Belagavi News In Kannada | News Belgaum

ದಕ್ಷಿಣ ಕನ್ನಡ ಮಾದರಿಯಲ್ಲಿ ನಡೀತಾ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಲವ್ವಿ ಡವ್ವಿ!?

ಭಾಗ೧

 

ದಕ್ಷಿಣ ಕನ್ನಡ ಮಾದರಿಯಲ್ಲಿ ನಡೀತಾ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಲವ್ವಿ ಡವ್ವಿ!?

ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದರೂ ಕೂಡ ಕಾಣದ ಕೈಗಳು ವ್ಯವಸ್ಥಿತವಾಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಆಸ್ಪತ್ರೆಯ ಕರ್ಮಕಾಂಡದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.

ಪ್ರಕರಣಕ್ಕೆ ಸಂಭಂದಿಸಿದಂತೆ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗಿದೆ ಎಂಬ ವಿಷಯದ ಜೊತೆಗೆ ಮೇಲಾಧಿಕಾರಿಗಳ ನಿರ್ಲಕ್ಷ್ಯ ಸದ್ಯ ತಾಲೂಕಿನ ಜನರಲ್ಲಿ ಪ್ರಶ್ನೆ ಯಾಗಿ ಎದ್ದು ಕಾಣುತ್ತಿದೆ. ಸದಾ ಒಂದಿಲ್ಲೊಂದು ಕಾರಣಗಳಿಂದ ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗುತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಕರ್ತವ್ಯ ನಿರತ ಬೆಂಗಳೂರು ಮೂಲದ ವೈದ್ಯರೊಬ್ಬರು ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

 

ಇಷ್ಟೇ ಅಲ್ಲದೆ ಪ್ರಕರಣ ಠಾಣೆಯ ಮೆಟ್ಟಿಲು ಏರುವ ಹಂತ ತಲುಪಿದ್ದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಚಿಕ್ಕೋಡಿ ಅಪರ ಜಿಲ್ಲಾ ವೈದ್ಯಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಗೊಂದಲದ ಸ್ಥಿತಿ ಎದುರಾಗಿದೆ.ಸ್ವತಹ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ತಾಲ್ಲೂಕು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿಯನ್ನು ತುಂಬಿದ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರೂ ಕೂಡ ಯಾವುದೆ ಬದಲಾವಣೆಗಳು ಕಂಡು ಬರದೆ ಇರುವದು ಅಚ್ಚರಿಗೆ ಕಾರಣವಾಗಿದೆ.ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಸಿ ಎಸ್ ಪಾಟೀಲ ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆ ಕೊರತೆ ಇರುವದು ಹಾಗೂ ರಾತ್ರಿ ಕರ್ತವ್ಯನಿರತ ಸಿಬ್ಬಂದಿ ಕೆಲಸಕ್ಕೆ ಬರದೆ ಇರುವದು, ಸೇರಿದಂತೆ ಸರ್ಕಾರಿ ಆಸ್ಪತ್ರೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಡುತ್ತಿದ್ದು ಕೆಲವು ಜನರ ಅಸಡ್ಡೆಯಿಂದಾಗಿ ಇಡೀ ಆಸ್ಪತ್ರೆ ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ.

 

ಹಲವು ಸಿಬ್ಬಂದಿ ಕರ್ತವ್ಯದ ವೇಳೆ ಪಾನಮತ್ತರಾಗಿರುತ್ತಾರೆ ಎಂಬುದು ಒಂದು ಕಡೆಯಾದರೆ
ಬೆಂಗಳೂರು ಮೂಲದ ವೈದ್ಯನ ಮೇಲೆ ಲೈಂಗಿಕ ಕಿರುಕುಳ ಹಿನ್ನೆಲೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದ್ದು ಮಹಿಳಾ ಸಿಬ್ಬಂದಿ ಜೊತೆಗಿನ ಅಸಭ್ಯ ವರ್ತನೆ ಕಾರಣವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಹಲವಾರು ವರ್ಷಗಳಿಂದ ಆಸ್ಪತ್ರೆಯ ವಿವಿಧ ವಿಭಾಗದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರುವ ಗುತ್ತಿಗೆ ಸಿಬ್ಬಂದಿಗೆ ಪಿ ಎಪ್ ಇಎಸ್ ಐ ವ್ಯವಸ್ಥೆ ಮಾಡಲಾಗುತ್ತಿಲ್ಲ,ಸರ್ಕಾರ ನಿಗದಿ ಪಡಿಸಿದ ಕನಿಷ್ಟ ವೇತನವನ್ನು ಕೊಡಲಾಗುತ್ತಿಲ್ಲ ಅಷ್ಟೇ ಅಲ್ಲದೆ ಮನಸಿಗೆ ಬಂದಾಗ ಕೆಲವರನ್ನು ಕೆಲಸದಿಂದ ತೆಗೆದು ಹಾಕುವದು ಹೊಸಬರನ್ನು ನೇಮಕ ಮಾಡಿಕೊಳ್ಳುವದು ನಡೆಯುತ್ತಿದೆ ಅಷ್ಟೇ ಅಲ್ಲದೆ ಹಲವು ಸಿಬ್ಬಂದಿ ಕುಡಿದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಸಾರ್ವಜನಿಕ ಆರೊಪಗಳು ಕೇಳಿಬಂದಿವೆ.

 

ಇನ್ನೂ ಈ ಮೊದಲು ಬೆಳಗಾವಿ ಜಿಲ್ಲಾ ಆಸ್ಪತ್ರೆ ಹಾಗೂ ಅಥಣಿ ತಾಲ್ಲೂಕು ಆಸ್ಪತ್ರೆ ಯಲ್ಲಿ ಮಕ್ಕಳ ಕಳ್ಳತನ ಪ್ರಕರಣಗಳು ನಡೆದಿದ್ದು ಹೆರಿಗೆಗೆ ಮೂರರಿಂದ ಆರು ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದರೂ ಕೂಡ ಸೆಂಟ್ರಲೈಜ್ಡ ಸಿಸಿ ಕ್ಯಾಮರಾ ಸಿಸ್ಟಮ್ ಇಲ್ಲದೆ ಇರುವದು ಮತ್ತು ಮುಖ್ಯವೈದ್ಯಾಧಿಕಾರಿ ಕಚೇರಿಯ ಮಾನಿಟರ್ ಸ್ಕ್ರಾಲ್ ಆಗದೆ ಇರುವದು ಹಾಗೂ ಹಳೆಯ ಡಾಟಾ ಸ್ಟೋರೆಜ್ ಇಲ್ಲದೆ ಇರುವದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಇನ್ನೂ ಸಿಬ್ಬಂದಿ ರೋಸ್ಟರ್ ಪದ್ದತಿಯ ಪಾಲನೆ ಆಗದೆ ಇರುವದು ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನೀರ್ವಹಿಸುತ್ತಿರುವ ಸಿಬ್ಬಂದಿ ಮನಸಿಗೆ ಬಂದಂತೆ ವರ್ತಿಸುತ್ತಿರುವದರಿಂದ ಆಸ್ಪತ್ರೆಯ ಅಪಸವ್ಯಗಳಿಗೆ ನಾಂದಿ ಹಾಡುತ್ತಿದೆ.ಕರ್ತವ್ಯ ನಿರತ ಹಲವು ವೈದ್ಯರು ನೇಮಕಾತಿಯ ನಿಯಮಾವಳಿ ಮೀರಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು ಬಹಳಷ್ಟು ಕಾಲ ತಮ್ಮ ಖಾಸಗಿ ಆಸ್ಪತ್ರೆ ಯಲ್ಲಿ ಇರುವದು ರೋಗಿಗಳನ್ನು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಪ್ರೇರೆಪಿಸಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ಉದ್ದೇಶಪೂರ್ವಕ ತಾತ್ಸಾರ ಮಾಡುತ್ತಿರುವ ಬಗ್ಗೆಯೂ ಹಲವು ಸಾಮಾಜಿಕ ಸಂಘಟನೆಗಳಿಂದ ಆರೋಪಗಳು ಕೇಳಿ ಬರುತ್ತಿವೆ.

 

ಪೋಲಿಸ್ ಇಲಾಖೆಯಿಂದ ಅಪರಾಧಿಗಳ ಮೆಡಿಕಲ್ ಟೆಸ್ಟ ಮಾಡಿಸಲು ಹೋದಾಗ ಮತ್ತು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತಂದಾಗ ರಾತ್ರಿ ವೇಳೆಯಲ್ಲಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಇರುವದರಿಂದ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.ಇದರ ಜೊತಗೆ 108 ಸೇರಿದಂತೆ ಅಂಬುಲೆನ್ಸ ಚಾಲಕರು ಸಮಯಕ್ಕೆ ಸರಿಯಾಗಿ ಲಭ್ಯ ಇಲ್ಲದೆ ಹಲವಾರು ಬಾರಿ ತಾಲೂಕಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಇನ್ನಾದರೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಕ್ಕೆ ಕಡಿವಾಣ ಹಾಕಲು ಮೇಜರ್ ಸರ್ಜರಿ ಮಾಡುತ್ತಾರಾ ತಪ್ಪಿತಸ್ಥ ವೈದ್ಯ ಮತ್ತು ಸಿಬ್ಬಂದಿ ಮೇಲೆ ಕಾಟಾಚಾರಕ್ಕೆ ವರ್ಗಾವಣೆ ಮಾಡದೆ ಸೂಕ್ತ ತನಿಖೆ ನಡೆಸಿ ಸರಿಯಾದ ಕ್ರಮಕ್ಕೆ ಶಿಫಾರಸು ಮಾಡುತ್ತಾರಾ ಅಂತ ಕಾಯ್ದು ನೋಡಬೇಕಿದೆ.