿ ಅಂತ:ಕರಣ ಉಳಿದಿದೆ.

 

ಸಂವಿಧಾನದ ಬಲದಿಂದ ಈ ಅಂತ:ಕರಣ ಉಳಿದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ, ಶೋಷಣೆಗೆ ಒಳಗಾದ ವ್ಯಕ್ತಿಯೂ ಕೂಡ ಧ್ವನಿ ಎತ್ತಿ ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಅವಕಾಶ ಮಾಡಿಕೊಟ್ಟ ಡಾ.ಅಂಬೇಡ್ಕರ್ ರವರು ಆಧುನಿಕ ಭಾರತದಲ್ಲಿ ಮಾನವೀಯ ಗುಣಗಳನ್ನು ಸಂವಿಧಾನದಲ್ಲಿ ಎತ್ತಿಹಿಡಿದಿದ್ದಾರೆ ಎಂದು ನುಡಿದರು.

 

ನಾಗರಿಕರು ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೆನೆಪಿಸಿಕೊಳ್ಳುವುದು ಅವಶ್ಯ. ಯಾವ ದೇಶದಲ್ಲಿ ನಾಗರಿಕ ಕರ್ತವ್ಯಗಳಿರುತ್ತವೆಯೋ ಆ ದೇಶ ಬಲಿಷ್ಠವಾಗಿರುತ್ತದೆ. ನಾಗರೀಕ ಕರ್ತವ್ಯಗಳನ್ನು ಮರೆತಾಗ ಅರಾಜಕತೆ ಬರುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಲು ಪ್ರಜೆಗಳು ಜಾಗೃತರಾಗಿರುವ ಜೊತೆಗೆ ಕರ್ತವ್ಯ ಪ್ರಜ್ಞೆಯಿಂದಲೂ ಕೆಲಸ ಮಾಡಬೇಕು ಎಂದರು.

 

ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಸಂಸದ ಜಿ.ಎಂ ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.