Belagavi News In Kannada | News Belgaum

ಮನೆ ಕಳ್ಳತನ ಹಾಗೂ ರೈತರ ವಿದ್ಯುತ್ ಪಂಪ್‍ಸೆಟ್ ವಾಯರ್‍ಗಳ (ತಂತಿ) ಕಳ್ಳತನ ಜರುಗುತ್ತಿದ್ದರು ಕೂಡ ಕಳ್ಳರನ್ನು ಹಿಡಿಯಲು ಪೋಲಿಸ್‍ರು ವಿಫಲರಾಗಿದ್ದಾರೆ

ಶೇಡಬಾಳ: ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಕಳೆದ ಹಲವಾರು ದಿನಗಳಿಂದ ಸರಣಿ ಮನೆ ಕಳ್ಳತನ ಹಾಗೂ ರೈತರ ವಿದ್ಯುತ್ ಪಂಪ್‍ಸೆಟ್ ವಾಯರ್‍ಗಳ (ತಂತಿ) ಕಳ್ಳತನ ಜರುಗುತ್ತಿದ್ದರು ಕೂಡ ಕಳ್ಳರನ್ನು ಹಿಡಿಯಲು ಪೋಲಿಸ್‍ರು ವಿಫಲರಾಗಿದ್ದಾರೆ. ಇದರಿಂದಾಗಿ ತಾಲೂಕಿನ ಗ್ರಾಮಸ್ಥರು ಭಯಭೀತಗೊಂಡಿದ್ದಾರೆಂದು ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ ಆರೋಪಿಸಿದರು.

ಅವರು ರವಿವಾರ ದಿ. 28 ರಂದು ಉಗಾರ ಬುದ್ರುಕ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಅವರು ಮುಂದೆ ಮಾತನಾಡುತ್ತಾ ಕಳೆದ 3 ದಿನಗಳಿಂದ ಉಗಾರ ಬುದ್ರುಕ ಗ್ರಾಮದಲ್ಲಿ ಯಾತ ನೀರಾವರಿ ಸಂಘದ ಪಂಪ್‍ಸೆಟ್‍ಗಳಿಗೆ ಅಳವಡಿಸಲಾಗಿದ್ದ ಬೆಲೆ ಬಾಳುವ ವಿದ್ಯುತ್ ತಂತಿಗಳನ್ನು ಕಳ್ಳತನ ಮಾಡಿದ್ದಾರೆ. ಸುಮಾರು 10 ರಿಂದ 12 ಲಕ್ಷ ರೂ. ತಂತಿಗಳನ್ನು ದೋಚಿಕೊಂಡು ಹೋಗಿದ್ದಾರೆ.
ಕಳ್ಳರನ್ನು ಹಿಡಿಯಲು ಪೋಲಿಸ್‍ರು ಅಯಶಸ್ವಿಯಾಗಿರುವುದರಿಂದ ಈ ಭಾಗದ ರೈತರು ಆಕ್ರೋಶಗೊಂಡಿದ್ದಾರೆ. ಕಳ್ಳರ ಕಿರುಕುಳು ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಪೋಲಿಸ್‍ರ ವೈಫಲ್ಯ ಕುರಿತು ಸಾರ್ವಜನಿಕರು ರಸ್ತೆಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚಿಗಷ್ಟೆ ಐನಾಪೂರದಲ್ಲಿ 13 ಸರಣಿ ಮನೆಗಳ್ಳತನ, ಮೋಳೆ ಗ್ರಾಮದಲ್ಲಿ 5 ಮನೆಗಳ್ಳತನ, ಮಧಬಾಂವಿಯಲ್ಲಿ 3 ಮನೆಗಳ್ಳತನ, ಉಗಾರದಲ್ಲಿ 15 ಪಂಪ್‍ಸೆಟ್‍ಗಳ ವಿದ್ಯುತ್ ತಂತಿಗಳ ಕಳ್ಳತನ ಹೀಗೆ ದಿನಕ್ಕೊಂದರಂತೆ ತಾಲೂಕಿನ ಗ್ರಾಮಗಳಲ್ಲಿ ಕಳ್ಳತನ ಜರುಗುತ್ತಿದ್ದರೂ ಕೂಡ ಇಲ್ಲಿಯವರೆಗೆ ಕಳ್ಳರ ಬಂಧನವಾಗದೇ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ಹೇಳಿದರು.

ಈ ಭಾಗದಲ್ಲಿ ಕಳ್ಳರ ಕರಾಮತ್ತು ಯಾವ ರೀತಿ ಮುಂದುವರೆದಿದೆ ಎಂದರೇ ಮಾಜಿ ಶಾಸಕರ ವಿದ್ಯುತ್ ಪಂಪ್‍ಸೆಟ್‍ಗಳ ತಂತಿಗಳನ್ನು ಕದ್ದೊದ್ದಿದ್ದಾರೆ. ಅವರಿಗೆ ಯಾರಿದೇ ಅಂಜಿಕೆ ಅಳಕು ಇಲ್ಲ ಎಂಬುವುದನ್ನು ಕಾಣಬಹುದಾಗಿದೆ. ಕಳ್ಳತನದ ಜತೆಗೆ ನಿರ್ಜನ ಪ್ರದೇಶಗಳ ರಸ್ತೆಗಳಲ್ಲಿ ಒಬ್ಬಂಟಿಗರಾಗಿ ಸಂಚರಿಸುವ ಬೈಕ್ ಸವಾರರನ್ನು ಹೆದರಿಸಿ ಬೆದರಿಸಿ ಹಣ ದೋಚುತ್ತಿರುವ ಘಟನೆಗಳು ಜರುಗುತ್ತಿವೆ. ಕಾರಣ ಇನ್ನು ಮುಂದಾದರೂ ಪೋಲಿಸ್ ಇಲಾಖೆದವರು ಎಚ್ಚತ್ತುಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವರೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ಈ ಸಮಯದಲ್ಲಿ ಶೀತಲಗೌಡ ಪಾಟೀಲ, ಅಪ್ಪಾಸಾಬ ಚೌಗಲೆ, ಅಣ್ಣು ಖವಟಕೊಪ್ಪ, ಮನೋಹರ ಚೌಗಲೆ, ರಾಜೇಂದ್ರ ಪಾಟೀಲ, ಧನವಂತ ಅರಗೆ, ವೃಷಭ ಹೊಸುರೆ, ಸುನೀಲ ಮಹಾಜನ, ಬಾಳಾಸಾಬ ಹವಲೆ,ದಾದಾಸಾಬ ಪಾಟೀಲ, ಆದೇಶ ವಸವಾಡೆ, ಪ್ರಶಾಂತ ವಸವಾಡೆ, ಸಂಜೀವ ಹೊಸುರೆ, ಶಾಂತಿನಾಥ ಹೊಸುರೆ, ಪದಮಣ್ಣಾ ವಸವಾಟೆ, ಆದಿನಾಥ ಪಾಟೀಲ, ಪದ್ಮಜೀತ ಪಾಟೀಲ, ದಾದಾ ವಸವಾಡೆ, ಸುನೀಲ ಮಾಂಜರೆ, ಕಲ್ಲಪ್ಪ ನಾವಲಗೇರ, ದೇವೇಂದ್ರ ಸದಲಗೆ, ಬಾಹುಬಲಿ ತಮದಡ್ಡಿ, ಅರಿಹಂತ ಮಗದುಮ ಸೇರಿದಂತೆ ಅನೇಕರು ಇದ್ದರು./////